ಧರೆಗುರುಳಿದ ಬೆಂಗಳೂರಿನ ಪ್ರಸಿದ್ದ ಊರ್ವಶಿ ಚಿತ್ರಮಂದಿರ
55 ವರ್ಷಗಳ ಇತಿಹಾಸದ ಐಕಾನಿಕ್ 'ಊರ್ವಶಿ'
ಧರೆಗುರುಳಿದ ಬೆಂಗಳೂರಿನ ಪ್ರಸಿದ್ದ ಊರ್ವಶಿ ಚಿತ್ರಮಂದಿರ


ಬೆಂಗಳೂರು, 24 ಆಗಸ್ಟ್ (ಹಿ.ಸ.)

ಆ್ಯಂಕರ್:

ಸ್ಯಾಂಡಲ್‌ವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದ ಹಲವು ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದ್ದ ಬೆಂಗಳೂರಿನ ಪ್ರಸಿದ್ಧ ‘ಊರ್ವಶಿ’ ಚಿತ್ರಮಂದಿರಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಲಾಲ್‌ಬಾಗ್ ಮುಖ್ಯರಸ್ತೆಯಲ್ಲಿರುವ ಐಕಾನಿಕ್ ಸಿಂಗಲ್ ಸ್ಕ್ರೀನ್ ಚಿತ್ರಮಂದಿರವನ್ನು ನೆಲಸಮಗೊಳಿಸುವ ಕಾರ್ಯ ಸೋಮವಾರ ಆರಂಭಗೊಂಡಿದೆ.

1970ರಲ್ಲಿ ನಿರ್ಮಾಣಗೊಂಡು, ಕನ್ನಡ ಚಿತ್ರರಂಗದ ವರನಟ ಡಾ. ರಾಜ್‌ಕುಮಾರ್ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿದ್ದ ಊರ್ವಶಿ ಚಿತ್ರಮಂದಿರವು ಹಲವು ದಶಕಗಳ ಕಾಲ ಬೆಂಗಳೂರಿನ ಪ್ರಮುಖ ಸಿನಿ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿತ್ತು. 1,150ಕ್ಕೂ ಅಧಿಕ ಆಸನಗಳ ಸಾಮರ್ಥ್ಯ ಹೊಂದಿದ್ದ ಚಿತ್ರಮಂದಿರದಲ್ಲಿ ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳ 5,000ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನಗೊಂಡಿದ್ದವು.

ಸುದೀರ್ಘ ಕಾನೂನು ಹೋರಾಟ

ಮೂಲ ಭೂಮಾಲೀಕರಾದ ಬಸಟ್ಟಿ ಶೆಟ್ಟಿ ಹಾಗೂ ಗುತ್ತಿಗೆ ಪಡೆದವರ ನಡುವಿನ ಆಸ್ತಿ ವಿವಾದ ಕಾನೂನು ಹೋರಾಟಕ್ಕೆ ಕಾರಣವಾಗಿತ್ತು. ಚಿತ್ರಮಂದಿರದ ಗುತ್ತಿಗೆ ಅವಧಿ 2018ರ ಏಪ್ರಿಲ್‌ನಲ್ಲೇ ಮುಕ್ತಾಯಗೊಂಡಿತ್ತು. ಸುದೀರ್ಘ ಕಾನೂನು ಹೋರಾಟದ ಬಳಿಕ ಭೂಮಾಲೀಕರ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಜಾಗ ತೆರವುಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಜೆಸಿಬಿ ಯಂತ್ರಗಳ ಮೂಲಕ ಚಿತ್ರಮಂದಿರದ ಕಟ್ಟಡವನ್ನು ಕೆಡವಲಾಗುತ್ತಿದೆ.

ಸಿನಿರಸಿಕರಲ್ಲಿ ಬೇಸರ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರವು ಇದೇ ಊರ್ವಶಿ ಚಿತ್ರಮಂದಿರದಲ್ಲಿ ಭರ್ಜರಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಚಿತ್ರಮಂದಿರದ ನೆಲಸಮ ಕಾರ್ಯ ತೀವ್ರ ಬೇಸರ ಮೂಡಿಸಿದೆ.

ಆಧುನಿಕ 4ಕೆ ಪ್ರೊಜೆಕ್ಷನ್ ವ್ಯವಸ್ಥೆ ಹಾಗೂ ಮೆಯರ್ ಧ್ವನಿ ವ್ಯವಸ್ಥೆಯ ಮೂಲಕ ಪ್ರೇಕ್ಷಕರಿಗೆ ಅದ್ದೂರಿ ಚಿತ್ರಾನುಭವ ನೀಡುತ್ತಿದ್ದ ಊರ್ವಶಿ, ಮಲ್ಟಿಪ್ಲೆಕ್ಸ್‌ಗಳ ಯುಗದಲ್ಲಿ ಬೆಂಗಳೂರಿನ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ವೈಭವದ ಪ್ರತೀಕವಾಗಿತ್ತು.

ಉದ್ಘಾಟನೆಯಿಂದ ಹಿಡಿದು ಧರೆಗುರುಳುವವರೆಗೂ ಹಲವು ತಲೆಮಾರುಗಳ ಕನ್ನಡಿಗರ ಸಿನಿ ನೆನಪುಗಳನ್ನು ತನ್ನೊಡಲಲ್ಲಿ ಉಳಿಸಿಕೊಂಡಿದ್ದ ಊರ್ವಶಿ ಚಿತ್ರಮಂದಿರ ಇನ್ನು ಮುಂದೆ ಸಿನಿರಸಿಕರ ಸ್ಮೃತಿಪಟಲದಲ್ಲಿ ಮಾತ್ರ ಜೀವಂತವಾಗಿರಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande