


ಬಳ್ಳಾರಿ, 24 ಆಗಸ್ಟ್ (ಹಿ.ಸ.)
ಆ್ಯಂಕರ್ : ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆ.24 ರಂದು ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆದ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿಯಂತೆ ಇಂದು ಕರಡು ಮತದಾರರ ಪಟ್ಟಿ ಪ್ರಕಟ ಕುರಿತು ನಗರದ ನೂತನ ಜಿಲ್ಲಾಡಳಿತ ಭವನದ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಏಜೆಂಟರು ನಿಯಮಾನುಸಾರ ಭಾಗವಹಿಸಲು ಜಿಲ್ಲಾಡಳಿತ ಮುಕ್ತ ಅವಕಾಶ ಕಲ್ಪಿಸಿದೆ. ರಾಜಕೀಯ ಪಕ್ಷಗಳ ಮುಖಂಡರು, ಏಜೆಂಟರು ಹಾಗೂ ಕಾರ್ಯಕರ್ತರು ಮತದಾರರಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ, ಅರ್ಹರು ಪಟ್ಟಿಗೆ ಸೇರ್ಪಡೆಗೊಳ್ಳಲು ಸಹಕರಿಸಬೇಕು ಎಂದು ತಿಳಿಸಿದರು.
ಚುನಾವಣಾ ವಿಭಾಗದ ಪ್ರಕ್ರಿಯೆಗಳು ಪಾರದರ್ಶಕವಾಗಿದ್ದು, ಸ್ವೀಕೃತವಾಗುವ ಪ್ರತಿಯೊಂದು ಆಕ್ಷೇಪಣೆ ಹಾಗೂ ಮನವಿಯನ್ನು ನಿಗದಿತ ಕಾನೂನು ಪ್ರಕ್ರಿಯೆ ಮತ್ತು ಮಾರ್ಗಸೂಚಿಗಳ ಅನ್ವಯವೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳು ಅಥವಾ ತಿದ್ದುಪಡಿಗಳಿದ್ದಲ್ಲಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ಜಿಲ್ಲೆಯಲ್ಲಿ 12,29,586 ಮತದಾರರಿದ್ದರು. ಪ್ರಸ್ತುತ ಕರಡು ಪಟ್ಟಿಯ ಪ್ರಕಾರ ಒಟ್ಟು 10,06,307 ಮತದಾರರಿದ್ದಾರೆ, ಶೇ. 81.84 ರಷ್ಟು ಮತದಾರರು ನೇರವಾಗಿ ಎಸ್ಐಆರ್ ಪ್ರಕ್ರಿಯೆ ಪರಿಶೀಲನೆಗೆ ಒಳಗಾಗಿದ್ದಾರೆ. ಈ ಹಿಂದೆ 1,227 ಮತಗಟ್ಟೆಗಳಿದ್ದವು. 1,200ಕ್ಕಿಂತ ಹೆಚ್ಚು ಮತದಾರರಿರುವ ಕಡೆ 33 ಹೆಚ್ಚುವರಿ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ 1,260ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.
*ನೋಟಿಸ್ ಜಾರಿ ಮತ್ತು ವಿಚಾರಣೆ ಪ್ರಕ್ರಿಯೆ:*
ಮತದಾರರ ಪಟ್ಟಿಯ ಮ್ಯಾಪಿಂಗ್ ಆಗದ 11,914 ಹಾಗೂ ದೋಷಪೂರಿತ 25,958 ಪ್ರಕರಣಗಳು ಸೇರಿದಂತೆ ಒಟ್ಟು 37,872 ಮತದಾರರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ. ನೋಟಿಸ್ ತಲುಪಿದ ಮತದಾರರಿಗೆ ತಮ್ಮ ದಾಖಲೆಗಳನ್ನು ಹಾಜರುಪಡಿಸಲು ಕನಿಷ್ಠ 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಮುಂದಿನ ತಿಂಗಳ 1ನೇ ತಾರೀಖಿನಿಂದ ಮತದಾರರ ವಿಚಾರಣೆ ಪ್ರಕ್ರಿಯೆ ಆರಂಭವಾಗಲಿದ್ದು, ಇದಕ್ಕಾಗಿ 69 ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮತದಾರರು ತಮ್ಮ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಜೊತೆಗೆ ಚುನಾವಣಾ ಆಯೋಗ ಸೂಚಿಸಿದ ಪಟ್ಟಿಯ ಯಾವುದೇ 2 ಪೂರಕ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಕರಡು ಪಟ್ಟಿ ಕುರಿತು ಸಾರ್ವಜನಿಕರು ಅಥವಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಹೆಸರು ಕೈಬಿಟ್ಟಿರುವ ಅಥವಾ ತಪ್ಪಾಗಿರುವ ಕುರಿತು ಸಹಾಯಕ ನೋಂದಣಾಧಿಕಾರಿಗಳು ಸ್ಪಷ್ಟ ಕಾರಣಗಳನ್ನೊಳಗೊಂಡ ಆದೇಶ ಹೊರಡಿಸಲಿದ್ದಾರೆ ಎಂದರು.
ಅಧಿಕಾರಿಯ ಆದೇಶಕ್ಕೆ ತೃಪ್ತರಾಗದಿದ್ದರೆ, ಮೊದಲ ಮೇಲ್ಮನವಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ (ಜಿಲ್ಲಾಧಿಕಾರಿ) ಹಾಗೂ ಎರಡನೇ ಮೇಲ್ಮನವಿಯನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ (ಸಿಇಒ) ಸಲ್ಲಿಸಲು ಅವಕಾಶವಿದೆ ಎಂದರು.
ಮರಣ ಹೊಂದಿದ್ದಾರೆಂದು ಗುರುತಿಸಲಾದ 41,164 ಮತದಾರರ ಪೈಕಿ ಯಾರಾದರೂ ಜೀವಂತವಿದ್ದು, ತಪ್ಪಾಗಿ ಹೆಸರು ಕೈಬಿಡಲಾಗಿದ್ದರೆ ಅಂತಹವರು ಸೂಕ್ತ ದಾಖಲೆಗಳೊಂದಿಗೆ ಬಂದು ಸ್ವಯಂಪ್ರೇರಿತರಾಗಿ ಅರ್ಜಿ ಸಲ್ಲಿಸಿ ಹೆಸರು ಮರುಸೇರ್ಪಡೆ ಮಾಡಿಕೊಳ್ಳಬಹುದು. ಕರಡು ಪಟ್ಟಿಯ ಪ್ರಕ್ರಿಯೆಯ ನಂತರ ಬರುವ ಜನವರಿಯಲ್ಲಿ ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ಅಲ್ಲಿಯವರೆಗೆ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿ ಪಟ್ಟಿಯನ್ನು ಸರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
*ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ:*
ಸೆಪ್ಟೆಂಬರ್ 23 ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ 24 ರಿಂದ ಯಾವುದೇ ಹೊಸ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ. ನೋಟಿಸ್ ಜಾರಿಯಾದ 7 ದಿನಗಳ ಕನಿಷ್ಟ ಕಾಲಾವಕಾಶದ ನಂತರ ಆಕ್ಷೇಪಣೆಗಳ ಪರಿಶೀಲನೆ ಆರಂಭವಾಗಲಿದ್ದು, ಅಕ್ಟೋಬರ್ 22 ರವರೆಗೆ ವಿಲೇವಾರಿ ಕಾರ್ಯ ನಡೆಯಲಿದೆ ಎಂದರು.
*ಅಂತಿಮ ಮತದಾರರ ಪಟ್ಟಿ ಪ್ರಕಟಣೆ:*
ಎಲ್ಲಾ ಪ್ರಕ್ರಿಯೆಗಳು ಮುಕ್ತಾಯಗೊಂಡ ನಂತರ ಅಕ್ಟೋಬರ್ 27 ರಂದು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು. ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವ ಅಥವಾ ತಿದ್ದುಪಡಿ ಅಗತ್ಯವಿರುವ ಮತದಾರರು ನಮೂನೆ-6 ಸಲ್ಲಿಸುವುದು ಕಡ್ಡಾಯವಾಗಿದೆ ಎಂದರು.
ಯಾವುದೇ ಬದಲಾವಣೆ, ಸೇರ್ಪಡೆ ಅಥವಾ ತಿದ್ದುಪಡಿಗಳನ್ನು ಅಧಿಕೃತ ಅರ್ಜಿ ಸಲ್ಲಿಕೆಯ ಮೂಲಕವೇ ಮಾಡಬೇಕಾಗುತ್ತದೆ. ನಮೂನೆ-6 ರ ಜೊತೆಗೆ ಮತದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್ ಹಾಗೂ ಜೊತೆಗೆ ಇತರ ಎರಡು ಅಗತ್ಯ ದಾಖಲೆಗಳನ್ನು ಒದಗಿಸಬೇಕು. ಕರಡು ಮತದಾರರ ಪಟ್ಟಿಯಲ್ಲಿ ಕಂಡುಬರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದ್ದು, ಸಾರ್ವಜನಿಕರು ನಿಗದಿತ ಅವಧಿಯೊಳಗೆ ಆಕ್ಷೇಪಣೆ ಹಾಗೂ ಅರ್ಜಿಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ಮತದಾರರ ಪಟ್ಟಿಯಿಂದ ಅಕಸ್ಮಾತ್ ಅರ್ಹರು ಯಾರಾದರೂ ಹೊರಗುಳಿದಿದ್ದರೆ ಅವರನ್ನು ಪಟ್ಟಿಗೆ ಸೇರಿಸುವುದು ಹಾಗೂ ಯಾವುದೇ ಅನರ್ಹರು ಸೇರ್ಪಡೆಗೊಂಡಿದ್ದರೆ ಅಂತಹವರ ಹೆಸರನ್ನು ನಿಯಮಾನುಸಾರ ಪಟ್ಟಿಯಿಂದ ಕೈಬಿಡುವುದು ಚುನಾವಣಾ ವಿಭಾಗದ ಮುಖ್ಯ ಜವಾಬ್ದಾರಿಯಾಗಿದೆ. ಯಾವುದೇ ಅರ್ಹ ಮತದಾರ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಹಾಗೂ ಯಾವುದೇ ನಕಲಿ ಅಥವಾ ಅನರ್ಹ ಹೆಸರುಗಳು ಪಟ್ಟಿಯಲ್ಲಿ ಉಳಿಯದಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಎನ್., ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ್, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ರೇಣುಕಾ ಸೇರಿದಂತೆ ರಾಷ್ಟಿಯ ಮತ್ತು ರಾಜ್ಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್