
ಬೆಂಗಳೂರು, 17 ಆಗಸ್ಟ್ (ಹಿ.ಸ.):
ಆ್ಯಂಕರ್:
ದಿನಕ್ಕೊಂದು ತೆರಿಗೆ, ದಿನಕ್ಕೊಂದು ಬೆಲೆ ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಜೇಬಿಗೆ ನಿರಂತರವಾಗಿ ಕನ್ನ ಹಾಕುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ಉಚಿತ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೀಗ ನಿತ್ಯವೂ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಚಾಟಿ ಬೀಸುತ್ತಿದೆ. ವಾಹನಗಳ ಹೊಗೆ ತಪಾಸಣೆ ಶುಲ್ಕವನ್ನು ಹೆಚ್ಚಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕಿನ ಮೇಲೆ ಮತ್ತೊಂದು ಹೊರೆ ಹಾಕಿದೆ ಎಂದು ಅವರು ಟೀಕಿಸಿದ್ದಾರೆ.
ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಪಡೆಯಲು ವಿಧಿಸಲಾಗುತ್ತಿದ್ದ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ದ್ವಿಚಕ್ರ ವಾಹನಗಳ ಶುಲ್ಕವನ್ನು ₹65ರಿಂದ ₹80ಕ್ಕೆ ಹೆಚ್ಚಿಸಲಾಗಿದೆ. ತ್ರಿಚಕ್ರ ವಾಹನಗಳ ಶುಲ್ಕ ₹75ರಿಂದ ₹80ಕ್ಕೆ, ನಾಲ್ಕು ಚಕ್ರದ ವಾಹನಗಳ ಶುಲ್ಕ ₹115ರಿಂದ ₹150ಕ್ಕೆ ಹಾಗೂ ಡೀಸೆಲ್ ವಾಹನಗಳ ಶುಲ್ಕ ₹160ರಿಂದ ₹200ಕ್ಕೆ ಏರಿಕೆಯಾಗಿದೆ ಎಂದು ಅಶೋಕ ತಿಳಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಾರಿಗೆ ಸಚಿವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಜನರನ್ನು ಕೊಳ್ಳೆ ಹೊಡೆಯುವುದನ್ನೇ ಆಡಳಿತ ಎಂದುಕೊಂಡಿದ್ದೀರಾ? ಒಂದು ಕೈಯಲ್ಲಿ ಉಚಿತ ಯೋಜನೆಗಳ ಹೆಸರನ್ನು ಹೇಳಿ, ಮತ್ತೊಂದು ಕೈಯಲ್ಲಿ ವಿವಿಧ ಶುಲ್ಕ ಮತ್ತು ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಜನಸಾಮಾನ್ಯರ ಜೇಬಿಗೆ ಕನ್ನ ಹಾಕಲು ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ವಿದ್ಯುತ್ ಬಿಲ್, ಹಾಲಿನ ದರ, ಬಸ್ ದರ, ಮೆಟ್ರೋ ದರ, ನೋಂದಣಿ ಶುಲ್ಕ ಹಾಗೂ ಆಸ್ತಿ ತೆರಿಗೆ ಹೆಚ್ಚಳದಂತಹ ಕ್ರಮಗಳಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಬೆನ್ನಲ್ಲೇ ವಾಹನಗಳ ಹೊಗೆ ಪರೀಕ್ಷೆಗೂ ಶುಲ್ಕ ಹೆಚ್ಚಿಸಿರುವುದು ಸರ್ಕಾರದ ಜನವಿರೋಧಿ ಧೋರಣೆಗೆ ಮತ್ತೊಂದು ಉದಾಹರಣೆಯಾಗಿದೆ ಎಂದು ಅಶೋಕ ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಟೀಕಿಸಿರುವ ಅವರು, “ಕಾಂಗ್ರೆಸ್ ಎಂದರೆ ಬೆಲೆ ಏರಿಕೆ, ಕಾಂಗ್ರೆಸ್ ಎಂದರೆ ಜನವಿರೋಧಿ” ಎಂದು ವಾಗ್ದಾಳಿ ನಡೆಸಿದ್ದಾರೆ. ಜನರ ಮೇಲೆ ಒಂದರ ಮೇಲೊಂದು ಹೊರೆ ಹಾಕುತ್ತಿರುವ ಸರ್ಕಾರದ ಕ್ರಮಗಳನ್ನು ಜನ ಗಂಭೀರವಾಗಿ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಆಡಳಿತಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.