ಬಾಪೂಜಿ ಸೊಸೈಟಿ ಜನರ ವಿಶ್ವಾಸ ಗಳಿಸಿದೆ: ಎಸ್.ಆರ್. ಪಾಟೀಲ್
ಬಾಗಲಕೋಟೆ, 16 ಆಗಸ್ಟ್ (ಹಿ.ಸ.) ಆ್ಯಂಕರ್ : ಸರಳ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಣೆ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಹಲವು ಪೂರಕ ಸೇವೆಗಳನ್ನು ಒದಗಿಸುವ ಮೂಲಕ ಬಾಪೂಜಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಜನರ ವಿಶ್ವಾಸ ಗಳಿಸಿದೆ ಎಂದು ಮಾಜಿ ಸಚಿವ ಹಾಗೂ ಸಂಸ್ಥೆಯ ಅಧ್ಯಕ್ಷ
ಬಾಪೂಜಿ


ಬಾಗಲಕೋಟೆ, 16 ಆಗಸ್ಟ್ (ಹಿ.ಸ.)

ಆ್ಯಂಕರ್ : ಸರಳ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಣೆ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಹಲವು ಪೂರಕ ಸೇವೆಗಳನ್ನು ಒದಗಿಸುವ ಮೂಲಕ ಬಾಪೂಜಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಜನರ ವಿಶ್ವಾಸ ಗಳಿಸಿದೆ ಎಂದು ಮಾಜಿ ಸಚಿವ ಹಾಗೂ ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಪಾಟೀಲ್ ಹೇಳಿದರು.

ಬಾಗಲಕೋಟೆ ನಗರದ ಕಲಾಭವನದಲ್ಲಿ ಭಾನುವಾರ ನಡೆದ ಬಾಪೂಜಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಬಾಗಲಕೋಟೆ ಇದರ 19ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಹಕಾರಿ ಸಂಸ್ಥೆಗಳು ಕೇವಲ ಆರ್ಥಿಕ ವ್ಯವಹಾರಗಳಿಗೆ ಸೀಮಿತವಾಗದೆ ಸಮಾಜದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಜನಸಾಮಾನ್ಯರಿಗೆ ಸುಲಭವಾಗಿ ಸಾಲ ಸೌಲಭ್ಯ ಕಲ್ಪಿಸುವುದು, ಉಳಿತಾಯದ ಮನೋಭಾವ ಬೆಳೆಸುವುದು, ವಿಮೆ ಸೇರಿದಂತೆ ವಿವಿಧ ಆರ್ಥಿಕ ಸೇವೆಗಳನ್ನು ಒದಗಿಸುವ ಮೂಲಕ ಸಹಕಾರಿ ವಲಯವು ದೇಶದ ಆರ್ಥಿಕ ವ್ಯವಸ್ಥೆಯ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.

ಬಾಪೂಜಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆರಂಭದಿಂದಲೂ ಸದಸ್ಯರು, ಗ್ರಾಹಕರು ಹಾಗೂ ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ಸರಳ ಪ್ರಕ್ರಿಯೆ, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಹಾಗೂ ಗ್ರಾಹಕರಿಗೆ ಅಗತ್ಯವಿರುವ ವಿವಿಧ ಸೇವೆಗಳನ್ನು ಒದಗಿಸುವ ಮೂಲಕ ಸಂಸ್ಥೆ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.

ಸಂಸ್ಥೆಯ ಅಭಿವೃದ್ಧಿಯಲ್ಲಿ ಆಡಳಿತ ಮಂಡಳಿ, ಸಲಹಾ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರ ಕೊಡುಗೆ ಮಹತ್ವದ್ದಾಗಿದೆ. ಆಡಳಿತ ಮಂಡಳಿ ಮತ್ತು ಸಲಹಾ ಸಮಿತಿ ಸದಸ್ಯರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದು, ಸಿಬ್ಬಂದಿ ವರ್ಗವು ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವುದರಿಂದ ಸಂಸ್ಥೆ ನಿರಂತರವಾಗಿ ಪ್ರಗತಿಯತ್ತ ಸಾಗುತ್ತಿದೆ ಎಂದು ಎಸ್.ಆರ್. ಪಾಟೀಲ್ ಹೇಳಿದರು.

ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಇನ್ನಷ್ಟು ಹೊಸ ಅವಕಾಶಗಳು ಸೃಷ್ಟಿಯಾಗಲಿದ್ದು, ಸದಸ್ಯರು ಮತ್ತು ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಸಂಸ್ಥೆಯ ಸೇವೆಗಳನ್ನು ವಿಸ್ತರಿಸುವ ಅಗತ್ಯವಿದೆ.

ನಂಬಿಕೆ, ಪಾರದರ್ಶಕತೆ ಹಾಗೂ ಜನಸೇವೆಯನ್ನು ಪ್ರಮುಖ ಧ್ಯೇಯವಾಗಿಸಿಕೊಂಡು ಮುನ್ನಡೆದರೆ ಬಾಪೂಜಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮುಂದಿನ ಕೆಲವೇ ವರ್ಷಗಳಲ್ಲಿ ಹೆಮ್ಮರವಾಗಿ ಬೆಳೆದು ನಿಲ್ಲಲಿದೆ ಎಂಬ ವಿಶ್ವಾಸವಿದೆ ಎಂದರು.

ಸಂಸ್ಥೆಯ ಬೆಳವಣಿಗೆಯಲ್ಲಿ ಸದಸ್ಯರು ಹಾಗೂ ಠೇವಣಿದಾರರ ಪಾತ್ರವೂ ಮಹತ್ವದ್ದಾಗಿದೆ. ಸಂಸ್ಥೆಯ ಮೇಲೆ ನಂಬಿಕೆ ಇಟ್ಟು ನಿರಂತರವಾಗಿ ಸಹಕಾರ ನೀಡುತ್ತಿರುವ ಗ್ರಾಹಕರು, ಸದಸ್ಯರು ಹಾಗೂ ಠೇವಣಿದಾರರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಇದೇ ವಿಶ್ವಾಸ ಮುಂದಿನ ದಿನಗಳಲ್ಲಿಯೂ ಸಂಸ್ಥೆಯ ಅಭಿವೃದ್ಧಿಗೆ ಬಲ ನೀಡಲಿದೆ ಎಂದರು.

ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ವಿವಿಧ ಚಟುವಟಿಕೆಗಳು, ಪ್ರಗತಿ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಯಿತು. ಸದಸ್ಯರು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಅಭಿಪ್ರಾಯ ವಿನಿಮಯ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು, ಸಲಹಾ ಸಮಿತಿ ಸದಸ್ಯರು, ಗ್ರಾಹಕರು, ಠೇವಣಿದಾರರು, ಸದಸ್ಯರು, ಸಿಬ್ಬಂದಿ ವರ್ಗ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande