ಗಾಂಧಿ ಭವನದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ.ಕೆ ಅವರಿಂದ ರಾಷ್ಟ್ರಧ್ವಜಾರೋಹಣ
ವಿಜಯಪುರ, 15 ಆಗಸ್ಟ್ (ಹಿ.ಸ.) ಆ್ಯಂಕರ್ : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಜಯಪುರ ನಗರದ ಜಿಲ್ಲಾ ಪಂಚಾಯತಿ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ.ಕೆ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಷ್ಟ್ರಕ್ಕೆ ಗೌರವ ಸಲ್ಲಿಸಿದರು. ಧ್ವಜಾರೋಹಣದ ಬಳಿಕ ಮಾತನಾಡಿದ ಜಿಲ್ಲಾಧಿಕಾ
ಜಿಲ್ಲಾಧಿಕಾರಿ


ವಿಜಯಪುರ, 15 ಆಗಸ್ಟ್ (ಹಿ.ಸ.)

ಆ್ಯಂಕರ್ : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಜಯಪುರ ನಗರದ ಜಿಲ್ಲಾ ಪಂಚಾಯತಿ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ.ಕೆ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಷ್ಟ್ರಕ್ಕೆ ಗೌರವ ಸಲ್ಲಿಸಿದರು.

ಧ್ವಜಾರೋಹಣದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ. ಆನಂದ.ಕೆ ಅವರು, ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯವು ಸುಲಭವಾಗಿ ದೊರೆತದ್ದಲ್ಲ. ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿ, ತ್ಯಾಗ, ಹೋರಾಟ ಮತ್ತು ಬಲಿದಾನದ ಮೂಲಕ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟಿದ್ದಾರೆ.

ಅಂತಹ ಮಹನೀಯರ ತ್ಯಾಗ ಮತ್ತು ಬಲಿದಾನವನ್ನು ಸದಾ ಸ್ಮರಿಸುವುದು ಹಾಗೂ ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿರುವ ಗಾಂಧಿ ಭವನವು ಅತ್ಯಂತ ಮಾದರಿಯ ಹಾಗೂ ಸ್ಫೂರ್ತಿದಾಯಕ ತಾಣವಾಗಿದೆ. ಪ್ರಶಾಂತ ವಾತಾವರಣದಲ್ಲಿ ನಿರ್ಮಾಣಗೊಂಡಿರುವ ಈ ಭವನವು ಮಹಾತ್ಮ ಗಾಂಧೀಜಿಯವರ ಜೀವನ, ಹೋರಾಟ ಮತ್ತು ವಿಚಾರಧಾರೆಗಳನ್ನು ಅರಿತುಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ಅವರು ಹೇಳಿದರು.

ಮಹಾತ್ಮ ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದ ಅಹಿಂಸೆ, ಸತ್ಯ, ಶಾಂತಿ ಹಾಗೂ ಸರಳತೆಯಂತಹ ಉನ್ನತ ಮೌಲ್ಯಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಗಾಂಧೀಜಿಯವರ ಹೋರಾಟದ ಹಾದಿ, ಅವರ ವಿಚಾರಧಾರೆಗಳು, ಜೀವನದ ಪ್ರಮುಖ ಘಟನೆಗಳು ಹಾಗೂ ಅವರು ಪ್ರತಿಪಾದಿಸಿದ ಮೌಲ್ಯಗಳ ಸಮಗ್ರ ಮಾಹಿತಿಯನ್ನು ಗಾಂಧಿ ಭವನ ಒಳಗೊಂಡಿದೆ. ಈ ಕಾರಣದಿಂದಾಗಿ ಗಾಂಧಿ ಭವನವು ಕೇವಲ ಸ್ಮಾರಕವಾಗಿರದೆ, ಮುಂದಿನ ಪೀಳಿಗೆಗೆ ಗಾಂಧೀಜಿಯವರ ಆದರ್ಶಗಳನ್ನು ಪರಿಚಯಿಸುವ ಜ್ಞಾನ ಮತ್ತು ಸ್ಫೂರ್ತಿಯ ಕೇಂದ್ರವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಇಂದಿನ ಯುವ ಪೀಳಿಗೆ ಗಾಂಧಿ ಭವನಕ್ಕೆ ಭೇಟಿ ನೀಡಿ, ಮಹಾತ್ಮ ಗಾಂಧೀಜಿಯವರ ಜೀವನದ ಪ್ರಮುಖ ಘಟನಾವಳಿಗಳು, ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಹಾಗೂ ಅವರ ವಿಚಾರಧಾರೆಗಳನ್ನು ತಿಳಿದುಕೊಳ್ಳಬೇಕು. ಗಾಂಧೀಜಿಯವರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಶಾಂತಿ ಮತ್ತು ಸರಳತೆಯಂತಹ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.

ಬಳಿಕ ಜಿಲ್ಲಾಧಿಕಾರಿ ಡಾ. ಆನಂದ.ಕೆ ಅವರು ಗಾಂಧಿ ಭವನದ ಆವರಣವನ್ನು ವೀಕ್ಷಿಸಿ, ಅಲ್ಲಿನ ವ್ಯವಸ್ಥೆ ಹಾಗೂ ನಿರ್ವಹಣೆಯನ್ನು ಪರಿಶೀಲಿಸಿದರು. ಗಾಂಧಿ ಭವನವನ್ನು ಉತ್ತಮವಾಗಿ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಇದೇ ರೀತಿಯಲ್ಲಿ ಭವನದ ಸ್ವಚ್ಛತೆ ಹಾಗೂ ಸೌಂದರ್ಯವನ್ನು ಕಾಪಾಡಿಕೊಂಡು ಸಾರ್ವಜನಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಉಪಯುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಡಾ. ಸಂತೋಷಕುಮಾರ, ಮಹಿಳಾ ಅಧಿಕಾರಿಗಳಾದ ದೀಪಾಕ್ಷಿ ಜಾನಕಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಮರೇಶ ದೊಡಮನಿ, ವಿಜಯಕೃಷ್ಣ, ವೈ. ಭವ್ಯ, ವೈಷ್ಣವಿ ಭಗವತಿ, ಮಿಥುನ, ನಾಗೇಶ, ರತ್ನಾಂಜಲಿ ಸೇರಿದಂತೆ ಗಾಂಧಿ ಭವನ ನಿರ್ವಹಣಾ ಸಮಿತಿ ಸದಸ್ಯರಾದ ಫಿರೋಜ್ ರೋಜಿಂದಾರ, ಪೀಟರ್ ಅಲೆಕ್ಸಾಂಡರ್, ನೇತಾಜಿ ಗಾಂಧಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande