
ಗದಗ, 15 ಆಗಸ್ಟ್ (ಹಿ.ಸ.)
ಆ್ಯಂಕರ್:- ಗ್ರಾಮೀಣ ಪ್ರದೇಶದ ಪ್ರತಿಯೊಂದು ಅರ್ಹ ಕುಟುಂಬಕ್ಕೂ ಉದ್ಯೋಗ ಖಾತರಿ ಯೋಜನೆಯ ಸೌಲಭ್ಯ ತಲುಪಿಸುವ ಉದ್ದೇಶದಿಂದ ರೋಣ ತಾಲೂಕು ಪಂಚಾಯಿತಿ ವ್ಯಾಪ್ತಿಯ 22 ಗ್ರಾಮ ಪಂಚಾಯಿತಿಗಳಲ್ಲಿ ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ಜಿ ರಾಮ್ ಜೀ ಜಾಬ್ ಕಾರ್ಡ ಮೇಳ ಆಯೋಜಿಸಲಾಗಿದೆ.
ಜಾಬ್ಕಾರ್ಡ್ ಮೇಳದ ಅಂಗವಾಗಿ ರೋಣ ತಾಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಜಾಬ್ಕಾರ್ಡ್ ಮೇಳದ ಬ್ರೌಷರ್ ಬಿಡುಗಡೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಖಾತರಿ ಯೋಜನೆಯ ಸೌಲಭ್ಯ ತಲುಪಿಸುವಲ್ಲಿ ಜಾಬ್ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಆದ್ದರಿಂದ ಅರ್ಹ ಯಾವುದೇ ಕುಟುಂಬವೂ ಯೋಜನೆಯ ಸೌಲಭ್ಯದಿಂದ ವಂಚಿತವಾಗದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಶೇಷ ಗಮನಹರಿಸಬೇಕು ಎಂದು ಸೂಚಿಸಿದರು.
ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹ
ತಾಲೂಕಿನ 22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜಾಬ್ಕಾರ್ಡ್ ಮೇಳವನ್ನು ಪರಿಣಾಮಕಾರಿಯಾಗಿ ನಡೆಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಜಾಬ್ಕಾರ್ಡ್ ಹೊಂದಿರದ ಅರ್ಹ ಕುಟುಂಬಗಳನ್ನು ಗುರುತಿಸಿ, ಅಂತಹ ಕುಟುಂಬಗಳಿಗೆ ಯೋಜನೆಯ ಉದ್ದೇಶ, ಸೌಲಭ್ಯಗಳು ಹಾಗೂ ನೋಂದಣಿ ಪ್ರಕ್ರಿಯೆ ಕುರಿತು ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಅರ್ಹ ಕುಟುಂಬಗಳಿಂದ ಅಗತ್ಯ ಅರ್ಜಿ ಹಾಗೂ ದಾಖಲೆಗಳನ್ನು ಪಡೆದು ಜಾಬ್ಕಾರ್ಡ್ ನೋಂದಣಿ ಪ್ರಕ್ರಿಯೆ ಕೈಗೊಳ್ಳಬೇಕು. ಜನರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಸಿಬ್ಬಂದಿಯೇ ಗ್ರಾಮಗಳಿಗೆ ತೆರಳಿ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಲಾಯಿತು.
ಈ ವೇಳೆ ಈಗಾಗಲೇ ಜಾಬ್ಕಾರ್ಡ್ ಹೊಂದಿರುವ ಕುಟುಂಬಗಳಿಗೂ ಯೋಜನೆಯಡಿ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡುವಂತೆ ಸೂಚಿಸಲಾಯಿತು.
ಅರ್ಹ ಕುಟುಂಬಗಳು ಸೌಲಭ್ಯದಿಂದ ವಂಚಿತರಾಗದಂತೆ ಕ್ರಮ
ಗ್ರಾಮೀಣ ಕುಟುಂಬಗಳಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸುವುದು ಉದ್ಯೋಗ ಖಾತರಿ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಅರ್ಹತೆಯಿರುವ ಯಾವುದೇ ಕುಟುಂಬ ಜಾಬ್ಕಾರ್ಡ್ ಹಾಗೂ ಉದ್ಯೋಗದ ಸೌಲಭ್ಯದಿಂದ ವಂಚಿತವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದರು.
ಮೇಳದ ಅವಧಿಯಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ಕೈಗೊಂಡು, ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಕುಟುಂಬಗಳನ್ನು ಗುರುತಿಸುವಂತೆ ಸೂಚಿಸಲಾಯಿತು.
ಸಿಬ್ಬಂದಿಯ ಸಮನ್ವಯಕ್ಕೆ ಆದ್ಯತೆ
ಜಿ ರಾಮ್ ಜೀ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಯೋಜನೆಯ ಮಾಹಿತಿಯನ್ನು ಗ್ರಾಮೀಣ ಜನರಿಗೆ ತಲುಪಿಸಬೇಕು. ವಿಶೇಷವಾಗಿ ಉದ್ಯೋಗದ ಅವಶ್ಯಕತೆ ಹೊಂದಿರುವ ಕುಟುಂಬಗಳನ್ನು ಗುರುತಿಸಿ, ಅವರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಲಾಯಿತು.
ಜಾಬ್ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉದ್ಯೋಗದ ಬೇಡಿಕೆ ಸಲ್ಲಿಸುವ ವಿಧಾನ, ಲಭ್ಯವಿರುವ ಕಾಮಗಾರಿಗಳು ಹಾಗೂ ಯೋಜನೆಯಡಿ ದೊರೆಯುವ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ಕೂ ಆದ್ಯತೆ ನೀಡಲಾಗುವುದು.
ಸಿಬ್ಬಂದಿಗೆ ಜವಾಬ್ದಾರಿ ಹಂಚಿಕೆ
ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ನಡೆಯಲಿರುವ ಜಾಬ್ಕಾರ್ಡ್ ಮೇಳದ ಯಶಸ್ವಿ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಿಬ್ಬಂದಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗುತ್ತದೆ.
ಮನೆ-ಮನೆಗೆ ಭೇಟಿ ನೀಡಿ ಅರ್ಹ ಕುಟುಂಬಗಳ ಗುರುತಿಸುವಿಕೆ, ಜಾಬ್ಕಾರ್ಡ್ ನೋಂದಣಿ, ದಾಖಲೆಗಳ ಸಂಗ್ರಹ, ಯೋಜನೆಯ ಕುರಿತು ಜಾಗೃತಿ ಮೂಡಿಸುವುದು ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೊಳ್ಳಲಾಗುವುದು.
ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ದೂರದ ನಗರ ಹಾಗೂ ಪಟ್ಟಣಗಳಿಗೆ ವಲಸೆ ಹೋಗುವ ಪರಿಸ್ಥಿತಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸ್ಥಳೀಯವಾಗಿ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡುವುದು ಹಾಗೂ ಅರ್ಹ ಕುಟುಂಬಗಳಿಗೆ ಉದ್ಯೋಗ ಖಾತರಿ ಯೋಜನೆಯ ಸೌಲಭ್ಯ ತಲುಪಿಸುವುದು ಜಾಬ್ಕಾರ್ಡ್ ಮೇಳದ ಪ್ರಮುಖ ಉದ್ದೇಶವಾಗಿದೆ.
ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಮೇಳವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಅರ್ಹ ಕುಟುಂಬಗಳನ್ನು ಯೋಜನೆಯ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿ, ಬಿ ಬಿ ಜಿ ಸಿಬ್ಬಂದಿ, ಎನ್ ಆರ್, ಎಲ್ ಎಮ್ ಸಿಬ್ಬಂದಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP