ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತದ ಭದ್ರತೆ ಮತ್ತು ಆರ್ಥಿಕತೆ ಬಲಗೊಂಡಿದೆ: ಬಸವರಾಜ ಬೊಮ್ಮಾಯಿ
ಗದಗ, 15 ಆಗಸ್ಟ್ (ಹಿ.ಸ.) ಆ್ಯಂಕರ್:- ಕಳೆದ 12 ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತದ ಭದ್ರತೆ, ಅಖಂಡತೆ, ಆರ್ಥಿಕತೆ ಹಾಗೂ ಜಾಗತಿಕ ಸ್ಥಾನಮಾನ ಮತ್ತಷ್ಟು ಬಲಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಭಾರತದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾ
ಫೋಟೋ


ಗದಗ, 15 ಆಗಸ್ಟ್ (ಹಿ.ಸ.)

ಆ್ಯಂಕರ್:- ಕಳೆದ 12 ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತದ ಭದ್ರತೆ, ಅಖಂಡತೆ, ಆರ್ಥಿಕತೆ ಹಾಗೂ ಜಾಗತಿಕ ಸ್ಥಾನಮಾನ ಮತ್ತಷ್ಟು ಬಲಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಭಾರತದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗದಗ ನಗರದ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ದಿಟ್ಟ ನಿಲುವು ತಳೆದಿದೆ ಎಂದು ಹೇಳಿದರು.

ಹಿಂದಿನ ಆಡಳಿತದ ಅವಧಿಯಲ್ಲಿ ದೇಶದ ಸುರಕ್ಷತೆಗೆ ಧಕ್ಕೆ ಉಂಟಾಗುವ ಹಲವು ಸಂದರ್ಭಗಳನ್ನು ಕಂಡಿದ್ದೇವೆ. ಆದರೆ ಕಳೆದ 12 ವರ್ಷಗಳಲ್ಲಿ ದೇಶದ ಏಕತೆ, ಅಖಂಡತೆ ಹಾಗೂ ಭದ್ರತೆ ಮತ್ತಷ್ಟು ಗಟ್ಟಿಯಾಗಿದೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಯಾವುದೇ ಅವಕಾಶ ನೀಡದೆ ಗಡಿ ಭದ್ರತೆಯನ್ನು ಕಟ್ಟುನಿಟ್ಟಾಗಿ ಕಾಯಲಾಗಿದೆ. ಗಡಿಯಾಚೆಯಿಂದ ಆಕ್ರಮಣ ನಡೆದ ಸಂದರ್ಭದಲ್ಲೂ ಸೂಕ್ತ ಪ್ರತ್ಯುತ್ತರ ನೀಡುವ ದಿಟ್ಟ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಳೆದಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ

ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಹಾಗೂ ವಿವಿಧ ಜನಪರ ಯೋಜನೆಗಳ ಪರಿಣಾಮವಾಗಿ ಸುಮಾರು 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಏಳು ಕೋಟಿಗೂ ಹೆಚ್ಚು ಯುವಕರಿಗೆ ಉದ್ಯೋಗಾವಕಾಶ ದೊರೆತಿದೆ. ಮುದ್ರಾ ಯೋಜನೆಯಡಿ ಕೋಟ್ಯಂತರ ಜನರಿಗೆ ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕ ನೆರವು ನೀಡಲಾಗಿದೆ ಎಂದು ಅವರು ತಿಳಿಸಿದರು.

ಕಿಸಾನ್ ಸಮ್ಮಾನ್, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ರೈತರಿಗೆ ನೆರವು ನೀಡಲಾಗುತ್ತಿದೆ. ಜಲ ಜೀವನ ಮಿಷನ್ ಮೂಲಕ ಪ್ರತಿಯೊಂದು ಮನೆಗೂ ಕುಡಿಯುವ ನೀರು ತಲುಪಿಸುವ ಪ್ರಯತ್ನ ನಡೆಯುತ್ತಿದ್ದು, ಗ್ರಾಮೀಣ ಪ್ರದೇಶದ ಜನರು ನೀರಿಗಾಗಿ ದೂರದ ಮೂಲಗಳನ್ನು ಅವಲಂಬಿಸುವ ಪರಿಸ್ಥಿತಿಯನ್ನು ಕಡಿಮೆ ಮಾಡಲಾಗಿದೆ ಎಂದರು.

2047ಕ್ಕೆ ವಿಕಸಿತ ಭಾರತ ನಿರ್ಮಾಣದ ಗುರಿ

ಪ್ರತಿಯೊಬ್ಬ ಭಾರತೀಯನಲ್ಲೂ ಆತ್ಮವಿಶ್ವಾಸ ಮತ್ತು ಭರವಸೆ ಮೂಡಿಸಿರುವುದು ಕೇಂದ್ರ ಸರ್ಕಾರದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ಭಾರತವು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಠ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಬೊಮ್ಮಾಯಿ ಹೇಳಿದರು.

2047ರ ವೇಳೆಗೆ ಭಾರತವನ್ನು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವ ವಿಕಸಿತ ರಾಷ್ಟ್ರವನ್ನಾಗಿ ರೂಪಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಆತ್ಮನಿರ್ಭರ ಭಾರತವೇ ಈ ಗುರಿಗೆ ಪ್ರಮುಖ ಅಡಿಪಾಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ರೈತರು, ಕಾರ್ಮಿಕರ ಪಾತ್ರ

ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶದ ಜನಸಂಖ್ಯೆ ಸುಮಾರು 33 ಕೋಟಿಯಷ್ಟಿತ್ತು. ಬ್ರಿಟಿಷರು ಭಾರತವನ್ನು ತೊರೆದಾಗ ದೇಶ ತೀವ್ರ ಬಡತನ, ಹಸಿವು, ನಿರುದ್ಯೋಗ ಹಾಗೂ ಆರ್ಥಿಕ ಹಿನ್ನಡೆಯಿಂದ ಬಳಲುತ್ತಿತ್ತು ಎಂದು ಬೊಮ್ಮಾಯಿ ಹೇಳಿದರು.

ಸ್ವಾತಂತ್ರ್ಯ ಹೋರಾಟಕ್ಕೆ ನಿಜವಾದ ಶಕ್ತಿ ಬಂದದ್ದು ರೈತರು ಮತ್ತು ದುಡಿಯುವ ವರ್ಗದ ಜನರು ಹೋರಾಟಕ್ಕೆ ಧುಮುಕಿದಾಗ. ಗುಜರಾತಿನ ಬಾರ್ಡೋಲಿ ಸತ್ಯಾಗ್ರಹ, ಚಂಪಾರಣ್ಯದ ಇಂಡಿಗೋ ಸತ್ಯಾಗ್ರಹ ಹಾಗೂ ಟೀ ತೋಟದ ಕಾರ್ಮಿಕರ ಹೋರಾಟಗಳು ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಬಲ ನೀಡಿದವು ಎಂದು ಅವರು ಸ್ಮರಿಸಿದರು.

ದೇಶ ವಿಭಜನೆಯ ನೋವು

ಅಹಿಂಸೆಯ ಮಾರ್ಗದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ದೊರೆತರೂ ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಅತ್ಯಂತ ನೋವಿನ ಸಂಗತಿಯಾಗಿತ್ತು. ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಅನೇಕರು ಮನೆ, ಆಸ್ತಿ ಹಾಗೂ ಬದುಕನ್ನು ಕಳೆದುಕೊಂಡರು. ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಹತ್ಯೆಗೀಡಾದರು. ಸ್ವಾತಂತ್ರ್ಯದ ಜೊತೆಗೆ ದೇಶ ವಿಭಜನೆಯ ಕಪ್ಪುಚುಕ್ಕೆ ಮತ್ತು ನೋವು ಭಾರತಕ್ಕೆ ಉಳಿಯಿತು ಎಂದು ಬೊಮ್ಮಾಯಿ ವಿಷಾದಿಸಿದರು.

ಹಸಿರು ಕ್ರಾಂತಿಯಿಂದ ಆಹಾರ ಸ್ವಾವಲಂಬನೆ

ಸ್ವಾತಂತ್ರ್ಯದ ನಂತರ ದೇಶ ನಿರ್ಮಾಣದ ಹಾದಿಯಲ್ಲಿ ಹಲವು ಸಾಮಾಜಿಕ ಹಾಗೂ ಆಂತರಿಕ ಸಂಘರ್ಷಗಳು ಅಭಿವೃದ್ಧಿಗೆ ಅಡ್ಡಿಯಾದವು. ಆರಂಭಿಕ ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಕೃಷಿ ಕ್ಷೇತ್ರಕ್ಕೆ ನಿರೀಕ್ಷಿತ ಆದ್ಯತೆ ದೊರೆಯದ ಪರಿಣಾಮ ಆಹಾರ ಕೊರತೆಯ ಸಮಸ್ಯೆ ಎದುರಾಯಿತು.

ನಂತರ ಜಾರಿಗೆ ಬಂದ ಹಸಿರು ಕ್ರಾಂತಿಯ ಪರಿಣಾಮ ಭಾರತ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು. ಇಂದು ದೇಶದ ದೊಡ್ಡ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ಅವರು ಹೇಳಿದರು.

‘ಹಸಿವು ಮುಕ್ತ ಭಾರತ’ ನಿರ್ಮಾಣ

ಕಳೆದ 12 ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಇಂದು ಭಾರತ ಆರ್ಥಿಕವಾಗಿ ಹಾಗೂ ಜಾಗತಿಕವಾಗಿ ಬಲಿಷ್ಠವಾಗಿದೆ. ದೇಶದ ಸ್ವಾಭಿಮಾನ ಮತ್ತು ಭದ್ರತೆಗೆ ಧಕ್ಕೆ ತರುವಂತಹ ಪರಿಸ್ಥಿತಿಯಿಂದ ಭಾರತ ಹೊರಬಂದು ಪ್ರಗತಿಯತ್ತ ಸಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

ಪ್ರತಿಯೊಬ್ಬರಿಗೂ ಆಹಾರ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಬಡವರು ಹಾಗೂ ದುರ್ಬಲ ವರ್ಗದವರಿಗೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ನೆರವು ಒದಗಿಸಲಾಗುತ್ತಿದೆ ಎಂದರು.

ಜೆನ್ ಝಿ ಬಗ್ಗೆ ಮೋದಿ ಸಕಾರಾತ್ಮಕ ನಿಲುವು

ಇಂದಿನ ಯುವಜನತೆ ಉನ್ನತ ಆಕಾಂಕ್ಷೆಗಳನ್ನು ಹೊಂದಿದ್ದಾರೆ. ದೇಶದಲ್ಲಿ ಬದಲಾವಣೆ ತರಲು ಯುವಜನರ ಶಕ್ತಿ ಅತ್ಯಂತ ಪ್ರಮುಖವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜೆನ್ ಝಿ ಬಗ್ಗೆ ಸ್ಪಷ್ಟವಾದ ಸಕಾರಾತ್ಮಕ ನಿಲುವು ಹೊಂದಿದ್ದು, ದೇಶದ ಯುವಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಯುವಜನರು ಸರ್ಕಾರದ ಮೇಲೆ ತಮ್ಮ ನಿರೀಕ್ಷೆಗಳನ್ನು ಈಡೇರಿಸುವಂತೆ ಒತ್ತಡ ಹೇರುತ್ತಿರುವುದು ಸಹ ಪ್ರಜಾಪ್ರಭುತ್ವದ ಆರೋಗ್ಯಕರ ಬೆಳವಣಿಗೆಯಾಗಿದೆ. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದರು.

2047ರ ವೇಳೆಗೆ ಭಾರತ ಜಾಗತಿಕ ಮಟ್ಟದಲ್ಲಿ ಅಗ್ರಶಕ್ತಿಯಾಗಿ ಹೊರಹೊಮ್ಮುವುದನ್ನು ತಡೆಯಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ಆದರೆ ಈ ಗುರಿ ಸಾಧನೆಗೆ ದೇಶದ ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಪರಿಶ್ರಮ, ದೇಶಭಕ್ತಿ ಹಾಗೂ ಬದ್ಧತೆ ಅಗತ್ಯವಾಗಿದೆ ಎಂದು ಅವರು ಹೇಳಿದರು.

‘ದೇಶವೇ ಮೊದಲು’ ಎಂಬ ತತ್ವ

ಭಾರತೀಯ ಜನತಾ ಪಕ್ಷವು ‘ರಾಷ್ಟ್ರವೇ ಮೊದಲು’ ಎಂಬ ತತ್ವದ ಮೇಲೆ ನಿಂತಿದೆ. ಬಲಿಷ್ಠ, ಸ್ವಾವಲಂಬಿ ಹಾಗೂ ವಿಕಸಿತ ಭಾರತ ನಿರ್ಮಾಣಕ್ಕೆ ಪಕ್ಷ ಬದ್ಧವಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಸ್ವತಂತ್ರ ಭಾರತದಲ್ಲಿ ದೇಶಕ್ಕಾಗಿ ಕೇವಲ ಪ್ರಾಣತ್ಯಾಗ ಮಾಡುವುದಷ್ಟೇ ಅಲ್ಲ, ದೇಶಕ್ಕಾಗಿ ಬದುಕಬೇಕು, ದುಡಿಯಬೇಕು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂಬ ಸಂದೇಶವನ್ನು ಅವರು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸ್ಮರಿಸಿದರು.

ಭವಿಷ್ಯದ ಭಾರತಕ್ಕಾಗಿ ಸಂಕಲ್ಪ

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ದೇಶಭಕ್ತಿಯನ್ನು ಸ್ಮರಿಸುವುದರ ಜೊತೆಗೆ ಭಾರತದ ಭವ್ಯ ಭವಿಷ್ಯ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಸಂಪೂರ್ಣ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಬೇಕು ಎಂದು ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande