ದೇಶಕ್ಕೆ ಮಾದರಿಯಾದ ಪಂಚ ಗ್ಯಾರಂಟಿ ಯೋಜನೆಗಳು: ಸಚಿವ ಡಾ. ಎಂ.ಬಿ. ಪಾಟೀಲ
ವಿಜಯಪುರ, 15 ಆಗಸ್ಟ್ (ಹಿ.ಸ.) ಆ್ಯಂಕರ್ : ರಾಜ್ಯದಲ್ಲಿ ಈ ವರ್ಷ ಮಳೆಯ ಕೊರತೆಯಿಂದ ಬರದ ಛಾಯೆ ಆವರಿಸಿದ್ದು, ವಿಜಯಪುರ ಜಿಲ್ಲೆಯಲ್ಲಿ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧವಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಉಸ್ತುವಾ
ಎಂ ಬಿ ಪಾಟೀಲ್


ವಿಜಯಪುರ, 15 ಆಗಸ್ಟ್ (ಹಿ.ಸ.)

ಆ್ಯಂಕರ್ : ರಾಜ್ಯದಲ್ಲಿ ಈ ವರ್ಷ ಮಳೆಯ ಕೊರತೆಯಿಂದ ಬರದ ಛಾಯೆ ಆವರಿಸಿದ್ದು, ವಿಜಯಪುರ ಜಿಲ್ಲೆಯಲ್ಲಿ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧವಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಉಸ್ತುವಾರಿ ಸಚಿವನಾಗಿ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿರುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪಥಸಂಚಲನ ವೀಕ್ಷಿಸಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.

ದೇಶಕ್ಕೆ ಮಾದರಿಯಾದ ಪಂಚ ಗ್ಯಾರಂಟಿ

ಸತತ ಮೂರು ವರ್ಷಗಳಿಂದ ದೇಶಾದ್ಯಂತ ಗಮನ ಸೆಳೆದ ಪಂಚ ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ವಿಶೇಷ ಗೌರವ ತಂದುಕೊಟ್ಟಿದ್ದು, ಇಡೀ ದೇಶಕ್ಕೆ ಮಾದರಿಯಾಗಿವೆ. ಮುಖ್ಯಮಂತ್ರಿ ಅವರು ಈ ಯೋಜನೆಗಳನ್ನು ಮುಂದುವರಿಸುವುದರ ಜೊತೆಗೆ ಅಧಿಕಾರ ವಹಿಸಿಕೊಂಡ 100 ದಿನಗಳಲ್ಲಿ 45 ವಿಶೇಷ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ನಿರ್ಧರಿಸಿದ್ದಾರೆ ಎಂದು ಸಚಿವರು ತಿಳಿಸಿದರು.

ಒಂದು ಹೆಕ್ಟೇರ್ವರೆಗೆ ಜಮೀನು ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಮೊತ್ತದಲ್ಲಿ ಶೇ.50ರಷ್ಟು ಸಬ್ಸಿಡಿ ನೀಡುವ ‘ರೈತ ಮಿತ್ರ’ ಯೋಜನೆ, ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ಅನುಭವ ಕಲ್ಪಿಸುವ ‘ಗ್ರಾಮಾನುಭವ’, ಯುವಕರಲ್ಲಿ ಆರೋಗ್ಯ, ಕೌಶಲ್ಯ ಹಾಗೂ ಸಾಮಾಜಿಕ ಸಾಮರಸ್ಯ ಬೆಳೆಸುವ ‘ಯುವ ಯುಗ’ ಸೇರಿದಂತೆ ಹಲವು ಹೊಸ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ ಎಂದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6 ಸಾವಿರ ಹಾಗೂ ನಗರ ಪ್ರದೇಶಗಳಲ್ಲಿ 4 ಸಾವಿರ ಯುವ ಸಂಘಗಳನ್ನು ಸ್ಥಾಪಿಸಿ, ವಾರ್ಷಿಕ ಸುಮಾರು ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಯುವಕರ ಸಬಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ‘ಯುವ ಉದ್ಯೋಗ ಸೇತು’ ಮೂಲಕ ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ ಕಲ್ಪಿಸಲಾಗುವುದು. ನಶೆ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಜಾಗೃತಿ, ತ್ಯಜಿಸುವಿಕೆ, ಬೆಂಬಲ ಮತ್ತು ಸಬಲೀಕರಣದ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಂಚ ಗ್ಯಾರಂಟಿಗಳಿಂದ ಲಕ್ಷಾಂತರ ಕುಟುಂಬಗಳಿಗೆ ನೆರವು

ಅನ್ನಭಾಗ್ಯ ಯೋಜನೆಯಡಿ ವಿಜಯಪುರ ಜಿಲ್ಲೆಯಲ್ಲಿ 21.50 ಲಕ್ಷ ಫಲಾನುಭವಿಗಳಿದ್ದು, ಗೃಹಲಕ್ಷ್ಮಿ ಯೋಜನೆಯಡಿ 5.3 ಲಕ್ಷ ಕುಟುಂಬಗಳ ಯಜಮಾನಿ ಮಹಿಳೆಯರಿಗೆ ಮಾಸಿಕ 2 ಸಾವಿರ ರೂ.ಗಳಂತೆ ಡಿಬಿಟಿ ಮೂಲಕ ಹಣ ಪಾವತಿಸಲಾಗುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ 3,092 ಕೋಟಿ ರೂ. ಪಾವತಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 21.08 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು, 723.63 ಕೋಟಿ ರೂ. ವೆಚ್ಚವಾಗಿದೆ. ಗೃಹಜ್ಯೋತಿ ಯೋಜನೆಯಡಿ 4.65 ಲಕ್ಷ ಕುಟುಂಬಗಳು ಪ್ರಯೋಜನ ಪಡೆದಿದ್ದು, ಇದುವರೆಗೆ 572.23 ಕೋಟಿ ರೂ. ವೆಚ್ಚವಾಗಿದೆ ಎಂದರು.

ಯುವನಿಧಿ ಯೋಜನೆಯಡಿ ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ ನಿರುದ್ಯೋಗಿ ಯುವಜನರಿಗೆ ಮಾಸಿಕ 3 ಸಾವಿರ ಮತ್ತು 1,500 ರೂ.ಗಳಂತೆ ನೆರವುನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ 2.26 ಲಕ್ಷ ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದಾರೆ. ಒಟ್ಟು 66.10 ಕೋಟಿ ರೂ. ನಿರುದ್ಯೋಗ ಭತ್ಯೆ ನೀಡಲಾಗಿದೆ ಎಂದು ತಿಳಿಸಿದರು.

ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜು

ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. ಕೆಲವು ತಾಂತ್ರಿಕ ಹಾಗೂ ನ್ಯಾಯಾಲಯದ ವಿಚಾರಗಳಿಂದ ವಿಳಂಬವಾಗಿದ್ದ ಯೋಜನೆಗೆ ಇದೀಗ ಸುಪ್ರೀಂ ಕೋರ್ಟ್ನ ಅಂತಿಮ ತೀರ್ಪು ಅನುಕೂಲಕರವಾಗಿ ಬಂದಿದ್ದು, ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಲು ಅವಕಾಶ ದೊರೆತಿದೆ ಎಂದು ಡಾ. ಎಂ.ಬಿ. ಪಾಟೀಲ ಹೇಳಿದರು.

727 ಎಕರೆ ವಿಸ್ತೀರ್ಣದ ವಿಮಾನ ನಿಲ್ದಾಣದಲ್ಲಿ ವಿಎಫ್ಆರ್ಗೆ ಸಂಬಂಧಿಸಿದ ಕಾಮಗಾರಿಗಳನ್ನು 2025ರ ಮೇ ತಿಂಗಳಲ್ಲೇ ಪೂರ್ಣಗೊಳಿಸಲಾಗಿದೆ. 24.50 ಕೋಟಿ ರೂ. ವೆಚ್ಚದಲ್ಲಿ ಎರಡು ಅಗ್ನಿಶಾಮಕ ವಾಹನಗಳು ಹಾಗೂ 2.76 ಕೋಟಿ ರೂ. ವೆಚ್ಚದಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯಗೊಳಿಸುವ ಸಾಧನಗಳನ್ನು ಖರೀದಿಸಲಾಗಿದೆ.

2026ರ ಜನವರಿ 6ರಂದು ಡಿಜಿಸಿಎ ಪರವಾನಗಿಗಾಗಿ ಅರ್ಜಿ ಸಲ್ಲಿಸಲಾಗಿದೆ. ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ತಾಂತ್ರಿಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಇಐಆರ್ಎಲ್, ವರ್ಕ್ ಸ್ಲಿಪ್, ನೈಟ್ ಲ್ಯಾಂಡಿಂಗ್ ಸೌಲಭ್ಯ ಹಾಗೂ ಪ್ರತ್ಯೇಕ ಅಪ್ರೋಚ್ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ 270.83 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಈಗಾಗಲೇ 160.72 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ಪರಿಸರ ಸಂಬಂಧಿ ಬಾಕಿ ಅನುಮತಿಗಳನ್ನು ತ್ವರಿತವಾಗಿ ನೀಡುವಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. 618 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಪೂರ್ಣಗೊಂಡಿರುವ ಯೋಜನೆ ಶೀಘ್ರದಲ್ಲೇ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಅಗತ್ಯ ಅನುಮತಿಗಳು ದೊರೆತ ಬಳಿಕ ಡಿಜಿಸಿಎ ಅಧಿಕಾರಿಗಳು ಪರಿಶೀಲನೆ ನಡೆಸಿ ಪರವಾನಗಿ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ ಎಂದು ಸಚಿವರು ಹೇಳಿದರು.

ಕೈಗಾರಿಕೆಗಳಿಗೆ ಉತ್ತೇಜನ – 1.96 ಲಕ್ಷ ಉದ್ಯೋಗ ಸೃಷ್ಟಿ

ಆಗಸ್ಟ್ 2025ರಿಂದ ಜುಲೈ 2026ರವರೆಗೆ ಜಿಲ್ಲೆಯಲ್ಲಿ 16,440 ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಉದ್ಯಮ ನೋಂದಣಿ ಪ್ರಮಾಣಪತ್ರ ಪಡೆದಿವೆ. ಸುಮಾರು 42.92 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು, 1.69 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ಸಚಿವರು ತಿಳಿಸಿದರು.

ಇಂಡಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ 20 ಎಕರೆ ಪ್ರದೇಶದಲ್ಲಿ ನೂತನ ಕೈಗಾರಿಕಾ ವಸಾಹತು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ರಿಲಯನ್ಸ್ ಕಂಜ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ನಿಂದ 1,622 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಪ್ಯಾಕೇಜ್ಡ್ ಸಾಫ್ಟ್ ಡ್ರಿಂಕ್ಸ್ ಮತ್ತು ಕುಡಿಯುವ ನೀರಿನ ಘಟಕ ಸ್ಥಾಪನೆಯಾಗುತ್ತಿದ್ದು, ಸುಮಾರು 1,200 ಜನರಿಗೆ ಉದ್ಯೋಗ ದೊರೆಯಲಿದೆ.

ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ 25 ಕೋಟಿ ರೂ. ವೆಚ್ಚದ ಐಸ್ಕ್ರೀಂ ಘಟಕದಿಂದ 250 ಜನರಿಗೆ ಹಾಗೂ 441 ಕೋಟಿ ರೂ. ವೆಚ್ಚದ ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಘಟಕದಿಂದ ಸುಮಾರು 4,500 ಜನರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದರು.

ಬರ ಎದುರಿಸಲು ಜಿಲ್ಲಾಡಳಿತ ಸಿದ್ಧ

ವಿಜಯಪುರ ಜಿಲ್ಲೆಯಲ್ಲಿ ವಾಡಿಕೆ ಮಳೆ 196.7 ಮಿ.ಮೀ. ಇದ್ದು, ಇದುವರೆಗೆ 163.5 ಮಿ.ಮೀ. ಮಳೆಯಾಗಿದೆ. ಆಗಸ್ಟ್ ತಿಂಗಳಲ್ಲಿಯೇ ಶೇ.46ರಷ್ಟು ಮಳೆ ಕೊರತೆ ದಾಖಲಾಗಿದೆ. ಹೀಗಾಗಿ ಬರದಿಂದ ಉಂಟಾಗಬಹುದಾದ ಸವಾಲುಗಳನ್ನು ಎದುರಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಸಚಿವರು ಹೇಳಿದರು.

ಕೆರೆಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 175 ಕೆರೆ ಹಾಗೂ ಬಾಂದಾರಗಳನ್ನು ತುಂಬಿಸುವ ಉದ್ದೇಶದಿಂದ ಕಾಲುವೆ ಜಾಲಕ್ಕೆ ನೀರು ಹರಿಸಲಾಗಿದೆ.

2025-26ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 89 ಸಾವಿರ ರೈತರಿಗೆ 235 ಕೋಟಿ ರೂ. ವಿಮಾ ಮೊತ್ತ ಜಮೆಯಾಗಿದೆ ಎಂದರು.

ಶಾಶ್ವತ ಕುಡಿಯುವ ನೀರಿಗೆ 3,059 ಕೋಟಿ ರೂ.

ವಿಜಯಪುರ ಜಿಲ್ಲೆಯ 13 ತಾಲೂಕುಗಳ 211 ಗ್ರಾಮ ಪಂಚಾಯಿತಿಗಳು ಹಾಗೂ 11 ನಗರ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಸಮಗ್ರ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗಿದೆ. ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಹಿನ್ನೀರನ್ನು ಶುದ್ಧೀಕರಿಸಿ ಪೂರೈಸಲು ಒಟ್ಟು 3,059 ಕೋಟಿ ರೂ. ನಿಗದಿಪಡಿಸಲಾಗಿದ್ದು, ಈಗಾಗಲೇ 1,994 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ವಿಜಯಪುರದ ಸಾಧನೆ

2025-26ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆ ಶೇ.94ರಷ್ಟು ಸಾಧನೆ ಮಾಡಿದೆ. 625ಕ್ಕೆ 625 ಅಂಕಗಳನ್ನು ಪಡೆದು ಮೂವರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಪಿಯುಸಿ ಫಲಿತಾಂಶದಲ್ಲಿಯೂ ಜಿಲ್ಲೆ ಶೇ.90.29ರಷ್ಟು ಸಾಧನೆ ಮಾಡಿ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಕಲಾ ವಿಭಾಗದಲ್ಲಿ ವಿಜಯಪುರ ಜಿಲ್ಲೆಯ ಹಲವು ವಿದ್ಯಾರ್ಥಿಗಳು ರಾಜ್ಯಮಟ್ಟದ ಉನ್ನತ ಸ್ಥಾನಗಳನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಸಚಿವರು ಹೇಳಿದರು.

ಆರೋಗ್ಯ, ಪೊಲೀಸ್ ಹಾಗೂ ನಗರಾಭಿವೃದ್ಧಿಗೆ ಆದ್ಯತೆ

ಜಿಲ್ಲಾ ಆಸ್ಪತ್ರೆಯಲ್ಲಿ ಶ್ರೀ ಪುಟ್ಟರಾಜ ಗವಾಯಿ ಟ್ರಾಮಾ ಕೇರ್ ಕಟ್ಟಡ, ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ತಾಯಿ ಹಾಲು ಸಂಗ್ರಹಣಾ ಕೇಂದ್ರ, 10 ಹಾಸಿಗೆಗಳ ಕಣ್ಣಿನ ಶಸ್ತ್ರಚಿಕಿತ್ಸಾ ಘಟಕ, ಐಪಿಎಚ್ಎಲ್ ಪ್ರಯೋಗಾಲಯ, ಕ್ಯಾನ್ಸರ್ ರೋಗಿಗಳಿಗಾಗಿ 10 ಹಾಸಿಗೆಗಳ ಕೀಮೋಥೆರಪಿ ಘಟಕ ಹಾಗೂ ಇಂದಿರಾ ಕ್ಯಾಂಟೀನ್ ಆರಂಭಗೊಂಡಿವೆ.

ಮಾದಕ ವಸ್ತುಗಳ ವಿರುದ್ಧ ‘ಆಪರೇಷನ್ ರೈಜ್’ ಹಾಗೂ ‘ಬೇಡಾ ಬ್ರೊ’

ಅಭಿಯಾನಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ. ಶಾಲಾ-ಕಾಲೇಜುಗಳು, ಹಾಸ್ಟೆಲ್ಗಳು ಮತ್ತು ಕೋಚಿಂಗ್ ಕೇಂದ್ರಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ವಿಜಯಪುರ ನಗರದಲ್ಲಿ ಸುರಕ್ಷಿತ ಹಾಗೂ ಶಿಸ್ತುಬದ್ಧ ಸಂಚಾರ ವ್ಯವಸ್ಥೆಗಾಗಿ ಐಟಿಎಂಇಎಸ್ ಯೋಜನೆಗೆ 5 ಕೋಟಿ ರೂ. ಹಾಗೂ ಇಂಟರಾಕ್ಟಿವ್ ಔಟ್ಡೋರ್ ಡಿಸ್ಪ್ಲೇ ಮತ್ತು ಜಂಕ್ಷನ್ ಇಂಪ್ರೂವ್ಮೆಂಟ್ ಯೋಜನೆಗೆ 2.31 ಕೋಟಿ ರೂ. ಅನುದಾನ ನೀಡಲಾಗಿದೆ. ನಗರದ 47 ಪ್ರಮುಖ ಸ್ಥಳಗಳಲ್ಲಿ 147 ಸಿಸಿಟಿವಿ ಕ್ಯಾಮೆರಾಗಳು, 25 ಪಿಎ ಸಿಸ್ಟಂಗಳು ಹಾಗೂ ಅತ್ಯಾಧುನಿಕ ಸಂಚಾರ ಸಿಗ್ನಲ್ಗಳನ್ನು ಅಳವಡಿಸಲಾಗುತ್ತಿದೆ.

ಹಸಿರು ವಿಜಯಪುರ ನಿರ್ಮಾಣಕ್ಕೆ ಒತ್ತು

ವೃಕ್ಷ ಅಭಿಯಾನ ಭಾಗ-1ರಲ್ಲಿ 1.50 ಕೋಟಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ವಿತರಿಸಲಾಗಿದ್ದು, 17 ಸಾವಿರ ಎಕರೆ ಪ್ರದೇಶದಲ್ಲಿ ನೆಡುತೋಪು ನಿರ್ಮಿಸಲಾಗಿದೆ. ವೃಕ್ಷ ಅಭಿಯಾನ ಭಾಗ-2ರಲ್ಲಿ 2024-25ರಿಂದ 2029-30ರವರೆಗೆ ಜಿಲ್ಲೆಯಲ್ಲಿ ಒಟ್ಟು 5 ಕೋಟಿ ಸಸಿಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದರು.

ವಿಜಯಪುರ ನಗರವು ಉತ್ತಮ ಗಾಳಿಯ ಗುಣಮಟ್ಟದ ನಗರಗಳ ಪಟ್ಟಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಪರಿಸರ ಸಂರಕ್ಷಣೆಯ ಪ್ರಯತ್ನಗಳು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ದೇಶಕ್ಕಾಗಿ ಪ್ರಾಣ ತೆತ್ತ ಹೋರಾಟಗಾರರ ಸ್ಮರಣೆ

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವದ ಹಂಗು ತೊರೆದು ಹೋರಾಡಿ ಪ್ರಾಣ ತೆತ್ತ ಕೆಚ್ಚೆದೆಯ ಹೋರಾಟಗಾರರನ್ನು ಸಚಿವರು ಸ್ಮರಿಸಿದರು.

ಸ್ವಾತಂತ್ರ್ಯ ದೊರೆತ ಈ ದಿನ ರಾಷ್ಟ್ರೀಯ ಐಕ್ಯತೆಯನ್ನು ಬಲಪಡಿಸುವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ದಿನವಾಗಿದೆ. ಜಾತಿ, ಧರ್ಮ ಮತ್ತು ಸಿದ್ಧಾಂತಗಳ ಭೇದವಿಲ್ಲದೆ ಏಕತೆಯಿಂದ ಶ್ರಮಿಸಿ ಭಾರತವನ್ನು ನಿರಂತರವಾಗಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವ ಸಂಕಲ್ಪ ಮಾಡೋಣ ಎಂದು ಸಚಿವರು ಕರೆ ನೀಡಿದರು.

ವಿವಿಧ ಸನ್ಮಾನ, ವಿತರಣೆ

ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಮಾಡಿದವರನ್ನು ಸನ್ಮಾನಿಸಲಾಯಿತು. ದೃಷ್ಟಿದೋಷ ಹೊಂದಿರುವ ಎಸ್ಎಸ್ಎಲ್ಸಿ ನಂತರದ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್ಗಳನ್ನು ವಿತರಿಸಲಾಯಿತು. ಪಾಲಿಕೆಯ ಶೇ.5ರ ಅನುದಾನದಲ್ಲಿ ಕ್ರೀಡಾ ವೀಲ್ಚೇರ್ಗಳನ್ನು ನೀಡಲಾಯಿತು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ 93 ಲಕ್ಷ ರೂ. ವೆಚ್ಚದಲ್ಲಿ 13 ಸೈಕಲ್ಗಳನ್ನು ಸೈಕ್ಲಿಸ್ಟ್ಗಳಿಗೆ ವಿತರಿಸಲಾಯಿತು.

ಬಳಿಕ ಸಚಿವರು ವೃಕ್ಷೋಥಾನ್ ಓಟದ ನೋಂದಣಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮೇಯರ್ ಎಂ.ಎಸ್. ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಹೊನಮೋಡೆ, ಉಪ ಮೇಯರ್ ಸುಮಿತ್ರಾ ಜಾಧವ, ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande