ತಮ್ಮವಿರುದ್ದ ಸ್ವಪಕ್ಷ ಮತ್ತು ಪ್ರತಿಪಕ್ಷ ಮುಖಂಡರಿಂದ ಷಡ್ಯಂತ್ರ: ಸಚಿವ ವಿಜಯಾನಂದ ಕಾಶಪ್ಪನವರ
ಬಾಗಲಕೋಟೆ, 15 ಆಗಸ್ಟ್ (ಹಿ.ಸ.) ಆ್ಯಂಕರ್ : ತಾವು ಸಚಿವರಾಗಿರುವುದನ್ನು ಹಾಗೂ ರಾಜಕೀಯವಾಗಿ ತಮ್ಮ ಬೆಳವಣಿಗೆಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮ್ಮ ವಿರುದ್ಧ ಸಂಚು ರೂಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ
ಕಾಶಪ್ಪನವರ


ಬಾಗಲಕೋಟೆ, 15 ಆಗಸ್ಟ್ (ಹಿ.ಸ.)

ಆ್ಯಂಕರ್ : ತಾವು ಸಚಿವರಾಗಿರುವುದನ್ನು ಹಾಗೂ ರಾಜಕೀಯವಾಗಿ ತಮ್ಮ ಬೆಳವಣಿಗೆಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮ್ಮ ವಿರುದ್ಧ ಸಂಚು ರೂಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.

ಬಾಗಲಕೋಟೆ ನಗರದಲ್ಲಿ ಧ್ವಜಾರೋಹಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಕ್ಷೇತ್ರದಲ್ಲಿ ತಮ್ಮ ಬೆಳವಣಿಗೆ ಕೆಲವರಿಗೆ ಅಸಮಾಧಾನ ಉಂಟುಮಾಡಿದೆ. ಇದರಿಂದಾಗಿ ತಮ್ಮ ವಿರುದ್ಧ ಅಪಪ್ರಚಾರ ಹಾಗೂ ವಿವಿಧ ರೀತಿಯ ಕುತಂತ್ರಗಳನ್ನು ನಡೆಸಲು ಒಂದು ಗುಂಪು ಸಕ್ರಿಯವಾಗಿದೆ ಎಂದು ಹೇಳಿದರು.

ತಮ್ಮ ವಿರುದ್ಧ ಸಂಚು ರೂಪಿಸುತ್ತಿರುವವರು ಯಾರು ಎಂಬುದರ ಕುರಿತು ಪ್ರತಿಯೊಂದು ವಿಚಾರವೂ ತಮ್ಮ ಗಮನದಲ್ಲಿದೆ. ಈ ಕುತಂತ್ರದಲ್ಲಿ ಸ್ವಪಕ್ಷದವರು ಇರಬಹುದು, ವಿರೋಧ ಪಕ್ಷದವರೂ ಇರಬಹುದು.

ರಾಜಕೀಯದಲ್ಲಿ ವೈಯಕ್ತಿಕ ಹಿತಾಸಕ್ತಿ ಹಾಗೂ ಅಧಿಕಾರದ ಲಾಭಕ್ಕಾಗಿ ಕೆಲವರು ಇಂತಹ ಪ್ರಯತ್ನಗಳನ್ನು ನಡೆಸುವುದು ಹೊಸದೇನಲ್ಲ ಎಂದು ಅವರು ಹೇಳಿದರು.

ತಾವು ಯಾವುದೇ ರೀತಿಯ ರಾಜಕೀಯ ಒತ್ತಡಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಜನರ ವಿಶ್ವಾಸ ಹಾಗೂ ಆಶೀರ್ವಾದವೇ ತಮ್ಮ ಶಕ್ತಿಯಾಗಿದ್ದು, ಜಿಲ್ಲೆಯ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವುದೇ ತಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಸಚಿವ ಸ್ಥಾನ ದೊರೆತ ನಂತರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಜನರಿಗೆ ಅಗತ್ಯವಿರುವ ಮೂಲಸೌಕರ್ಯ, ಅಭಿವೃದ್ಧಿ ಕಾಮಗಾರಿಗಳು ಹಾಗೂ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನು ಸಹಿಸದ ಕೆಲವರು ತಮ್ಮ ರಾಜಕೀಯ ಬೆಳವಣಿಗೆಗೆ ಅಡ್ಡಿಪಡಿಸುವ ಉದ್ದೇಶದಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಾಶಪ್ಪನವರ ಹೇಳಿದರು.

ತಮ್ಮ ವಿರುದ್ಧ ನಡೆಯುತ್ತಿರುವ ಯಾವುದೇ ರೀತಿಯ ಷಡ್ಯಂತ್ರಗಳಿಗೆ ತಾವು ಕಾನೂನುಬದ್ಧ ಹಾಗೂ ರಾಜಕೀಯವಾಗಿ ಸಮರ್ಥವಾಗಿ ಉತ್ತರ ನೀಡಲಿದ್ದೇನೆ. ಸತ್ಯಕ್ಕೆ ಅಂತಿಮವಾಗಿ ಜಯ ಸಿಗಲಿದೆ. ಜನರ ಮುಂದೆ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಜಿಲ್ಲೆಯ ಜನರ ಹಿತಾಸಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಕೆಲಸ ಮುಂದುವರಿಸುವುದಾಗಿ ತಿಳಿಸಿದ ಸಚಿವರು, ತಮ್ಮ ವಿರುದ್ಧದ ಕುತಂತ್ರಗಳಿಗೆ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದರು.

ರಾಜಕೀಯದಲ್ಲಿ ಟೀಕೆ-ವಿಮರ್ಶೆಗಳು ಸಹಜ. ಆದರೆ ವೈಯಕ್ತಿಕ ದ್ವೇಷದಿಂದ ಅಥವಾ ರಾಜಕೀಯ ಅಸೂಯೆಯಿಂದ ಸಂಚು ರೂಪಿಸುವುದು ಆರೋಗ್ಯಕರ ಬೆಳವಣಿಗೆಯಲ್ಲ. ಇಂತಹ ಪ್ರಯತ್ನಗಳು ನಡೆದರೂ ಜನರ ಬೆಂಬಲದಿಂದ ಅವುಗಳನ್ನು ಎದುರಿಸಿ ಮುನ್ನಡೆಯುವುದಾಗಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande