



ಬಳ್ಳಾರಿ, 15 ಆಗಸ್ಟ್ (ಹಿ.ಸ.)
ಆ್ಯಂಕರ್ :ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಬಳ್ಳಾರಿ ಜಿಲ್ಲೆಯ ಕೊಡುಗೆ ಅವಿಸ್ಮರಣೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದ್ದಾರೆ.
ನಗರದ ಬಿಎಂಸಿಆರ್ಸಿ ಮೈದಾನದಲ್ಲಿ ಶನಿವಾರ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಧ್ವನಿ ಎತ್ತಿದ ಕಲ್ಯಾಣ ಕರ್ನಾಟಕದ ಈ ಐತಿಹಾಸಿಕ ನೆಲ, ದಕ್ಷಿಣ ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕೇಂದ್ರವಾಗಿ ಕ್ರಾಂತಿಯ ಕಿಚ್ಚನ್ನು ಹೊತ್ತಿಸಿತ್ತು, ಬಳ್ಳಾರಿಯ ಜನತೆ ತೋರಿದ ತ್ಯಾಗ, ಬಲಿದಾನ ಮತ್ತು ಹೋರಾಟದ ಕಿಚ್ಚು ಕರ್ನಾಟಕದ ಹಾಗೂ ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಉಳಿಯುವಂತಹದ್ದು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ
ಶಕ್ತಿ ಯೋಜನೆಯಡಿ ಜುಲೈ 31 ರವರೆಗೆ ಜಿಲ್ಲೆಯಲ್ಲಿ 8.02 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಸರ್ಕಾರ ರೂ.323.29 ಕೋಟಿ ವೆಚ್ಚ ಭರಿಸಿದೆ. 9,500 ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಾಗಿದೆ. ಹಾಗೂ
ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಮಾಸಿಕ 10 ಕೆಜಿ ಆಹಾರ ಧಾನ್ಯ ತಲುಪಿಸಲಾಗುತ್ತಿದೆ. ಗೃಹಜ್ಯೋತಿ ಯೋಜನೆಯಡಿ 2,99,249 ಮನೆಗಳಿಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಒದಗಿಸಲಾಗಿದ್ದು, ಇದಕ್ಕಾಗಿ ರೂ.509.28 ಕೋಟಿ ಅನುದಾನ ಬಳಕೆಯಾಗಿದೆ. ಯುವನಿಧಿ ಯೋಜನೆಯಡಿ ಜಿಲ್ಲೆಯ 13,414 ನಿರುದ್ಯೋಗಿ ಪದವೀಧರರು ಹಾಗೂ ಡಿಪೆÇ್ಲಮಾಧಾರಿಗಳಿಗೆ ಒಟ್ಟು ರೂ.35.33 ಕೋಟಿ ಭತ್ಯೆ ವಿತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಮಾಹಿತಿ ನೀಡಿದರು.
ಬರ ಪರಿಸ್ಥಿತಿ
ಮುಂಗಾರು ಮಳೆ ಕೊರತೆಯಿಂದಾಗಿ ಜಿಲ್ಲೆಯ 1,59,542 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಕೇವಲ ಶೇ.42 ರಷ್ಟು (67,000 ಹೆಕ್ಟೇರ್) ಮಾತ್ರ ಬಿತ್ತನೆಯಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಬಳ್ಳಾರಿ, ಸಂಡೂರು, ಕಂಪ್ಲಿ ಮತ್ತು ಕುರುಗೋಡು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ ಎಂದರು.
ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 90 ಟಿ.ಎಂ.ಸಿ. ನೀರು ಸಂಗ್ರಹವಿದ್ದು, ಕುಡಿಯುವ ನೀರು ಮತ್ತು ಕೃಷಿಗೆ ಸಮರ್ಪಕವಾಗಿ ಬಳಸಲು ಆದ್ಯತೆ ನೀಡಲಾಗಿದೆ. ಎಂದು ತಿಳಿಸಿದರು.
ಡಿಜಿಟಲೀಕರಣ ಮತ್ತು ನಾಗರಿಕ ಸೇವೆ:
ಜಿಲ್ಲೆಯಲ್ಲಿ ‘ಭೂ ಸುರಕ್ಷಾ’ ಅಡಿ 2.90 ಕೋಟಿ ಪುಟಗಳ ದಾಖಲೆಗಳ ಡಿಜಿಟಲೀಕರಣ ಮಾಡಲಾಗಿದೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಂಗವಾಗಿ ಮನೆಬಾಗಿಲಿಗೆ ಜಾತಿ ಪ್ರಮಾಣ ಪತ್ರ ವಿತರಣೆ ಮೂಲಕ ಬಳ್ಳಾರಿಯಲ್ಲಿ ಶೇ. 80ರಷ್ಟು ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಬಾಬು ಜಗಜೀವನ್ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಬಳ್ಳಾರಿ ವಲಯ ಪೆÇಲೀಸ್ ಮಹಾನಿರೀಕ್ಷಕ ಡಾ.ಪಿ.ಎಸ್ ಹರ್ಷ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿ- ಸಿಬ್ಬಂದಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್