



ಬಳ್ಳಾರಿ, 14 ಆಗಸ್ಟ್ (ಹಿ.ಸ.)
ಆ್ಯಂಕರ್ : ಬಳ್ಳಾರಿ ಪಶ್ಚಿಮ ವಲಯದ ಬೊಬ್ಬಕುಂಟಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಒಸಡು ರೋಗಗಳು ಮತ್ತು ಬಾಯಿಯ ಆರೋಗ್ಯ ನಿರ್ವಹಣೆ' ಕುರಿತು ಬಳ್ಳಾರಿಯ ಬಿಎಂಸಿಆರ್ಸಿ ಸಂಸ್ಥೆಯ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವಸಡು ರೋಗ (ಪಿರಿಯೊಡಾಂಟಿಕ್ಸ್) ವಿಭಾಗದ ವತಿಯಿಂದ ವಿಶ್ವ ಬಾಯಿ ಸ್ವಚ್ಛತಾ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಕ್ಕಳಿಗೆ ಬಾಯಿಯ ನೈರ್ಮಲ್ಯ ಹಾಗೂ ಒಸಡುಗಳ ಆರೋಗ್ಯದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 90 ಶಾಲಾ ವಿದ್ಯಾರ್ಥಿಗಳು ಮತ್ತು 10ಕ್ಕೂ ಹೆಚ್ಚು ಶಿಕ್ಷಕ ವೃಂದದವರು ಸಕ್ರಿಯವಾಗಿ ಭಾಗವಹಿಸಿದ್ದರು.
ವೈದ್ಯರ ತಂಡವು ಬಾಯಿಯ ನೈರ್ಮಲ್ಯ ಕಾಪಾಡಿಕೊಳ್ಳುವ ಸೂಕ್ತ ವಿಧಾನಗಳು ಮತ್ತು ಒಸಡು ರೋಗಗಳಿಂದ ಬಾರಬಹುದಾದ ತೊಂದರೆಗಳ ಬಗ್ಗೆ ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡಿದರು.
ವಸಡು ರೋಗ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕಿ ಡಾ. ಭಾರತಿ ಎಸ್.ಎಚ್., ಸಹಾಯಕ ಪ್ರಾಧ್ಯಾಪಕರಾದ ಡಾ. ರಾಧಿಕಾ ಕೆ.ಬಿ. ಹಾಗೂ ಡಾ. ಶ್ವೇತಾ ವಿ. ಜಲ್ಲಿ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಹೈಜಿನಿಸ್ಟ್ ದೀಪಾ ಹಾಗೂ ಇಂಟರ್ನ್ಗಳಾದ ದೇವಿಕಾ, ಜ್ಯೋತಿ ಮತ್ತು ಅಂಜಲಿಪ್ರಿಯಾ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬ್ರಶಿಂಗ್ ತಂತ್ರಗಳು ಮತ್ತು ದಿನನಿತ್ಯದ ಬಾಯಿಯ ಆರೈಕೆಯ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್