
ಕೊಪ್ಪಳ, 14 ಆಗಸ್ಟ್ (ಹಿ.ಸ.)
ಆ್ಯಂಕರ್: ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಆಡಳಿತ, ನಗರಸಭೆ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ಜಿಲ್ಲೆಯ ಮದ್ಯಮುಕ್ತ ಹಟ್ಟಿ ಗ್ರಾಮಕ್ಕೆ ಸಂಯಮ ಪ್ರಶಸ್ತಿ-2026 ಪ್ರದಾನ ಸಮಾರಂಭ ಆಗಸ್ಟ್ 16ರಂದು ಹಟ್ಟಿ ಗ್ರಾಮದಲ್ಲಿ ಸಂಜೆ 4.30ಕ್ಕೆ ನೆರವೇರಲಿದ್ದು, ಗ್ರಾಮದಲ್ಲಿ ಹಬ್ಬದ ಸಂಭ್ರಮ ಕಾಣುತ್ತಿದೆ.
ಬೆಂಗಳೂರಿನ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಕೊಪ್ಪಳ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಕೊಪ್ಪಳ ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದಲ್ಲಿ ವೇದಿಕೆ ಸಿದ್ಧತೆ ಸೇರಿದಂತೆ ಹಟ್ಟಿ ಗ್ರಾಮದಲ್ಲಿ ಶುಚಿತ್ವ ಹಾಗೂ ಇತರೆ ಕಾರ್ಯಗಳು ಭರ್ಜರಿ ನಡೆದಿವೆ.
ಈ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯ ಗಾಂಧಿ ಬಳಗದ ಸದಸ್ಯರು ಕೈ ಜೋಡಿಸಿದ್ದು ಗಣ್ಯರಿಗೆ ಆಹ್ವಾನ ಪತ್ರಿಕೆ ವಿತರಣೆ, ಅಂದು ಕಾಮನೂರನಿಂದ ಹಟ್ಟಿ ಗ್ರಾಮದವರೆಗೆ ಕಾಲ್ನಡಿಗೆ ಜಾಥಾ, ಹಳ್ಳಿಹಳ್ಳಿಗೆ ಸಂಚರಿಸಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ.
ಆ. 16ರಂದು ನಡೆಯುವ ಕಾರ್ಯಕ್ರಮದಲ್ಲಿ ಕೊಪ್ಪಳದ ಅಭಿನವ ಸಿದ್ದೇಶ್ವರ ಸ್ವಾಮೀಜಿ, ಇಳಕಲ್ನ ಗುರು ಮಹಾಂತ ಸ್ವಾಮೀಜಿ, ಸಚಿವರಾದ ಶಿವರಾಜ ತಂಗಡಗಿ, ಬಸವರಾಜ ರಾಯರೆಡ್ಡಿ ಸೇರಿದಂತೆ ಸಂಸದರು, ಶಾಸಕರು ಸೇರಿದಂತೆ ಗಣ್ಯಮಹನಿಯರು ಉಪಸ್ಥಿತರಿರುವರು.
ಕೊಪ್ಪಳ ಜಿಲ್ಲೆಯ ಮದ್ಯ ಮುಕ್ತ ಗ್ರಾಮಗಳು: ಕೊಪ್ಪಳ ತಾಲ್ಲೂಕಿನ ಹಟ್ಟಿ, ತಾಳ ಕನಕಾಪುರ, ಕಾಮನೂರು, ಹನುಮನಹಳ್ಳಿ ಹಾಗೂ ಲೇಬಗೇರಿ, ಕುಕನೂರು ತಾಲ್ಲೂಕಿನ ಬಿನ್ನಾಳ ಮತ್ತು ಚಿಕ್ಕೇನಕೊಪ್ಪ, ಕುಷ್ಟಗಿ ತಾಲ್ಲೂಕಿನ ಮತ್ನಾಳ, ನಾಗರಾಳ, ಬೋದೂರು ತಾಂಡಾ ಹಾಗೂ ಹಿರೇಬನ್ನಿಗೋಳ ಒಳಗೊಂಡಂತೆ ಈ ಎಲ್ಲ ಪ್ರಮುಖ ಗ್ರಾಮಗಳಿಗೆ ಕಾರ್ಯಕ್ರಮದಲ್ಲಿ ಮದ್ಯ ಮಾರಾಟ ಮುಕ್ತ ಅಭಿನಂದನಾ ಪ್ರಶಸ್ತಿ ವಿತರಣೆಯಾಗಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್