


ಕೊಪ್ಪಳ, 14 ಆಗಸ್ಟ್ (ಹಿ.ಸ.)
ಆ್ಯಂಕರ್: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಕೊಪ್ಪಳದ ಗಾಂಧಿ ಬಳಗವು ಜಂಟಿಯಾಗಿ ಪದವಿ ಓದುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳಿಗೆ ‘ಮದ್ಯ ಮತ್ತು ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಯುವಜನತೆಯ ಪಾತ್ರ’ ವಿಷಯದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಎಚ್. ಈರಮ್ಮ ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು 70 ವಿದ್ಯಾರ್ಥಿಗಳು ಈ ಸ್ಪರ್ಧೆಗೆ ಪ್ರಬಂಧಗಳನ್ನು ಕಳುಹಿಸಿದ್ದರು.
ಈರಮ್ಮ ಕೊಪ್ಪಳದ ಗವಿಸಿದ್ಧೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಬಿಎಸ್ಸಿ ಎರಡನೇ ವರ್ಷದ ವಿದ್ಯಾರ್ಥಿನಿ. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಿಕಾಂ ಪ್ರಥಮ ವರ್ಷ ಓದುತ್ತಿರುವ ಕಾರಟಗಿ ತಾಲ್ಲೂಕಿನ ಮೈಲಾಪುರ ಸಮೀಪದ ಗುಡೂರು ಗ್ರಾಮದ ಚೈತ್ರಾ ಸೋಮಣ್ಣ ದ್ವಿತೀಯ ಮತ್ತು ತಾಲ್ಲೂಕಿನ ಇರಕಲ್ಲಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎ ವಿದ್ಯಾರ್ಥಿನಿ ಅಂಬಿಕಾ ಶರಣಪ್ಪ ವೀರಾಪುರ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಥಮ ಸ್ಥಾನ ಪಡೆದವರಿಗೆ ರೂ. 3,000, ದ್ವಿತೀಯ ರೂ. 2,000 ಹಾಗೂ ತೃತೀಯ ಸ್ಥಾನ ಪಡೆದವರಿಗೆ ರೂ. 1000 ನಗದು ಬಹುಮಾನ ಸಿಗಲಿದೆ.
ನಿರ್ಣಾಯಕರಾಗಿ ಉಪನ್ಯಾಸಕರಾದ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಹನುಮಂತಪ್ಪ ಶಲ್ವುಡಿ, ಹನುಮೇಶ ಚೌಡಕಿ, ಸಹ ಶಿಕ್ಷಕ ಪ್ರಾಣೇಶ ಪೂಜಾರ, ರಂಗ ಶಿಕ್ಷಕ ಗುರುರಾಜ ಎಲ್. ಕಾರ್ಯನಿರ್ವಹಿಸಿದ್ದರು.
16ರಂದು ಕಾರ್ಯಕ್ರಮ: ಮಂಡಳಿಯು ತಾಲ್ಲೂಕಿನ ಹಟ್ಟಿ ಗ್ರಾಮಕ್ಕೆ ರಾಜ್ಯ ಮಟ್ಟದ ಸಂಯಮ ಪ್ರಶಸ್ತಿ ಘೋಷಣೆ ಮಾಡಿದ್ದು ಆ. 16ರಂದು ಸಂಜೆ 4.30ಕ್ಕೆ ಅದೇ ಗ್ರಾಮದಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್