
ಬೆಂಗಳೂರು, 14 ಆಗಸ್ಟ್ (ಹಿ.ಸ.):
ಆ್ಯಂಕರ್:ರಾಜ್ಯದ ಅಭಿವೃದ್ಧಿಗಾಗಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಶಾಸಕರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಸದನದ ಹೊರಗೆ ರಾಜಕೀಯ ಮಾಡೋಣ, ಆದರೆ ಸದನದ ಒಳಗೆ ಜನರ ಹಿತಕ್ಕಾಗಿ ಒಂದಾಗಿ ಕೆಲಸ ಮಾಡೋಣ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ವಿಧಾನಸಭೆಯಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಪರಿಚಯಿಸಿ ಮಾತನಾಡಿದ ಅವರು, 224 ಶಾಸಕರೂ ತಮ್ಮ ದೃಷ್ಟಿಯಲ್ಲಿ ಸಮಾನರು. ವಿರೋಧ ಪಕ್ಷದ ನಾಯಕರು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ಪಡೆದುಕೊಂಡು ರಾಜ್ಯದ ಅಭಿವೃದ್ಧಿಗೆ ‘ಟೀಮ್ ಕರ್ನಾಟಕ’ವಾಗಿ ಕೆಲಸ ಮಾಡುವುದೇ ತಮ್ಮ ಉದ್ದೇಶ ಎಂದರು.
ರಾಜ್ಯವನ್ನು ಮುನ್ನಡೆಸಿದ ಎಲ್ಲ ಮುಖ್ಯಮಂತ್ರಿಗಳ ಕೊಡುಗೆಯನ್ನು ಸ್ಮರಿಸಿದ ಶಿವಕುಮಾರ್, ಕಡಿದಾಳು ಮಂಜಪ್ಪ, ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ಗುಂಡೂರಾವ್, ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪ ಮೊಯ್ಲಿ, ದೇವೇಗೌಡ, ಎಸ್.ಎಂ. ಕೃಷ್ಣ, ಧರಂ ಸಿಂಗ್, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಹಾಗೂ ಸಿದ್ದರಾಮಯ್ಯ ಅವರು ತಮ್ಮದೇ ರೀತಿಯಲ್ಲಿ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ
ತಾವು ಯಾರ ವಿರುದ್ಧವೂ ಅಧಿಕಾರ ದುರುಪಯೋಗಪಡಿಸಿಕೊಳ್ಳುವುದಿಲ್ಲ. ಹೆಚ್ಚು ಸ್ನೇಹಿತರನ್ನು ಸಂಪಾದಿಸುವುದು ತಮ್ಮ ಆಶಯ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಹಿತಕ್ಕಾಗಿ ಕೆಲಸ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದರು.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಸಹಕಾರವನ್ನೂ ರಾಜ್ಯದ ಅಭಿವೃದ್ಧಿಗೆ ಪಡೆಯಲು ಸಿದ್ಧವಿರುವುದಾಗಿ ತಿಳಿಸಿದರು. ಕುಮಾರಸ್ವಾಮಿ ಅವರು ರಾಜ್ಯಕ್ಕೆ ಉದ್ಯೋಗ ತರಲು ಮುಂದಾದರೆ ಅಗತ್ಯ ಜಾಗ ನೀಡುವ ಮೂಲಕ ಸಹಕಾರ ನೀಡೋಣ ಎಂದರು.
2028ರ ಚುನಾವಣೆ ಬಗ್ಗೆ ನನಗೆ ಗೊತ್ತಿದೆ; ನಾನು ಫುಟ್ಬಾಲ್ ಆಡುವವನಲ್ಲ, ಚೆಸ್ ಆಡುವವನು
2028ರ ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂಬುದು ತಮಗೆ ಗೊತ್ತಿದೆ. “ನಾನು ಫುಟ್ಬಾಲ್ ಆಡುವವನಲ್ಲ, ಚೆಸ್ ಆಡುವವನು” ಎಂದು ಹೇಳಿದ ಶಿವಕುಮಾರ್, ಚುನಾವಣೆಯ ವಿಚಾರವನ್ನು ಬದಿಗಿಟ್ಟು ಪ್ರಸ್ತುತ ಜನರ ಸೇವೆಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.
ಬೆಂಗಳೂರು ಮಾತ್ರವಲ್ಲ, ಇತರ ನಗರಗಳ ಅಭಿವೃದ್ಧಿಗೂ ಒತ್ತು
ಬೆಂಗಳೂರು ಬೆಳೆಯುತ್ತಿರುವ ರೀತಿಯಲ್ಲೇ ರಾಜ್ಯದ ಎರಡನೇ ಮತ್ತು ಮೂರನೇ ಹಂತದ ನಗರಗಳನ್ನೂ ಅಭಿವೃದ್ಧಿಪಡಿಸಬೇಕು. ಉಪನಗರಗಳ ಅಭಿವೃದ್ಧಿ, ಹೊಸ ಯೋಜನೆಗಳು ಹಾಗೂ ವರ್ತುಲ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಕರ್ನಾಟಕದ ಜ್ಞಾನ, ಪ್ರತಿಭೆ ಹಾಗೂ ಮಾನವ ಸಂಪನ್ಮೂಲ ರಾಜ್ಯದ ದೊಡ್ಡ ಶಕ್ತಿ. ಕೃಷಿ, ನೀರಾವರಿ, ತೋಟಗಾರಿಕೆ ಹಾಗೂ ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಹೇಳಿದರು.
25 ವರ್ಷಗಳಲ್ಲಿ ಹಸಿರು ಕರ್ನಾಟಕದ ಗುರಿ
ಮುಂದಿನ 25 ವರ್ಷಗಳಲ್ಲಿ ಕರ್ನಾಟಕವನ್ನು ಹಸಿರು ರಾಜ್ಯವನ್ನಾಗಿ ಮಾಡಬೇಕು. ನೀರಿನ ಪೋಲು ತಡೆದು ಕೃಷಿಗೆ ಬಳಸಬೇಕು. ರೈತರ ಬದುಕಿಗೆ ಆಸರೆಯಾಗಲು ತೋಟಗಾರಿಕೆ ಮತ್ತು ಹೈನುಗಾರಿಕೆಯನ್ನು ಪರ್ಯಾಯ ಆದಾಯದ ಮೂಲಗಳಾಗಿ ಬೆಳೆಸಬೇಕು ಎಂದರು.
ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಸಿಎಸ್ಆರ್ ನಿಧಿಯನ್ನು ಪ್ರಾಥಮಿಕ ಶಿಕ್ಷಣಕ್ಕೆ ಬಳಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭಾಧ್ಯಕ್ಷರ ಆಯ್ಕೆಯಲ್ಲಿ ವಿರೋಧ ಸರಿಯಲ್ಲ
ಸಭಾಧ್ಯಕ್ಷರ ಪೀಠ ವೈಯಕ್ತಿಕ ಸ್ಥಾನವಲ್ಲ. ಸಭಾಧ್ಯಕ್ಷರಾದವರು ಪಕ್ಷಾತೀತವಾಗಿ ಎಲ್ಲರ ಮಾತು ಕೇಳಬೇಕು. ಹೀಗಾಗಿ ವಿರೋಧ ಪಕ್ಷದವರು ಸಭಾಧ್ಯಕ್ಷರ ಆಯ್ಕೆಯನ್ನು ವಿರೋಧಿಸುವ ಬದಲು ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು.
ಅಧಿಕಾರ ಶಾಶ್ವತವಲ್ಲ. ಇಂದು ಆಡಳಿತ ಪಕ್ಷದಲ್ಲಿರುವವರು ನಾಳೆ ವಿರೋಧ ಪಕ್ಷದಲ್ಲಿರಬಹುದು, ವಿರೋಧ ಪಕ್ಷದವರು ಆಡಳಿತಕ್ಕೆ ಬರಬಹುದು. ಜನರು ನಮ್ಮನ್ನು ಆಯ್ಕೆ ಮಾಡಿರುವುದು ರಾಜ್ಯದ ಹಿತ ಕಾಪಾಡಲು ಎಂದು ಹೇಳಿದರು.
ಕಟ್ಟಕಡೆಯ ವ್ಯಕ್ತಿಗೂ ಅಧಿಕಾರದ ಪ್ರಯೋಜನ
ತಮ್ಮ 40 ವರ್ಷಗಳ ರಾಜಕೀಯ ಅನುಭವದಲ್ಲಿ ಏಳು-ಬೀಳುಗಳನ್ನು ಕಂಡಿದ್ದೇನೆ. ಹೊಸ ಆಲೋಚನೆಗಳೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ತಮ್ಮ ಅಧಿಕಾರವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲವಾಗಬೇಕು ಎಂಬುದೇ ತಮ್ಮ ಆಶಯ ಎಂದು ಮುಖ್ಯಮಂತ್ರಿ ಹೇಳಿದರು.
ಸಿದ್ದರಾಮಯ್ಯ ಅವರ ಅವಧಿಯಲ್ಲಿ ಜಾರಿಯಾದ ಜನಪರ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ ಅವರು, ರಾಜ್ಯದ ಅಭಿವೃದ್ಧಿಗಾಗಿ ಎಲ್ಲರೂ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಕರೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.