
ಬೆಂಗಳೂರು, 14 ಆಗಸ್ಟ್ (ಹಿ.ಸ.):
ಆ್ಯಂಕರ್:
ರಾಜಕಾರಣವನ್ನು ಹೊರಗೆ ಮಾಡೋಣ, ವಿಧಾನಮಂಡಲದಲ್ಲಿ ಎಲ್ಲರೂ ಒಗ್ಗಟ್ಟಾಗಿ ಜನಸೇವೆ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ವಿಧಾನಪರಿಷತ್‌ನಲ್ಲಿ ಶುಕ್ರವಾರ ಮಾತನಾಡಿದ ಅವರು, ಅಧಿಕಾರ ಶಾಶ್ವತವಲ್ಲ. ನಾವು ಮಾಡಿದ ಕೆಲಸ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಜನರು ನಮ್ಮನ್ನು ಅಧಿಕಾರದಿಂದಲ್ಲ, ಸಾಧನೆಯಿಂದ ನೆನಪಿಸಿಕೊಳ್ಳುತ್ತಾರೆ ಎಂದರು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ತಮಗೆ ನೀಡಿದ್ದ ಭವಿಷ್ಯವಾಣಿ ನಿಜವಾಗಿದೆ ಎಂದು ಸ್ಮರಿಸಿದ ಶಿವಕುಮಾರ್, ಮಾನವ ಧರ್ಮದಲ್ಲಿ ನಂಬಿಕೆ ಇಟ್ಟಿದ್ದೇನೆ. ಸರ್ವಧರ್ಮದ ಗುರುಗಳ ಆಶೀರ್ವಾದ ಹಾಗೂ ಜನರ ಪ್ರಾರ್ಥನೆಯಿಂದ ಮುಖ್ಯಮಂತ್ರಿ ಸ್ಥಾನ ದೊರೆತಿದೆ ಎಂದರು.
ಕೆಂಗಲ್ ಹನುಮಂತಯ್ಯ, ಎಸ್.ಎಂ. ಕೃಷ್ಣ, ಧರಂಸಿಂಗ್, ಜೆ.ಎಚ್. ಪಟೇಲ್, ದೇವರಾಜ ಅರಸು, ವೀರೇಂದ್ರ ಪಾಟೀಲ, ಗುಂಡೂರಾವ್, ರಾಮಕೃಷ್ಣ ಹೆಗಡೆ ಸೇರಿದಂತೆ ಹಲವು ನಾಯಕರ ಆಡಳಿತ ಮತ್ತು ಕೊಡುಗೆಗಳನ್ನು ಸ್ಮರಿಸಿದ ಅವರು, ಹಿಂದಿನ ನಾಯಕರು ರಾಜ್ಯಕ್ಕೆ ಬಿಟ್ಟುಹೋದ ಅಭಿವೃದ್ಧಿಯ ಸಾಕ್ಷಿಗುಡ್ಡೆಗಳನ್ನು ಮುಂದುವರಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಪ್ರಶಂಸಿಸಿದ ಸಿಎಂ, ಅವರಿಗೆ ‘ಮಣ್ಣಿನ ಮಗ’ ಎಂಬ ಬಿರುದು ಸುಮ್ಮನೆ ಬಂದಿಲ್ಲ. ರೈತರ ಪರವಾಗಿ ಅವರು ಸಾಕಷ್ಟು ಹೋರಾಟ ಮಾಡಿದ್ದಾರೆ ಹಾಗೂ ನೀರಾವರಿ ಯೋಜನೆಗಳಿಗೆ ಕೊಡುಗೆ ನೀಡಿದ್ದಾರೆ ಎಂದರು. ಎಚ್.ಡಿ. ಕುಮಾರಸ್ವಾಮಿ ಅವರ ಬಿಡದಿ ಟೌನ್‌ಶಿಪ್ ಯೋಜನೆ ಉತ್ತಮವಾಗಿದ್ದು, ದೇವೇಗೌಡರ ನೈಸ್ ರಸ್ತೆ ಯೋಜನೆಯೂ ಅತ್ಯುತ್ತಮವಾಗಿದೆ ಎಂದು ಹೇಳಿದರು.
ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ನಗರಕ್ಕೆ ಬರುತ್ತಿರುವ ಜನರಿಗೆ ಮೂಲಸೌಕರ್ಯ ಒದಗಿಸಲು ಹೊಸ ನಗರಗಳು ಮತ್ತು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ತಮ್ಮ ಆಡಳಿತದ ನೀತಿಯನ್ನು ವಿವರಿಸಿದ ಶಿವಕುಮಾರ್, “ನನ್ನದು ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನನ ಗುರಿ, ವಿಧುರನ ನೀತಿ, ಭೀಮನ ಬಲ ಹಾಗೂ ಕೃಷ್ಣನ ತಂತ್ರ” ಇರಬೇಕು. ಈ ಗುಣಗಳ ಸಮನ್ವಯದಿಂದಲೇ ಯಶಸ್ಸು ಸಾಧ್ಯ ಎಂದರು.
ವಿಧಾನಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರ ರಾಜಕೀಯ ಪಯಣವನ್ನು ಸ್ಮರಿಸಿದ ಅವರು, ಅವರು ಇಂದು ಸಭಾಪತಿ ಸ್ಥಾನದಲ್ಲಿರುವುದಕ್ಕೆ ಹೆಮ್ಮೆ ಇದೆ ಎಂದರು. ಸಚಿವರ ಪರಿಚಯದ ವೇಳೆ ಯತೀಂದ್ರ ಸಿದ್ದರಾಮಯ್ಯ ಅವರನ್ನು ‘ನಮ್ಮ ಹೊಸ ಹೀರೋ, ನಮ್ಮ ನಾಯಕ’ ಎಂದು ಶ್ಲಾಘಿಸಿದರು.
ರಾಜ್ಯದಲ್ಲಿ ಸುಮಾರು 8 ಸಾವಿರ ಕೋಟಿ ರೂ.ಗಳ ಸಿಎಸ್‌ಆರ್ ಅನುದಾನ ಲಭ್ಯವಿದ್ದು, ಅದರ ದುರ್ಬಳಕೆಗೆ ಕಡಿವಾಣ ಹಾಕಲು ಸರ್ಕಾರ ಹೊಸ ನೀತಿ ರೂಪಿಸುತ್ತಿದೆ ಎಂದು ಶಿವಕುಮಾರ್ ಹೇಳಿದರು. ಪಂಚಾಯಿತಿ ಮಟ್ಟದಲ್ಲಿ ಕಂಪನಿಗಳೇ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಿಎಸ್‌ಆರ್ ನಿಧಿಯಿಂದ ಅಭಿವೃದ್ಧಿಪಡಿಸುವ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ಗ್ರಾಮೀಣ ಜನರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ಹಾಗೂ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶ ಇದಾಗಿದೆ ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.