
ಗದಗ, 14 ಆಗಸ್ಟ್ (ಹಿ.ಸ.)
ಆ್ಯಂಕರ್:- ಸಿಂಗಟಾಲೂರ ಏತ ನೀರಾವರಿ ಯೋಜನೆಗಾಗಿ ಭೂಮಿ ಕಳೆದುಕೊಂಡು ದಶಕಗಳ ಕಾಲ ಪರಿಹಾರಕ್ಕಾಗಿ ಕಾಯುತ್ತಿರುವ ರೈತರ ಆಕ್ರೋಶ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಗದಗ ಜಿಲ್ಲಾ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬೀಡನಾಳ ಗ್ರಾಮದ ರೈತರು ವಕೀಲರೊಂದಿಗೆ ಆಗಮಿಸಿ ಗದಗ ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿ ಮಾಡಿ ತೆಗೆದುಕೊಂಡು ಹೋದ ಘಟನೆ ನಡೆದಿದೆ.
ಸಿಂಗಟಾಲೂರ ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬೀಡನಾಳ, ಮೇವುಂಡಿ, ಕೊರ್ಲಹಳ್ಳಿ, ಯಕ್ಲಾಪೂರ ಸೇರಿದಂತೆ ಹಲವು ಗ್ರಾಮಗಳ ರೈತರು ನೂರಾರು ಎಕರೆ ಕೃಷಿ ಭೂಮಿಯನ್ನು ಕಳೆದುಕೊಂಡಿದ್ದಾರೆ. ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಂಡು ಹಲವು ವರ್ಷಗಳು ಕಳೆದರೂ ಸಮರ್ಪಕ ಪರಿಹಾರ ದೊರೆಯದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಪರಿಹಾರಕ್ಕಾಗಿ ರೈತರು ಹಲವು ವರ್ಷಗಳಿಂದ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದಾರೆ. ಅಧಿಕಾರಿಗಳಿಗೆ ಮನವಿ ಸಲ್ಲಿಸುವುದು, ಜನಪ್ರತಿನಿಧಿಗಳ ಗಮನಕ್ಕೆ ತರುವುದು ಸೇರಿದಂತೆ ವಿವಿಧ ರೀತಿಯಲ್ಲಿ ಹೋರಾಟ ನಡೆಸಿದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಕೊನೆಗೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಅರ್ಹ ರೈತರಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದರೂ, ಪರಿಹಾರ ಪಾವತಿಯಲ್ಲಿ ವಿಳಂಬವಾಗಿದೆ ಎಂಬುದು ರೈತರ ಆರೋಪವಾಗಿದೆ.
ಕೆಲವು ರೈತರಿಗೆ ಸುಮಾರು ₹1.80 ಕೋಟಿ ಪರಿಹಾರ ನೀಡುವಂತೆ ನ್ಯಾಯಾಲಯದ ಆದೇಶವಿದ್ದರೂ, ಆದೇಶದಂತೆ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಜಾರಿ ಕ್ರಮ ಮುಂದುವರಿದಿದೆ. ಇದರ ಭಾಗವಾಗಿ ಜಿಲ್ಲಾಡಳಿತದ ಪೀಠೋಪಕರಣಗಳ ಜಪ್ತಿ ಬಳಿಕ ಇದೀಗ ಜಿಲ್ಲಾಧಿಕಾರಿಗಳ ಅಧಿಕೃತ ಕಾರನ್ನೂ ಜಪ್ತಿ ಮಾಡಲಾಗಿದೆ ಎಂದು ರೈತರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಾರು ಜಪ್ತಿ
ಶುಕ್ರವಾರ ಬೀಡನಾಳ ಗ್ರಾಮದ ರೈತರು ತಮ್ಮ ವಕೀಲರನ್ನು ಕರೆತಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನ್ಯಾಯಾಲಯದ ಆದೇಶದನ್ವಯ ಜಪ್ತಿ ಪ್ರಕ್ರಿಯೆ ಕೈಗೊಂಡರು. ಅಧಿಕಾರಿಗಳ ಗಮನಕ್ಕೆ ವಿಷಯ ತಂದು, ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿ ಮಾಡಿ ಕೊಂಡೊಯ್ಯಲಾಯಿತು.
ರೈತರ ಈ ಕ್ರಮದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ತಮ್ಮ ಭೂಮಿಯನ್ನು ಸರ್ಕಾರದ ಯೋಜನೆಗಾಗಿ ನೀಡಿದರೂ, ವರ್ಷಗಳಾದರೂ ಪರಿಹಾರಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಹತ್ತು ವರ್ಷವಾದರೂ ಪರಿಹಾರ ಸಿಕ್ಕಿಲ್ಲ”
ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿರುವ ರೈತ ಮಹಿಳೆಯೊಬ್ಬರು ತಮ್ಮ ನೋವನ್ನು ತೋಡಿಕೊಂಡು ಕಣ್ಣೀರಿಟ್ಟರು. “ಹತ್ತು ವರ್ಷಗಳಾದರೂ ಸರ್ಕಾರ ನಮ್ಮ ಪರಿಹಾರ ನೋಡಿಲ್ಲ. ಗಂಡ ತೀರಿಹೋಗಿದ್ದಾರೆ. ಮಕ್ಕಳೂ ಇಲ್ಲ. ಕೋರ್ಟ್ ಮೆಟ್ಟಿಲೇರಿ ಹೋರಾಟ ಮಾಡಿ ಸಾಕಾಗಿದೆ. ನಮ್ಮ ನೋವನ್ನು ಕೇಳುವವರು ಯಾರು?” ಎಂದು ಅವರು ಅಳಲು ತೋಡಿಕೊಂಡರು.
ಭೂಮಿ ಕಳೆದುಕೊಂಡ ಬಳಿಕ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಕೃಷಿ ಭೂಮಿಯೇ ಕುಟುಂಬಗಳ ಬದುಕಿನ ಆಧಾರವಾಗಿತ್ತು. ಆದರೆ ಯೋಜನೆಗಾಗಿ ಭೂಮಿ ಕಳೆದುಕೊಂಡ ನಂತರ ಪರಿಹಾರ ಹಣ ಸಮಯಕ್ಕೆ ದೊರೆಯದ ಕಾರಣ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ರೈತರು ಆರೋಪಿಸಿದರು.
“ನಾವು ಗುಡಿಸಲಲ್ಲಿ ವಾಸ ಮಾಡುತ್ತೇವೆ, ಅಧಿಕಾರಿಗಳು ಎಸಿ ರೂಂನಲ್ಲಿ”
ರೈತರು ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಡಿಸಿ ಹಾಗೂ ಅಧಿಕಾರಿಗಳಿಗೆ ಸರ್ಕಾರ ಸಂಬಳ ಕೊಡುತ್ತದೆ. ಅವರು ಎಸಿ ರೂಂನಲ್ಲಿ ಹಾಯಾಗಿ ಕುಳಿತುಕೊಳ್ಳುತ್ತಾರೆ. ಆದರೆ ನಮ್ಮ ಕಷ್ಟವನ್ನು ಯಾರು ಕೇಳುತ್ತಾರೆ? ನಾವು ಗುಡಿಸಲಲ್ಲಿ ವಾಸ ಮಾಡುತ್ತೇವೆ. ನಮ್ಮ ಭೂಮಿ ಕಳೆದುಕೊಂಡು ವರ್ಷಗಳಾದರೂ ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲು ಏರಬೇಕಾಗಿದೆ” ಎಂದು ರೈತರು ಕಿಡಿಕಾರಿದರು.
ಸರ್ಕಾರಿ ಯೋಜನೆಗಳಿಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ರೈತರ ಹಿತವನ್ನು ಪರಿಗಣಿಸಬೇಕು. ಭೂಮಿ ಕಳೆದುಕೊಂಡವರಿಗೆ ನಿಗದಿತ ಅವಧಿಯೊಳಗೆ ನ್ಯಾಯಯುತ ಪರಿಹಾರ ನೀಡಬೇಕು. ಪರಿಹಾರಕ್ಕಾಗಿ ವರ್ಷಗಟ್ಟಲೆ ಕಚೇರಿ ಹಾಗೂ ನ್ಯಾಯಾಲಯಗಳ ಸುತ್ತ ರೈತರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಅವರು ಒತ್ತಾಯಿಸಿದರು.
ನ್ಯಾಯಾಲಯದ ಆದೇಶ ಜಾರಿಗೆ ರೈತರ ಒತ್ತಾಯ
ಸಿಂಗಟಾಲೂರ ಏತ ನೀರಾವರಿ ಯೋಜನೆ ಹಲವು ವರ್ಷಗಳ ಹಿಂದೆ ಆರಂಭವಾಗಿದ್ದು, ಯೋಜನೆಯ ವಿವಿಧ ಕಾಮಗಾರಿಗಳಿಗಾಗಿ ಹಲವಾರು ಗ್ರಾಮಗಳ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಹಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ.
ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡಬೇಕಾದ ಹೊಣೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ಮೇಲಿದೆ. ಆದೇಶಗಳಿದ್ದರೂ ಪರಿಹಾರ ಪಾವತಿಯಲ್ಲಿ ವಿಳಂಬವಾದರೆ ರೈತರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ನ್ಯಾಯಾಲಯದ ಆದೇಶಗಳನ್ನು ತ್ವರಿತವಾಗಿ ಜಾರಿಗೊಳಿಸಿ, ಅರ್ಹ ರೈತರಿಗೆ ಬಾಕಿ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.
ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಎಚ್ಚರಿಕೆ
ತಮ್ಮ ಹಕ್ಕಿನ ಪರಿಹಾರಕ್ಕಾಗಿ ವರ್ಷಗಳ ಕಾಲ ಕಾದಿದ್ದೇವೆ. ಇನ್ನೂ ವಿಳಂಬ ಮಾಡಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಡಳಿತ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯಾಲಯದ ಆದೇಶದಂತೆ ಬಾಕಿ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತರು ತಿಳಿಸಿದ್ದಾರೆ.
ಸಿಂಗಟಾಲೂರ ಏತ ನೀರಾವರಿ ಯೋಜನೆಗಾಗಿ ಭೂಮಿ ತ್ಯಾಗ ಮಾಡಿದ ರೈತರು ಇದೀಗ ತಮ್ಮ ನ್ಯಾಯಯುತ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿ ಹೋರಾಟ ನಡೆಸುತ್ತಿರುವುದು ಸರ್ಕಾರದ ಭೂಸ್ವಾಧೀನ ಮತ್ತು ಪರಿಹಾರ ಪಾವತಿ ವ್ಯವಸ್ಥೆಯ ಮೇಲೆಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಭಿವೃದ್ಧಿ ಯೋಜನೆಗಳಿಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ದೊರೆಯುವಂತೆ ಪರಿಣಾಮಕಾರಿ ವ್ಯವಸ್ಥೆ ರೂಪಿಸಬೇಕೆಂಬ ಆಗ್ರಹವೂ ಕೇಳಿಬಂದಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP