ಗುಟ್ಕಾ, ಪಾನ್ ಮಸಾಲಗಳ ಮೇಲೆ ಶಾಶ್ವತ ನಿಷೇಧಕ್ಕೆ ಶರಣಪ್ಪ ಸಲಾದಪುರ ಆಗ್ರಹ
ಕೊಪ್ಪಳ , 14 ಆಗಸ್ಟ್ (ಹಿ.ಸ.) ಆ್ಯಂಕರ್ : ಅಡಿಕೆ ಉತ್ಪನ್ನಗಳಾದ ಗುಟ್ಕಾ ಮತ್ತು ಪಾನ್ ಮಸಾಲಗಳ ಉತ್ಪಾದನೆ, ಸಂಗ್ರಹ, ಮಾರಾಟ ಹಾಗೂ ವಿತರಣೆಯ ಮೇಲೆ ರಾಜ್ಯ ಸರ್ಕಾರ ಒಂದು ವರ್ಷದ ಅವಧಿಗೆ ನಿಷೇಧ ಹೇರಿರುವ ಆದೇಶವನ್ನು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ಅವರು ಸ್ವಾಗತಿ
ಶರಣಪ್ಪ ಸಲಾದಪುರ


ಕೊಪ್ಪಳ , 14 ಆಗಸ್ಟ್ (ಹಿ.ಸ.)

ಆ್ಯಂಕರ್ : ಅಡಿಕೆ ಉತ್ಪನ್ನಗಳಾದ ಗುಟ್ಕಾ ಮತ್ತು ಪಾನ್ ಮಸಾಲಗಳ ಉತ್ಪಾದನೆ, ಸಂಗ್ರಹ, ಮಾರಾಟ ಹಾಗೂ ವಿತರಣೆಯ ಮೇಲೆ ರಾಜ್ಯ ಸರ್ಕಾರ ಒಂದು ವರ್ಷದ ಅವಧಿಗೆ ನಿಷೇಧ ಹೇರಿರುವ ಆದೇಶವನ್ನು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ಅವರು ಸ್ವಾಗತಿಸಿದ್ದಾರೆ.

ಕುರಿತು ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರದ ಈ ನಿರ್ಧಾರವು ಸಾರ್ವಜನಿಕ ಆರೋಗ್ಯದ ರಕ್ಷಣೆ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣದತ್ತ ಇಡಲಾದ ಅತ್ಯಂತ ಮಹತ್ವದ ಮತ್ತು ದಿಟ್ಟ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

ಗುಟ್ಕಾ, ಪಾನ್ ಮಸಾಲ ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಬಾಯಿ ಕ್ಯಾನ್ಸರ್ ಸೇರಿದಂತೆ ಅನೇಕ ಮಾರಣಾಂತಿಕ ಕಾಯಿಲೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೇರಿರುವ ಒಂದು ವರ್ಷದ ನಿಷೇಧವು ಸ್ವಾಗತಾರ್ಹ. ಆದರೆ ಈ ನಿಷೇಧವನ್ನು ಕೇವಲ ಒಂದು ವರ್ಷದ ಮಟ್ಟಿಗೆ ಸೀಮಿತಗೊಳಿಸದೆ, ರಾಜ್ಯದ ಜನರ ಆರೋಗ್ಯ ಹಿತದೃಷ್ಟಿಯಿಂದ ಶಾಶ್ವತ ನಿಷೇಧ ಜಾರಿಗೊಳಿಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಅಲ್ಲದೆ, ರಾಜ್ಯದಾದ್ಯಂತ ಅಕ್ರಮವಾಗಿ ಗುಟ್ಕಾ ಮತ್ತು ಪಾನ್ ಮಸಾಲಗಳನ್ನು ಉತ್ಪಾದಿಸುವ, ಸಂಗ್ರಹಿಸುವ, ಸಾಗಿಸುವ ಹಾಗೂ ಮಾರಾಟ ಮಾಡುವವರ ವಿರುದ್ಧ ನಿರಂತರ ದಾಳಿ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದೇ ವೇಳೆ, ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಅಕ್ರಮ ಮದ್ಯ ಮಾರಾಟ, ಕಳ್ಳಭಟ್ಟಿ ಮದ್ಯ ತಯಾರಿಕೆ ಹಾಗೂ ಮಾರಾಟ, ಮಾದಕ ವಸ್ತುಗಳ (ಡ್ರಗ್ಸ್) ಜಾಲ ಮತ್ತು ಸಾರ್ವಜನಿಕರ ಆರೋಗ್ಯ ಹಾಗೂ ಸಮಾಜದ ನೆಮ್ಮದಿಗೆ ಧಕ್ಕೆ ತರುವ ಇಂತಹ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ವಿಶೇಷ ಕಾರ್ಯಾಚರಣೆ ನಡೆಸಬೇಕು ಎಂದು ಸರ್ಕಾರವನ್ನು ಅವರು ಮನವಿ ಮಾಡಿದ್ದಾರೆ.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪೆಟ್ಟಿ ಅಂಗಡಿಗಳು, ಪರವಾನಗಿ ಇಲ್ಲದ ವ್ಯಕ್ತಿಗಳು ಹಾಗೂ ಅನಧಿಕೃತ ಸ್ಥಳಗಳಲ್ಲಿ ಮದ್ಯ ಮಾರಾಟ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಅಕ್ರಮ ಮದ್ಯ ಮಾರಾಟದ ವಿರುದ್ಧ ಅಬಕಾರಿ ಇಲಾಖೆ ಮತ್ತು ಪೆÇಲೀಸ್ ಇಲಾಖೆ ಜಂಟಿಯಾಗಿ ನಿರಂತರ ಕಾರ್ಯಾಚರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಈ ಅನಿಷ್ಟ ಪದ್ಧತಿಗೆ ಶಾಶ್ವತವಾಗಿ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸರ್ಕಾರ ಸಾರ್ವಜನಿಕ ಆರೋಗ್ಯಕ್ಕೆ ಆದ್ಯತೆ ನೀಡಿ ಕೈಗೊಂಡಿರುವ ಈ ಕ್ರಮವು ಆರೋಗ್ಯಕರ, ಸುರಕ್ಷಿತ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಶರಣಪ್ಪ ಸಲಾದಪುರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande