
ಬೆಂಗಳೂರು, 14 ಆಗಸ್ಟ್ (ಹಿ.ಸ.):
ಆ್ಯಂಕರ್:ಸ್ವಾತಂತ್ರ್ಯ ದಿನಾಚರಣೆಯಂದು ವಿಜಯನಗರ ಜಿಲ್ಲೆಯಲ್ಲಿ ರಾಷ್ಟ್ರಧ್ವಜಾರೋಹಣದಿಂದ ವಿನಾಯಿತಿ ನೀಡುವಂತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿರುವುದಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅಶೋಕ್, ಕಾಂಗ್ರೆಸ್ ಪಕ್ಷವು ದೇಶಕ್ಕಿಂತ ಪಕ್ಷದ ರಾಜಕಾರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ, ಮುಂಬರುವ ಉಪಚುನಾವಣೆಗಳು ಹಾಗೂ ಪಕ್ಷದ ಆಂತರಿಕ ರಾಜಕೀಯ ಕಾರ್ಯಗಳಲ್ಲಿ ನಿರತರಾಗಿರುವ ಕಾರಣ ಸ್ವಾತಂತ್ರ್ಯ ದಿನಾಚರಣೆಯಂದು ವಿಜಯನಗರದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲು ಸಮಯವಿಲ್ಲ ಎಂಬ ಕಾರಣವನ್ನು ಸಚಿವ ಜಮೀರ್ ಅಹ್ಮದ್ ನೀಡಿರುವುದು ಖಂಡನೀಯ ಎಂದು ಅಶೋಕ್ ಹೇಳಿದ್ದಾರೆ.
“ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜಾರೋಹಣದಂತಹ ಪವಿತ್ರ ಕರ್ತವ್ಯಕ್ಕಿಂತ ಪಕ್ಷದ ರಾಜಕೀಯ ಮತ್ತು ಚುನಾವಣಾ ಕೆಲಸಗಳಿಗೆ ಆದ್ಯತೆ ನೀಡುವುದು ದೇಶದ ಸಂವಿಧಾನ ಹಾಗೂ ಕೋಟ್ಯಂತರ ಭಾರತೀಯರಿಗೆ ಮಾಡಿದ ಅವಮಾನ” ಎಂದು ಅವರು ಟೀಕಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ರಾಷ್ಟ್ರಧ್ವಜದ ಗೌರವವನ್ನು ಸಚಿವರು ಹಾಗೂ ಕಾಂಗ್ರೆಸ್ ನಾಯಕರು ಅರ್ಥಮಾಡಿಕೊಳ್ಳಬೇಕು. ರಾಷ್ಟ್ರದ ಸ್ವಾತಂತ್ರ್ಯವನ್ನು ಗೌರವಿಸುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಪವಿತ್ರ ಕರ್ತವ್ಯವಾಗಿದೆ ಎಂದು ಅಶೋಕ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ರಾಜಕೀಯ ಅಧಿಕಾರ, ಚುನಾವಣಾ ಲೆಕ್ಕಾಚಾರ ಮತ್ತು ಪಕ್ಷದ ಹಿತಾಸಕ್ತಿಗಳೇ ರಾಷ್ಟ್ರಾಭಿಮಾನಕ್ಕಿಂತ ಮುಖ್ಯವಾಗಿವೆ ಎಂದು ಆರೋಪಿಸಿದ ಅವರು, ಇಂತಹ ಮನೋಭಾವ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಲ್ಲೇ ಬೇರೂರಿದೆ ಎಂದು ಟೀಕಿಸಿದ್ದಾರೆ. ಈ ಮನೋಭಾವಕ್ಕೆ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರೂ ಹೊಣೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರಧ್ವಜವನ್ನು ಎರಡನೇ ಆದ್ಯತೆಯಾಗಿ ಪರಿಗಣಿಸುವ ಸಚಿವರು ಸಾರ್ವಜನಿಕ ಹುದ್ದೆಯಲ್ಲಿ ಮುಂದುವರಿಯುವ ನೈತಿಕ ಮತ್ತು ಸಾಂವಿಧಾನಿಕ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.
ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ತಕ್ಷಣ ವಜಾಗೊಳಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಗ್ರಹಿಸಿರುವ ಅಶೋಕ್, ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕತ್ವ ರಾಜ್ಯದ ಜನತೆ ಹಾಗೂ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.