


ಬಳ್ಳಾರಿ, 14 ಆಗಸ್ಟ್ (ಹಿ.ಸ.)
ಆ್ಯಂಕರ್: 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ “ಭಾರತ ಮಾತೆಗೆ ಭಾವೈಕ್ಯತೆಯ ಆರತಿ – 2026” ಎಂಬ ವಿಶೇಷ ದೇಶಭಕ್ತಿ ಗೀತಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶನಿವಾರ, ಆಗಸ್ಟ್ 15ರಂದು ಸಂಜೆ 5 ಗಂಟೆಯಿಂದ ಎಸ್.ಜಿ. ಕಾಲೇಜಿನ ಮೈದಾನ, ಕಪ್ಪಗಲ್ ರಸ್ತೆ, ಬಳ್ಳಾರಿಯಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆ, ನೃತ್ಯ, ಯೋಗ ಹಾಗೂ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ. ಬಳ್ಳಾರಿಯ ನೃತ್ಯ ಗುರುಗಳು, ಸಂಗೀತ ಶಿಕ್ಷಕರು, 700ಕ್ಕೂ ಹೆಚ್ಚು ಕಲಾವಿದರು ಮತ್ತು ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ 30 × 10 ಅಡಿ ಎಲ್ಇಡಿ ಪರದೆಯಲ್ಲಿ ದೇಶಭಕ್ತಿ ಗೀತೆ ಮತ್ತು ನೃತ್ಯಗಳಿಗೆ ಹೊಂದುವ ಸಿನಿಮೇಟಿಕ್ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಗುವುದು. ನಿರೂಪಕರ ತಂಡವೂ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ವಿಶೇಷ ಸಿದ್ಧತೆ ಮಾಡಿಕೊಂಡಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ನೃತ್ಯ ಗುರುಗಳು, ಸಂಗೀತ ಶಿಕ್ಷಕರು ಹಾಗೂ ಕಲಾವಿದರನ್ನು ಗೌರವಿಸಲಾಗುವುದು. ಕಲಾವಿದರಿಗೆ ಪ್ರಶಂಸಾ ಪತ್ರ ಮತ್ತು ಪದಕಗಳನ್ನು ನೀಡಲಾಗುವುದು. ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಗಣ್ಯರನ್ನು ವಿಶೇಷವಾಗಿ ಗೌರವಿಸಲಾಗುವುದು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶ ರಾಷ್ಟ್ರಭಕ್ತಿ, ಭಾರತೀಯ ಸಂಸ್ಕೃತಿ ಮತ್ತು ಭಾವೈಕ್ಯತೆಯ ಸಂದೇಶವನ್ನು ಜನರಲ್ಲಿ ಹಾಗೂ ವಿಶೇಷವಾಗಿ ಮಕ್ಕಳಲ್ಲಿ ಬೆಳೆಸುವುದು. ವಿವಿಧತೆಯಲ್ಲಿ ಏಕತೆಯ ಭಾರತದ ಸೌಂದರ್ಯವನ್ನು ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಪರಿಚಯಿಸುವ ಪ್ರಯತ್ನ ಇದಾಗಿದೆ.
ಕಾರ್ಯಕ್ರಮಕ್ಕೆ ಪೂಜ್ಯ ಸ್ವಾಮೀಜಿಗಳು, ಗಣ್ಯರು, ಸರ್ಕಾರಿ ಅಧಿಕಾರಿಗಳು, ಶಾಲಾ–ಕಾಲೇಜುಗಳ ಪ್ರತಿನಿಧಿಗಳು, ಸಂಘ–ಸಂಸ್ಥೆಗಳ ಮುಖಂಡರು, ಪತ್ರಕರ್ತರು ಹಾಗೂ ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ.
“ಇದು ಒಬ್ಬರ ಕಾರ್ಯಕ್ರಮವಲ್ಲ; ಇದು ನಮ್ಮೆಲ್ಲರ ಕಾರ್ಯಕ್ರಮ” ಎಂಬ ಆಶಯದೊಂದಿಗೆ ಎಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಒಂದು ರಾಷ್ಟ್ರ...
ಒಂದು ಸಂಸ್ಕೃತಿ...
ಒಂದು ಭಾವನೆ...
ಶ್ರೀ ಮಹಾದೇವ ಶಿಕ್ಷಣ, ಕಲೆ ಹಾಗೂ ಸಾಂಸ್ಕೃತಿಕ ಸಂಸ್ಥೆ (ರಿ.), ಬಳ್ಳಾರಿ ಹಾಗೂ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಜಾಗತಿಕ ವೇದಿಕೆ (ರಿ.), ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್