
ಬೆಂಗಳೂರು, 13 ಆಗಸ್ಟ್ (ಹಿ.ಸ.):
ಆ್ಯಂಕರ್:
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಆಯೋಗ ರಚನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ನಡೆದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಆಯೋಗ ರಚಿಸುವಂತೆ ಬೇಡಿಕೆ ಸಲ್ಲಿಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಂದು ತಿಂಗಳೊಳಗೆ ಆಯೋಗ ರಚಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಕೇವಲ ಎರಡು ದಿನಗಳಲ್ಲೇ ಆದೇಶ ಹೊರಡಿಸುವ ಮೂಲಕ ನೀಡಿದ್ದ ಭರವಸೆ ಈಡೇರಿಸಿದ್ದಾರೆ.
ರಾಜ್ಯದಲ್ಲಿರುವ ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಲವು ಸವಾಲುಗಳನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅವರ ಅಭಿವೃದ್ಧಿ, ಹಕ್ಕುಗಳ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯ ಖಾತರಿಪಡಿಸುವ ಉದ್ದೇಶದಿಂದ ವಿಶೇಷ ಆಯೋಗ ರಚಿಸಲು ಸರ್ಕಾರ ಮುಂದಾಗಿದೆ.
ಸಮುದಾಯಗಳಿಗೆ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ, ಆರೋಗ್ಯ ಸೇವೆ, ವಸತಿ, ಕುಡಿಯುವ ನೀರು, ರಸ್ತೆ ಹಾಗೂ ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಜತೆಗೆ ಯುವಜನರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸಲು ಸರ್ಕಾರ ಮುಂದಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.