
ಕೊಪ್ಪಳ, 13 ಆಗಸ್ಟ್ (ಹಿ.ಸ.)
ಆ್ಯಂಕರ್ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 9 ರಿಂದ 17ರವರೆಗೆ ದೇಶಾದ್ಯಂತ ನಡೆಯಲಿರುವ “ಹರ್ ಘರ್ ತಿರಂಗಾ–2026” ಅಭಿಯಾನವನ್ನು ಕೊಪ್ಪಳ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ತಿಳಿಸಿದ್ದಾರೆ.
ಭಾರತ ಸರ್ಕಾರವು 2022ರಲ್ಲಿ ಆರಂಭಿಸಿದ ಹರ್ ಘರ್ ತಿರಂಗಾ ಅಭಿಯಾನದ ಮುಖ್ಯ ಉದ್ದೇಶ ನಾಗರಿಕರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ತ್ರಿವರ್ಣ ಧ್ವಜದೊಂದಿಗೆ ವೈಯಕ್ತಿಕ ಹಾಗೂ ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸುವುದಾಗಿದೆ. ಆಗಸ್ಟ್ 15ರಂದು ಆಚರಿಸಲಾಗುವ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೊಪ್ಪಳ ಜಿಲ್ಲೆಯ ಪ್ರತಿಯೊಂದು ಮನೆ, ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳು, ನಿಗಮ-ಮಂಡಳಿಗಳು, ಸ್ವಸಹಾಯ ಗುಂಪುಗಳು, ಸಾರ್ವಜನಿಕ ಉದ್ಯಮ ಸಂಸ್ಥೆಗಳು, ಸಂಘ-ಸಂಸ್ಥೆಗಳು, ನಾಗರಿಕ ಸೇವಾ ಸಂಸ್ಥೆಗಳು, ಶಾಲಾ-ಕಾಲೇಜುಗಳು ಸೇರಿದಂತೆ ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಕುಟುಂಬ ವರ್ಗದವರು ಸ್ವಯಂಪ್ರೇರಣೆಯಿಂದ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಪಡಿಸುವಂತೆ ಈ ಮೂಲಕ ಕೋರಲಾಗಿದೆ.
ಈ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ತಿರಂಗಾ ರ್ಯಾಲಿ, ಸೈಕಲ್ ಜಾಥಾ ಹಾಗೂ ಬೈಕ್ ಜಾಥಾ ಆಯೋಜಿಸಲಾಗುವುದು. ವಿವಿಧ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ರಾಷ್ಟ್ರಗೀತೆಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಸಾರ್ವಜನಿಕ ಸ್ಥಳಗಳು, ಅಂಗಡಿ-ಮಳಿಗೆಗಳು, ರೈಲು ಮತ್ತು ಬಸ್ ನಿಲ್ದಾಣಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತಿರಂಗಾ ಪ್ರದರ್ಶನ ಹಾಗೂ ಧ್ವಜಾರೋಹಣಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸರ್ಕಾರಿ ಕಚೇರಿಗಳು, ಆಣೆಕಟ್ಟುಗಳು, ಸೇತುವೆಗಳು, ರೈಲು ಮತ್ತು ಬಸ್ ನಿಲ್ದಾಣಗಳು, ಆಸ್ಪತ್ರೆಗಳು, ಶಾಲಾ-ಕಾಲೇಜುಗಳು ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ದೀಪಾಲಂಕಾರ ಮಾಡಲು ಸೂಚಿಸಲಾಗಿದೆ.
ಇದರೊಂದಿಗೆ ಸಾರ್ವಜನಿಕ ವೃತ್ತಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ತಿರಂಗಾ ವಿಷಯಾಧಾರಿತ ರಂಗೋಲಿ ಚಿತ್ರಗಳನ್ನು ಬಿಡಿಸುವುದು, ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರಗೀತೆ ಹಾಡಿಸುವುದು, ತಿರಂಗಾ ಕುರಿತ ಚಿತ್ರಕಲೆ ಸ್ಪರ್ಧೆ, ಸ್ವಾತಂತ್ರ್ಯ ಹೋರಾಟಗಾರರ ಕುರಿತು ರಸಪ್ರಶ್ನೆ ಹಾಗೂ ನಿಬಂಧ ಸ್ಪರ್ಧೆಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಅಭಿಯಾನಕ್ಕೆ ಅಗತ್ಯವಿರುವ ರಾಷ್ಟ್ರಧ್ವಜಗಳ ಸಂಗ್ರಹಣೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಕೈಮಗ್ಗ ಮತ್ತು ಜವಳಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ. ತಾಲೂಕು ಮಟ್ಟದಲ್ಲಿ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ಥಳೀಯ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಸೂಚಿಸಲಾಗಿದೆ.
ಸ್ವಾತಂತ್ರ್ಯವು ಅಸಂಖ್ಯಾತ ಹೋರಾಟ, ತ್ಯಾಗ ಮತ್ತು ಬಲಿದಾನಗಳ ಫಲವಾಗಿದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪ್ರೇಮವನ್ನು ಸ್ಮರಿಸಿ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಕೊಪ್ಪಳ ಜಿಲ್ಲೆಯ ಎಲ್ಲ ನಾಗರಿಕರು ಸ್ವಯಂಪ್ರೇರಣೆಯಿಂದ “ಹರ್ ಘರ್ ತಿರಂಗಾ” ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಅಪರ ಜಿಲ್ಲಾಧಿಕಾರಿಗಳು ಈ ಮೂಲಕ ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್