
ಹುಲಿಗಿ, 13 ಆಗಸ್ಟ್ (ಹಿ.ಸ.)
ಆ್ಯಂಕರ್: ಕೊಪ್ಪಳ ಜಿಲ್ಲೆಯ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಾಲಯದ ‘ಅಮ್ಮ ನಿಲಯ’ ವಸತಿ ಗೃಹದಲ್ಲಿ ನಿಯಮ ಉಲ್ಲಂಘಿಸಿ ಸಾರ್ವಜನಿಕರು ಮಧ್ಯಪಾನ ಹಾಗೂ ಆಹಾರ ಸೇವನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಕಠಿಣ ಕ್ರಮ ಕೈಗೊಂಡಿದೆ.
ಆಗಸ್ಟ್ 9 ರಂದು ನಡೆದ ಈ ಘಟನೆಯ ವಿಡಿಯೋ ತುಣುಕಿನಲ್ಲಿ ಸಾರ್ವಜನಿಕರು ಮಧ್ಯಪಾನ ಮಾಡುತ್ತಿದ್ದ ಕೊಠಡಿಯಲ್ಲೇ ದೇವಾಲಯದ ಸಿಬ್ಬಂದಿಯೂ ಉಪಸ್ಥಿತರಿರುವುದು ಕಂಡುಬಂದಿದ್ದು, ಪವಿತ್ರ ಧಾರ್ಮಿಕ ಕ್ಷೇತ್ರದಲ್ಲಿ ನಡೆದ ಈ ಘಟನೆಗೆ ಸಾರ್ವಜನಿಕರಿಂದ ಹಾಗೂ ಭಕ್ತಾದಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಜಾಗೃತರಾದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಅಮ್ಮ ನಿಲಯ ವಸತಿ ಸಂಕೀರ್ಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊರಗುತ್ತಿಗೆ ಸಿಬ್ಬಂದಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕೆಲಸದಿಂದ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.
ವಸತಿ ಗೃಹದ ಕೊಠಡಿಗಳನ್ನು ವಿತರಿಸುವ ಮುನ್ನವೇ ಭಕ್ತರಿಗೆ ದೇವಾಲಯದ ಕಟ್ಟುಪಾಡುಗಳು ಮತ್ತು ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ನಿಯಮ ಮೀರಿ ವರ್ತಿಸುವುದು ಕಂಡುಬಂದರೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಎಚ್ಚರಿಕೆ ನೀಡುತ್ತಾರೆ. ಕ್ಷೇತ್ರಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಾಧಿಕಾರವು ಶ್ರಮಿಸುತ್ತಿದೆ. ದೇವಾಲಯದ ಪವಿತ್ರತೆಗೆ ಧಕ್ಕೆ ತರುವಂತಹ ಅಹಿತಕರ ಘಟನೆಗಳು ಸಂಭವಿಸಿದರೆ, ಕಾರಣೀಭೂತರಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್