ವಸತಿ ಶೈಕ್ಷಣಿಕ, ಧಾರ್ಮಿಕ ಶಿಕ್ಷಣ ಸಂಸ್ಥೆಗಳ ನೋಂದಣಿ ಕಡ್ಡಾಯ
ಕೊಪ್ಪಳ, 13 ಆಗಸ್ಟ್ (ಹಿ.ಸ.) ಆ್ಯಂಕರ್ : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ, ಅನುದಾನಿತ, ಅನುದಾನರಹಿತ ಹಾಗೂ ಖಾಸಗಿ ವಸತಿ ಸಹಿತ ಶಾಲೆ, ಕಾಲೇಜು, ವಸತಿ ನಿಲಯ, ತರಬೇತಿ ಕೇಂದ್ರಗಳು ಮತ್ತು ವಸತಿಯುತ ಧಾರ್ಮಿಕ ಶೈಕ್ಷಣಿಕ ಸಂಸ್ಥೆಗಳು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧ
ವಸತಿ ಶೈಕ್ಷಣಿಕ, ಧಾರ್ಮಿಕ ಶಿಕ್ಷಣ ಸಂಸ್ಥೆಗಳ ನೋಂದಣಿ ಕಡ್ಡಾಯ


ಕೊಪ್ಪಳ, 13 ಆಗಸ್ಟ್ (ಹಿ.ಸ.)

ಆ್ಯಂಕರ್ : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ, ಅನುದಾನಿತ, ಅನುದಾನರಹಿತ ಹಾಗೂ ಖಾಸಗಿ ವಸತಿ ಸಹಿತ ಶಾಲೆ, ಕಾಲೇಜು, ವಸತಿ ನಿಲಯ, ತರಬೇತಿ ಕೇಂದ್ರಗಳು ಮತ್ತು ವಸತಿಯುತ ಧಾರ್ಮಿಕ ಶೈಕ್ಷಣಿಕ ಸಂಸ್ಥೆಗಳು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಸೂಚಿಸಿದ್ದಾರೆ.

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ವಸತಿ ಸಹಿತ ಶಾಲೆ, ಕಾಲೇಜು, ವಸತಿ ನಿಲಯ ಹಾಗೂ ಧಾರ್ಮಿಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು, ಮಕ್ಕಳ ರಕ್ಷಣಾ ನೀತಿ-2016ರ ಅನುಷ್ಠಾನವನ್ನು ಕ್ರಮಬದ್ಧಗೊಳಿಸುವುದು ಹಾಗೂ ಮಕ್ಕಳ ಸುರಕ್ಷತೆ ಮತ್ತು ಅವರಿಗೆ ಕಲ್ಪಿಸಿರುವ ಸೌಲಭ್ಯಗಳ ಮೇಲ್ವಿಚಾರಣೆ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ವಸತಿ ಶಾಲೆ/ನಿಲಯಗಳ ಕಾರ್ಯವಿಧಾನಗಳ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.

ಈ ಮಾರ್ಗಸೂಚಿಗಳು ಜಾರಿಯಾದ ದಿನಾಂಕದಿಂದ ಆರು ತಿಂಗಳೊಳಗಾಗಿ ನೋಂದಣಿಗಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ವಿವಿಧ ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವಸತಿ ಸಹಿತ ಶೈಕ್ಷಣಿಕ ಸಂಸ್ಥೆಗಳು ಹಾಗೂ ವಸತಿ ನಿಲಯಗಳು ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ನೋಂದಣಿಗೆ ಅರ್ಜಿ ಸಲ್ಲಿಸಬೇಕು. ಇತರೆ ವಸತಿಯುತ ಶೈಕ್ಷಣಿಕ ಸಂಸ್ಥೆಗಳು, ವಸತಿ ನಿಲಯಗಳು, ತರಬೇತಿ ಕೇಂದ್ರಗಳು (ಕೋಚಿಂಗ್ ಸೆಂಟರ್) ಹಾಗೂ ವಸತಿ ಸಹಿತ ಧಾರ್ಮಿಕ ಶಿಕ್ಷಣ ಸಂಸ್ಥೆಗಳೂ ಸಹ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.

ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಬಂಧಿಸಿದ ಸಂಸ್ಥೆಗಳು ಮಾರ್ಗಸೂಚಿಗಳಡಿ ನೋಂದಣಿಗಾಗಿ ಸೆಪ್ಟೆಂಬರ್ 10 ರೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು https://koppal.nic.in ಜಾಲತಾಣದ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸಂಸ್ಥೆಗಳು ಕಡ್ಡಾಯವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಥವಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಡಳಿತ ಭವನ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande