ಗಂಗಾವತಿ : ಜಿಎಚ್ಎನ್ ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ಗ್ರಂಥಪಾಲಕರ ದಿನಾಚರಣೆ
ಗಂಗಾವತಿ, 13 ಆಗಸ್ಟ್ (ಹಿ.ಸ.) ಆ್ಯಂಕರ್: ಗಂಗಾವತಿ ನಗರದ ಗುಂಜಹಳ್ಳಿ ಹಿರೇನಾಗಪ್ಪ ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹ ಪದ್ಮಶ್ರೀ ಡಾ. ಎಸ್. ಆರ್. ರಂಗನಾಥನ್ ಅವರ 134ನೇ ಜನ
Librarians' Day celebrated meaningfully at GHN College


ಗಂಗಾವತಿ, 13 ಆಗಸ್ಟ್ (ಹಿ.ಸ.)

ಆ್ಯಂಕರ್: ಗಂಗಾವತಿ ನಗರದ ಗುಂಜಹಳ್ಳಿ ಹಿರೇನಾಗಪ್ಪ ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹ ಪದ್ಮಶ್ರೀ ಡಾ. ಎಸ್. ಆರ್. ರಂಗನಾಥನ್ ಅವರ 134ನೇ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಗ್ರಂಥಪಾಲಕ ಡಾ. ರಾಜಶೇಖರ ಮಹಾದೇವಗೌಡ ಪಾಟೀಲ ಅವರು ಮಾತನಾಡಿ, ರಂಗನಾಥನ್ ರವರ ಗ್ರಂಥಾಲಯ ವಿಜ್ಞಾನದ ಪಂಚಸೂತ್ರಗಳು, ಕೊಲನ್ ವರ್ಗೀಕರಣ ಪದ್ಧತಿ, ಸಾರ್ವಜನಿಕ ಗ್ರಂಥಾಲಯ ಚಳವಳಿ ಹಾಗೂ ಗ್ರಂಥಾಲಯ ಶಾಸನದ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆಗಳನ್ನು ಸ್ಮರಿಸಿದರು. “ಗ್ರಂಥಾಲಯವು ಕೇವಲ ಪುಸ್ತಕಗಳನ್ನು ಸಂಗ್ರಹಿಸುವ ಸ್ಥಳವಲ್ಲ; ಅದು ಜ್ಞಾನ, ಶಿಕ್ಷಣ ಮತ್ತು ಚಿಂತನೆಯ ಕೇಂದ್ರವಾಗಬೇಕು.

ಡಿಜಿಟಲ್ ಯುಗದಲ್ಲಿ ಇ-ಪುಸ್ತಕ, ಇ-ಜರ್ನಲ್ ಹಾಗೂ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ವಿದ್ಯಾರ್ಥಿಗಳಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವುದು ಇಂದಿನ ಗ್ರಂಥಾಲಯಗಳ ಪ್ರಮುಖ ಜವಾಬ್ದಾರಿಯಾಗಿದೆ” ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಶರಣಬಸವಯ್ಯ ಅವರು, ವಿದ್ಯಾರ್ಥಿಗಳು ಕಾಲೇಜಿನ ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. “ಜೀವನದಲ್ಲಿ ಉತ್ತಮ ಸ್ನೇಹಿತರನ್ನು ಹೊಂದುವುದು ಎಷ್ಟು ಮುಖ್ಯವೋ, ಉತ್ತಮ ಪುಸ್ತಕ ಮತ್ತು ಗ್ರಂಥಾಲಯವನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ಜ್ಞಾನ ಸಂಪಾದಿಸುವುದೂ ಅಷ್ಟೇ ಮುಖ್ಯ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಹಿರಿಯ ಅಧ್ಯಾಪಕರಾದ ಸೋಮನಗೌಡ ಅವರು, ವಿದ್ಯಾರ್ಥಿಗಳು ಗ್ರಂಥಾಲಯದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಜ್ಞಾನ ಗಳಿಸಬೇಕು. ಗ್ರಂಥಾಲಯದಲ್ಲಿ ಬೆಳೆಸಿಕೊಳ್ಳುವ ಓದುವ ಹವ್ಯಾಸವು ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಗ್ರಂಥಾಲಯವನ್ನು ಕೇವಲ ಪರೀಕ್ಷಾ ಸಮಯದಲ್ಲಿ ಬಳಸುವ ಸ್ಥಳವನ್ನಾಗಿಸದೆ, ಜೀವನಪೂರ್ತಿ ಜ್ಞಾನ ನೀಡುವ ಉತ್ತಮ ಸ್ನೇಹಿತನನ್ನಾಗಿ ಮಾಡಿಕೊಳ್ಳೋಣ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಅಧ್ಯಾಪಕರಾದ ಜಯಲಕ್ಷ್ಮಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ವೆಂಕಟೇಶ್ ಅವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande