ಕೊಪ್ಪಳ : ಸಮತೋಲಿತ ಪೋಷಕಾಂಶಗಳ ನಿರ್ವಹಣೆ: ತರಬೇತಿ
ಕೊಪ್ಪಳ, 13 ಆಗಸ್ಟ್ (ಹಿ.ಸ.) ಆ್ಯಂಕರ್ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ, ಕೃಷಿ ಇಲಾಖೆ ಹಾಗೂ ಕೋರಮಂಡಲ್ ಇಂಟರ್ನ್ಯಾಷನಲ್ ಲಿಮಿಟೆಡ್, ಬೆಂಗಳೂರು ಇವರ ಸಹಯೋಗದಲ್ಲಿ “ಸಮತೋಲಿತ ಪೋಷಕಾಂಶಗಳ ನಿರ್ವಹಣೆ” ಕುರಿತು ತರಬೇತಿ ಕಾರ್ಯಕ್ರಮವನ್ನು ಆಗಸ್
ಕೊಪ್ಪಳ : ಸಮತೋಲಿತ ಪೋಷಕಾಂಶಗಳ ನಿರ್ವಹಣೆ: ತರಬೇತಿ


ಕೊಪ್ಪಳ : ಸಮತೋಲಿತ ಪೋಷಕಾಂಶಗಳ ನಿರ್ವಹಣೆ: ತರಬೇತಿ


ಕೊಪ್ಪಳ, 13 ಆಗಸ್ಟ್ (ಹಿ.ಸ.)

ಆ್ಯಂಕರ್ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ, ಕೃಷಿ ಇಲಾಖೆ ಹಾಗೂ ಕೋರಮಂಡಲ್ ಇಂಟರ್ನ್ಯಾಷನಲ್ ಲಿಮಿಟೆಡ್, ಬೆಂಗಳೂರು ಇವರ ಸಹಯೋಗದಲ್ಲಿ “ಸಮತೋಲಿತ ಪೋಷಕಾಂಶಗಳ ನಿರ್ವಹಣೆ” ಕುರಿತು ತರಬೇತಿ ಕಾರ್ಯಕ್ರಮವನ್ನು ಆಗಸ್ಟ್ 13ರಂದು ಆಯೋಜಿಸಲಾಗಿತ್ತು.

ಜಂಟಿ ಕೃಷಿ ನಿರ್ದೇಶಕರಾದ ಕೃಷ್ಣಮೂರ್ತಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ಕೃಷಿ ಉತ್ಪನ್ನಗಳಲ್ಲಿ ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ರೈತರು ರಾಸಾಯನಿಕ ಗೊಬ್ಬರಗಳ ಅವಲಂಬನೆ ಕಡಿಮೆ ಮಾಡಿ ತಮ್ಮದೇ ಆದ ಸಾವಯವ ಪರಿಕರಗಳನ್ನು ತಯಾರಿಸಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು, ತೋಟಗಾರಿಕೆ ಬೆಳೆಗಳಿಗೆ ಸಮತೋಲಿತ ಪೋಷಕಾಂಶಗಳನ್ನು ಒದಗಿಸುವುದರಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪಡೆಯಲು ಸಾಧ್ಯ. ರೈತರು ತಮ್ಮ ಜಮೀನಿನ ಕನಿಷ್ಠ ಅರ್ಧದಷ್ಟು ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಅಗತ್ಯ ಸಾವಯವ ಒಳಸುರಿಗಳನ್ನು ತಾವೇ ಉತ್ಪಾದಿಸಿಕೊಳ್ಳಬೇಕು ಎಂದರು.

ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ ಕುಲಕರ್ಣಿ ಅವರು ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಮೀನಿನ ಅಮೈನೋ ಆಮ್ಲ ಉತ್ಪಾದನೆ ಕುರಿತು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ವಿರುಪಣ್ಣ (ನವೋದಯ) ಹಳ್ಳಿಗುಡಿ ಅವರು ಮಾತನಾಡಿ, ರೈತಪರ ತರಬೇತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಇಂತಹ ಕಾರ್ಯಕ್ರಮಗಳಿಗೆ ಅಗತ್ಯ ಆರ್ಥಿಕ ಸಹಕಾರವನ್ನು ಕೃಷಿಕ ಸಮಾಜ ನೀಡಲಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ್ದ ಮಲ್ಲೇಶಪ್ಪ ಬಿಸಿರೊಟ್ಟಿ ಅವರು ತಮ್ಮ ಪಾರಂಪರಿಕ ಜ್ಞಾನವನ್ನು ಹಂಚಿಕೊಂಡು, ಘನ ಜೀವಾಮೃತ ತಯಾರಿಕೆ, ಬಳಕೆ ಹಾಗೂ ಅದರ ಪ್ರಯೋಜನಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಕೋರಮಂಡಲ್ ಇಂಟರ್ನ್ಯಾಷನಲ್ ಲಿಮಿಟೆಡ್ನ ಅವಿನಾಶ್ ಅವರು ನ್ಯಾನೋ ಯೂರಿಯಾ, ಡಿಎಪಿ ಗೊಬ್ಬರಗಳ ಬಳಕೆ ಹಾಗೂ ಕೃಷಿಯಲ್ಲಿ ಡ್ರೋನ್ ಬಳಕೆಯ ಕುರಿತು ವಿವರಿಸಿದರು.

ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥರಾದ ಡಾ. ಬದರಿಪ್ರಸಾದ ಪಿ.ಆರ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿಯೋಗ್ಯ ಭೂಮಿ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಮಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮಣ್ಣಿನ ಆರೋಗ್ಯ ಕಾಪಾಡುವ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರವು ಪ್ರತಿ ತಿಂಗಳು ತರಬೇತಿ ಕಾರ್ಯಕ್ರಮ ಆಯೋಜಿಸುತ್ತಿದ್ದು, ರೈತರು ಸಕ್ರಿಯವಾಗಿ ಪಾಲ್ಗೊಂಡು ಇದರ ಪ್ರಯೋಜನ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಕುರಿತು ಕೃಷಿ ವಿಜ್ಞಾನಿ ಡಾ. ಶೇಷಗಿರಿ ಗುಬ್ಬಿ ಅವರು ಅಭಿಪ್ರಾಯ ಹಂಚಿಕೊಂಡರು. ಕೊಪ್ಪಳ ಸಾವಯವ ಕೃಷಿಕರ ಬಳಗದ ಸದಸ್ಯ ದೇವರಾಜ ಮೇಟಿ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಿಂದ 100ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳನ್ನು (ಡಾ. ಬದರಿ ಪ್ರಸಾದ ಪಿ.ಆರ್., ವಿಸ್ತರಣಾ ಮುಂದಾಳು, ಮೊ. 9900145705) ಸಂಪರ್ಕಿಸಬಹುದು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande