
ಕೊಪ್ಪಳ, 13 ಆಗಸ್ಟ್ (ಹಿ.ಸ.)
ಆ್ಯಂಕರ್ : ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ (ಡಿಎ-ಜೆಜಿಯುಎ) ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಆಯ್ಕೆಯಾಗಿರುವ 40 ಆದಿ ಸೇವಾ ಕೇಂದ್ರಗಳಲ್ಲಿ ವಿಶೇಷ ``ಜನ ಸುನ್ವಾಯಿ'' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 13 ರಿಂದ ಆಗಸ್ಟ್ 15 ರವರೆಗೆ ಈ ವಿಶೇಷ ಆಂದೋಲನ ನಡೆಯಲಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.
*ಕಾರ್ಯಕ್ರಮದ ಮುಖ್ಯ ಉದ್ದೇಶಗಳು:* ಬುಡಕಟ್ಟು ಸಮುದಾಯದ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಸುಧಾರಣಾ ಯೋಜನೆಗಳ ಪ್ರಯೋಜನಗಳನ್ನು ನೇರವಾಗಿ ತಲುಪಿಸುವುದು. ಯೋಜನೆಗಳ ಲಾಭ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ದೊರೆಯುವಂತೆ ಮಾಡುವುದು.
ಸಂಬಂಧಿಸಿದ 17 ಇಲಾಖೆಗಳ ಜಂಟಿ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿದ್ದು, ಈ 3 ದಿನಗಳ ವಿಶೇಷ ಕಾರ್ಯಕ್ರಮದಲ್ಲಿ 17 ಇಲಾಖೆಗಳಿಗೆ ಸಂಬಂಧಿಸಿದಂತೆ ಈ ಕೆಲವು ಸೌಲಭ್ಯಗಳು ಮತ್ತು ಅರ್ಜಿ ಸಲ್ಲಿಕೆಗೆ ಅವಕಾಶವಿರುತ್ತದೆ.
ಆಧಾರ್ ಕಾರ್ಡ್ ನೋಂದಣಿ ಮತ್ತು ತಿದ್ದುಪಡಿ, ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ, ಜಾತಿ ಪ್ರಮಾಣ ಪತ್ರ ಮತ್ತು ನಿವಾಸಿ ಪ್ರಮಾಣ ಪತ್ರ, ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ), ಜನಧನ್ ಬ್ಯಾಂಕ್ ಖಾತೆ ತೆರೆಯುವುದು ಹಾಗೂ ವಿಮಾ ಯೋಜನೆಗಳಾದ ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನ್ ಮಂತ್ರಿ ಸುರಕ್ಷಾ ಭೀಮಾ ಯೋಜನೆ (ಪಿಎಂಎಸ್ಬಿವೈ) ಸೌಲಭ್ಯ ಸಿಗಲಿದೆ.
ಇದಲ್ಲದೆ ಎಂ.ಜಿ.ಎನ್.ಆರ್.ಇ.ಜಿ.ಎ ಉದ್ಯೋಗ ಕಾರ್ಡ್ ಮತ್ತು ಇತರ ಕುಂದುಕೊರತೆಗಳ ಪರಿಹಾರ ದೊರೆಯಲಿದ್ದು, ಸಂಬಂಧಿಸಿದ ಗ್ರಾಮೀಣ ಭಾಗದ ಸಾರ್ವಜನಿಕರು ಹಾಗೂ ಬುಡಕಟ್ಟು ಸಮುದಾಯದ ಜನತೆಯು ತಮ್ಮ ದೂರುಗಳನ್ನು ಅಥವಾ ಸೌಲಭ್ಯಗಳ ಅರ್ಜಿಯನ್ನು ತಮ್ಮ ಗ್ರಾಮದಲ್ಲಿರುವ ಸಹಾಯಕ ನಿರ್ದೇಶಕರು (ಸಮಾಜ ಕಲ್ಯಾಣ, ಕೊಪ್ಪಳ/ಗಂಗಾವತಿ), ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು, ನೋಡಲ್ ಅಧಿಕಾರಿಗಳು ಅಥವಾ ಸ್ವಯಂಸೇವಕರಿಗೆ ನಿಗದಿತ ನಮೂನೆಯಲ್ಲಿ ಸಲ್ಲಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್