ವಂದೇ ಮಾತರಂ 150ನೇ ವರ್ಷಾಚರಣೆ ಅಂಗವಾಗಿ ವಿದ್ಯಾಗಿರಿಯಲ್ಲಿ ಭವ್ಯ ತಿರಂಗಾ ರ್ಯಾಲಿ
ಬಾಗಲಕೋಟೆ, 12 ಆಗಸ್ಟ್ (ಹಿ.ಸ.) ಆ್ಯಂಕರ್ : ‘ವಂದೇ ಮಾತರಂ’ ಗೀತೆಯ 150ನೇ ವರ್ಷದ ಸ್ಮರಣಾರ್ಥವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬಾಗಲಕೋಟೆ ಘಟಕದ ವತಿಯಿಂದ ನಗರದ ವಿದ್ಯಾಗಿರಿಯಲ್ಲಿ ಭವ್ಯ ತಿರಂಗಾ ರ್ಯಾಲಿ ನಡೆಯಿತು. ದೇಶಭಕ್ತಿ, ರಾಷ್ಟ್ರಾಭಿಮಾನ ಹಾಗೂ ಏಕತೆಯ ಸಂದೇಶ ಸಾರಿದ ರ್ಯಾಲಿ
ಒಂದೇ


ಬಾಗಲಕೋಟೆ, 12 ಆಗಸ್ಟ್ (ಹಿ.ಸ.)

ಆ್ಯಂಕರ್ : ‘ವಂದೇ ಮಾತರಂ’ ಗೀತೆಯ 150ನೇ ವರ್ಷದ ಸ್ಮರಣಾರ್ಥವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬಾಗಲಕೋಟೆ ಘಟಕದ ವತಿಯಿಂದ ನಗರದ ವಿದ್ಯಾಗಿರಿಯಲ್ಲಿ ಭವ್ಯ ತಿರಂಗಾ ರ್ಯಾಲಿ ನಡೆಯಿತು. ದೇಶಭಕ್ತಿ, ರಾಷ್ಟ್ರಾಭಿಮಾನ ಹಾಗೂ ಏಕತೆಯ ಸಂದೇಶ ಸಾರಿದ ರ್ಯಾಲಿಯಲ್ಲಿ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ‘ವಂದೇ ಮಾತರಂ’, ‘ಭಾರತ ಮಾತಾ ಕೀ ಜೈ’ ಸೇರಿದಂತೆ ದೇಶಭಕ್ತಿ ಘೋಷಣೆಗಳನ್ನು ಮೊಳಗಿಸುತ್ತಾ ರ್ಯಾಲಿಯಲ್ಲಿ ಹೆಜ್ಜೆ ಹಾಕಿದರು. ವಿದ್ಯಾಗಿರಿಯ ಪ್ರಮುಖ ರಸ್ತೆಗಳ ಮೂಲಕ ಸಾಗಿದ ರ್ಯಾಲಿ ಸಾರ್ವಜನಿಕರ ಗಮನ ಸೆಳೆಯಿತು. ರಸ್ತೆಯುದ್ದಕ್ಕೂ ತ್ರಿವರ್ಣ ಧ್ವಜಗಳ ಕಲರವ ಕಂಡುಬಂದಿದ್ದು, ಇಡೀ ವಾತಾವರಣ ದೇಶಭಕ್ತಿಯ ಸಂಭ್ರಮದಿಂದ ಕಂಗೊಳಿಸಿತು.

ರ್ಯಾಲಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ರಾಷ್ಟ್ರದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವವನ್ನು ಎತ್ತಿಹಿಡಿಯುವ ಸಂಕಲ್ಪ ವ್ಯಕ್ತಪಡಿಸಿದರು. ಯುವಜನರಲ್ಲಿ ದೇಶಾಭಿಮಾನ ಹಾಗೂ ರಾಷ್ಟ್ರದ ಬಗ್ಗೆ ಜವಾಬ್ದಾರಿಯ ಮನೋಭಾವ ಬೆಳೆಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಎಬಿವಿಪಿ ಪದಾಧಿಕಾರಿ ಉಮೇಶ್ ವಂದಾಲ ತಿಳಿಸಿದರು.

‘ವಂದೇ ಮಾತರಂ’ ಕೇವಲ ಒಂದು ಗೀತೆಯಲ್ಲ, ಅದು ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೋಟ್ಯಂತರ ಭಾರತೀಯರಲ್ಲಿ ರಾಷ್ಟ್ರಪ್ರೇಮದ ಕಿಚ್ಚು ಹೊತ್ತಿಸಿದ ಪ್ರೇರಣಾ ಶಕ್ತಿಯಾಗಿದೆ. ಅದರ 150ನೇ ವರ್ಷದ ಸ್ಮರಣೆಯನ್ನು ಯುವಜನರೊಂದಿಗೆ ಆಚರಿಸುವ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸ, ತ್ಯಾಗ ಮತ್ತು ಬಲಿದಾನದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ರ್ಯಾಲಿಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಎಬಿವಿಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಶಿಸ್ತುಬದ್ಧ ಹೆಜ್ಜೆ, ಕೈಯಲ್ಲಿದ್ದ ರಾಷ್ಟ್ರಧ್ವಜಗಳು ಹಾಗೂ ಮೊಳಗಿದ ದೇಶಭಕ್ತಿ ಘೋಷಣೆಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.

ರಾಷ್ಟ್ರಪ್ರೇಮ, ಸಾಮಾಜಿಕ ಜವಾಬ್ದಾರಿ ಮತ್ತು ಯುವಶಕ್ತಿಯನ್ನು ಒಗ್ಗೂಡಿಸುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ದೇಶದ ಬಗ್ಗೆ ಹೆಮ್ಮೆ ಹಾಗೂ ಕರ್ತವ್ಯಪ್ರಜ್ಞೆಯನ್ನು ಹೆಚ್ಚಿಸಲು ಸಹಕಾರಿಯಾಗಲಿವೆ ಎಂಬ ಅಭಿಪ್ರಾಯವೂ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande