
ಗದಗ, 12 ಆಗಸ್ಟ್ (ಹಿ.ಸ.)
ಆ್ಯಂಕರ್:- “ನಮ್ಮ ಭೂಮಿ, ನಮ್ಮ ಹಕ್ಕು” ಎಂಬ ಘೋಷಣೆಯೊಂದಿಗೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಪಾದಯಾತ್ರೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಬಲವಂತವಾಗಿ ತಡೆದಿರುವುದು ಖಂಡನೀಯ. ಪಾದಯಾತ್ರೆ ತಡೆಯಲು ಸರ್ಕಾರ ಪೊಲೀಸ್ ಬಲ ಪ್ರಯೋಗಿಸಿರುವುದು ಹೇಡಿತನದ ಕೃತ್ಯ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರೈತರ ವಿರೋಧವನ್ನು ಕಟ್ಟಿಕೊಂಡು ಅಧಿಕಾರ ನಡೆಸಿದ ಹಲವು ಸರ್ಕಾರಗಳು ಅಂತಿಮವಾಗಿ ಪತನಗೊಂಡಿರುವ ಇತಿಹಾಸವನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಅರಿತುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ರೈತರ ಸಮಸ್ಯೆಗಳನ್ನು ಆಲಿಸಿ, ಅವರ ಬೇಡಿಕೆಗಳಿಗೆ ಸ್ಪಂದಿಸುವ ಬದಲು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.
ಪಾದಯಾತ್ರೆಯಲ್ಲಿ ಸಾವಿರಾರು ರೈತರು ಹಾಗೂ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳದಂತೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ರೈತರು ಮತ್ತು ಕಾರ್ಯಕರ್ತರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿದ ರೈತರು, ಪೊಲೀಸರ ದಬ್ಬಾಳಿಕೆಯನ್ನು ಸಹಿಸಿಕೊಂಡು ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದೆ ತಾಳ್ಮೆ ಪ್ರದರ್ಶಿಸಿದರು ಎಂದು ಗೋವಿಂದಗೌಡ್ರ ತಿಳಿಸಿದ್ದಾರೆ.
ಸಾವಿರಾರು ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರನ್ನು ನಿಯಂತ್ರಿಸಲು ಪೊಲೀಸ್ ಬಲ ಪ್ರಯೋಗಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರದ ಈ ಕ್ರಮದ ಹಿಂದೆ ಹೋರಾಟಗಾರರನ್ನು ಪ್ರಚೋದಿಸಿ ಪರಿಸ್ಥಿತಿಯನ್ನು ಗಂಭೀರಗೊಳಿಸುವ ಯಾವುದಾದರೂ ಪಿತೂರಿ ಅಡಗಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಪಾದಯಾತ್ರೆಯಲ್ಲಿ ನೆರೆದಿದ್ದ ರೈತರನ್ನು ನಿಯಂತ್ರಿಸುವ ಸಂದರ್ಭದಲ್ಲಿ ಜೆಡಿಎಸ್ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ, ಶರಣಗೌಡ ಕಂದಕೂರ, ದೊಡ್ಡನಗೌಡ ಪಾಟೀಲ (ನರಿಬೋಳ) ಹಾಗೂ ಕೋರ್ ಕಮಿಟಿ ಅಧ್ಯಕ್ಷ ಜಿ. ಕೃಷ್ಣಾರೆಡ್ಡಿ ಅವರು ಗಾಯಗೊಂಡಿದ್ದಾರೆ ಎಂದು ಗೋವಿಂದಗೌಡ್ರ ತಿಳಿಸಿದ್ದಾರೆ. ಶಾಂತಿಯುತ ಹೋರಾಟದಲ್ಲಿ ಭಾಗವಹಿಸಿದ್ದ ನಾಯಕರ ಮೇಲೆಯೇ ಬಲ ಪ್ರಯೋಗ ಮಾಡಿರುವುದು ಸರ್ಕಾರದ ಅಸಹಿಷ್ಣುತೆಯನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.
“ದಬ್ಬಾಳಿಕೆ ಮತ್ತು ಗುಂಡಾಗಿರಿಯನ್ನೇ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು ಬಂದಿರುವ ಮುಖ್ಯಮಂತ್ರಿ, ಅದೇ ರೀತಿಯ ವರ್ತನೆಯನ್ನು ರೈತರ ಹೋರಾಟದ ಮೇಲೂ ಪ್ರಯೋಗಿಸುತ್ತಿದ್ದಾರೆ. ಇಂತಹ ಬೆದರಿಕೆ ಮತ್ತು ಪೊಲೀಸ್ ಬಲ ಪ್ರಯೋಗಕ್ಕೆ ಜೆಡಿಎಸ್ ಪಕ್ಷವಾಗಲಿ, ರೈತರಾಗಲಿ ಹೆದರುವುದಿಲ್ಲ,” ಎಂದು ಗೋವಿಂದಗೌಡ್ರ ಎಚ್ಚರಿಕೆ ನೀಡಿದ್ದಾರೆ.
ರೈತರ ಭೂಮಿ ಹಾಗೂ ಹಕ್ಕುಗಳ ವಿಚಾರದಲ್ಲಿ ಜೆಡಿಎಸ್ ಪಕ್ಷ ನಿರಂತರ ಹೋರಾಟ ನಡೆಸಲಿದೆ. ಸರ್ಕಾರದ ಯಾವುದೇ ರೀತಿಯ ಒತ್ತಡ, ಬೆದರಿಕೆ ಅಥವಾ ಬಲಪ್ರಯೋಗಕ್ಕೂ ಪಕ್ಷ ಹಿಂಜರಿಯುವುದಿಲ್ಲ. ರೈತರ ಹಿತಾಸಕ್ತಿಗಾಗಿ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕುವ ಬದಲು ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮುಂದಿನ ಹಂತವಾಗಿ ಇದೇ ಆಗಸ್ಟ್ 18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಿಂದ ವಿಧಾನಸೌಧದವರೆಗೆ ಬೃಹತ್ ಹೋರಾಟ ಹಾಗೂ ಪಾದಯಾತ್ರೆ ನಡೆಸಲಾಗುವುದು ಎಂದು ಗೋವಿಂದಗೌಡ್ರ ತಿಳಿಸಿದ್ದಾರೆ. ಈ ಹೋರಾಟದಲ್ಲಿ ರೈತರು, ಜೆಡಿಎಸ್ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದ್ದಾರೆ.
ಬಿಡದಿ ಕಾಮಾಕ್ಷಿ ಯೋಜನೆಯನ್ನು ಕೈಬಿಡುವವರೆಗೆ ಜೆಡಿಎಸ್ ಪಕ್ಷದ ಹೋರಾಟ ನಿಲ್ಲುವುದಿಲ್ಲ. ರೈತರ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ಯಾವುದೇ ನಿರ್ಧಾರವನ್ನು ಸರ್ಕಾರ ಕೈಗೊಂಡರೆ ಅದರ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಹೋರಾಟ ಮುಂದುವರಿಸಲಾಗುವುದು ಎಂದು ವೆಂಕನಗೌಡ ಆರ್. ಗೋವಿಂದಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP