
ಗದಗ, 12 ಆಗಸ್ಟ್ (ಹಿ.ಸ.)
ಆ್ಯಂಕರ್:- ಶಿವ ಎಂದರೆ ಕೇವಲ ದೇವರ ಅಸ್ತಿತ್ವದ ಪ್ರಶ್ನೆಯಲ್ಲ. ಶಿವನು ಮಂಗಳ ಸ್ವರೂಪಿಯಾಗಿದ್ದು, ಸರ್ವರನ್ನು ಸಮಭಾವದಿಂದ ಕಾಣುವ ಸತ್–ಚಿತ್–ಆನಂದದ ಗುಣಗಳನ್ನು ಹೊಂದಿರುವ ಮೂಲ ಸ್ವರೂಪ. ಶಿವಾನುಭವ ಎಂದರೆ ಸತ್ಯ, ಸೌಂದರ್ಯ ಹಾಗೂ ಪ್ರಾಮಾಣಿಕತೆಯ ಅನುಭವ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2810ನೇ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಐದು ದಶಕಗಳಿಗೂ ಅಧಿಕ ಕಾಲದಿಂದ ನಿರಂತರವಾಗಿ ನಡೆಯುತ್ತಿರುವ ಶಿವಾನುಭವ ಕಾರ್ಯಕ್ರಮದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದರು.
54 ವರ್ಷಗಳ ನಿರಂತರ ಪರಂಪರೆ
54 ವರ್ಷಗಳ ಹಿಂದೆ ತೋಂಟದಾರ್ಯ ಮಠದಲ್ಲಿ ಸಮಾನ ಮನಸ್ಕ ಯುವಕರು ಒಗ್ಗೂಡಿ ಶಿವಾನುಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂದಿನಿಂದ ಲಿಂಗಾಯತ ಪ್ರಗತಿಶೀಲ ಸಂಘದ ಹೆಸರಿನಲ್ಲಿ ನಿರಂತರವಾಗಿ ಶಿವಾನುಭವ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಈ ಕಾರ್ಯಕ್ರಮ ಕೇವಲ ಧಾರ್ಮಿಕ ಚಿಂತನೆಗೆ ಸೀಮಿತವಾಗದೆ, ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ತೆರೆಮರೆಯಲ್ಲಿದ್ದ ಅನೇಕ ಪ್ರತಿಭಾವಂತರನ್ನು ಸಮಾಜಕ್ಕೆ ಪರಿಚಯಿಸುವ ವೇದಿಕೆಯಾಗಿ ಬೆಳೆದಿದೆ ಎಂದು ಶ್ರೀಗಳು ಹೇಳಿದರು.
ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಗದಗದ ತೋಂಟದಾರ್ಯ ಮಠದ ಪಟ್ಟಾಧಿಕಾರ ವಹಿಸಿಕೊಂಡ ನಂತರ ಭಕ್ತರಲ್ಲಿ ‘ಇದು ನಮ್ಮ ಮಠ’ ಎಂಬ ಭಾವನೆ ಮೂಡುವಂತೆ ಮಾಡಿದರು. ಮಠವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ರೂಪಿಸಿದರು. ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಮಠವನ್ನು ಸಾಮಾಜಿಕ ಸಾಮರಸ್ಯದ ಕೇಂದ್ರವನ್ನಾಗಿ ಬೆಳೆಸಿದರು ಎಂದು ಸ್ಮರಿಸಿದರು.
ಅಂದಿನ ಗದಗ ಪರಿಸರದ ಯುವಕರಾದ ಪಂಚಾಕ್ಷರಯ್ಯ ಸಂಶಿಮಠ, ಅಜ್ಜಣ್ಣ ಮಾನ್ವಿ, ಸದಾಶಿವಯ್ಯ ಹಿರೇಮಠ, ವಿಶ್ವನಾಥ ಬುಳ್ಳಾ ಸೇರಿದಂತೆ ಅನೇಕ ಮಹನೀಯರು ಭಕ್ತಿಭಾವದಿಂದ ತನು–ಮನದಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಸೇವೆ ಮತ್ತು ಕೊಡುಗೆಗಳು ಇಂದಿಗೂ ಸ್ಮರಣೀಯವಾಗಿವೆ ಎಂದು ಹೇಳಿದರು.
ಅರ್ಜುನ ಗೋಳಸಂಗಿ ಸೇವೆಯನ್ನು ಸ್ಮರಿಸಿದ ಶ್ರೀಗಳು
ವೃತ್ತಿಯಿಂದ ನಿವೃತ್ತರಾದ ಡಾ. ಅರ್ಜುನ ಗೋಳಸಂಗಿ ಅವರನ್ನು ‘ಕೆಸರಿನಲ್ಲಿ ಅರಳಿದ ಕಮಲ’ ಎಂದು ಬಣ್ಣಿಸಿದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಅವರ ವಿಚಾರಧಾರೆಗಳು ಪ್ರಗತಿಪರವಾಗಿದ್ದು, ಸಾಹಿತ್ಯ, ಸಂಸ್ಕೃತಿ, ಸಂಘಟನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಮಠದ ಪರಮಭಕ್ತರಾಗಿರುವ ಅವರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಗಳಲ್ಲಿ ನಿರಂತರವಾಗಿ ಶ್ರೀಮಠದೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ, ಸಮಾಜಮುಖಿ ಕಾರ್ಯಗಳಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.
ಸಿದ್ಧಲಿಂಗ ಮಹಾಸ್ವಾಮಿಗಳ ಪ್ರಗತಿಪರ ಚಿಂತನೆ ಸ್ಮರಣೆ
‘ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಪಟ್ಟಾಧಿಕಾರ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘ ಸ್ಥಾಪನೆ: ನೆನಪು’ ವಿಷಯ ಕುರಿತು ಉಪನ್ಯಾಸ ನೀಡಿದ ಅಣ್ಣಿಗೇರಿಯ ನಿಂಗಮ್ಮ ಹೂಗಾರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್.ಎಸ್. ಹರ್ಲಾಪುರ ಅವರು, ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಪ್ರಗತಿಪರ ಚಿಂತನೆಯುಳ್ಳ ಮಹನೀಯರಾಗಿದ್ದರು ಎಂದು ಹೇಳಿದರು.
ಸಿದ್ಧಲಿಂಗ ಮಹಾಸ್ವಾಮಿಗಳು ಜೀವಪರ ಕಾಳಜಿಯನ್ನು ಹೊಂದಿದ್ದರು. ಯಾರನ್ನೂ ಪರಕೀಯರೆಂದು ಭಾವಿಸದೆ ಎಲ್ಲರನ್ನೂ ‘ಇವನು ನಮ್ಮವ’ ಎಂಬ ಭಾವನೆಯಿಂದ ಅಪ್ಪಿಕೊಂಡು ಶ್ರೀಮಠದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ವಾತಾವರಣವನ್ನು ನಿರ್ಮಿಸಿದ್ದರು. ಅವರ ಆದರ್ಶಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ. ಸಿದ್ಧಲಿಂಗ ಮಹಾಸ್ವಾಮಿಗಳು ಸದಾ ಸ್ಮರಣೀಯರು ಎಂದು ಹೇಳಿದರು.
ಶ್ರೀಮಠದೊಂದಿಗಿನ ಅವಿನಾಭಾವ ಸಂಬಂಧ ಸ್ಮರಣೆ
ಗೌರವ ಅತಿಥಿಯಾಗಿ ಭಾಗವಹಿಸಿದ್ದ ಸಿದ್ದರಾಮಯ್ಯ ಪಂಚಾಕ್ಷರಯ್ಯ ಸಂಶಿಮಠ ಅವರು ತಮ್ಮ ತಂದೆ ಪಂಚಾಕ್ಷರಯ್ಯ ಸಂಶಿಮಠ ಅವರು ಶ್ರೀಮಠದೊಂದಿಗೆ ಹೊಂದಿದ್ದ ಅವಿನಾಭಾವ ಸಂಬಂಧವನ್ನು ಸ್ಮರಿಸಿದರು. ಶ್ರೀಮಠದ ಸೇವೆಯಲ್ಲಿ ಹಿರಿಯರು ವಹಿಸಿದ್ದ ಪಾತ್ರ ಹಾಗೂ ಅಂದಿನ ದಿನಗಳ ಅನೇಕ ಘಟನೆಗಳನ್ನು ನೆನಪಿಸಿಕೊಂಡರು.
ನಿರಂಜನ ಬುಳ್ಳಾ ಮಾತನಾಡಿ, “ನಮಗಿರುವುದು ಒಂದೇ ಮಠ, ಅದು ತೋಂಟದಾರ್ಯ ಮಠ. ನಮಗಿರುವವರು ಒಬ್ಬರೇ ಸ್ವಾಮೀಜಿ, ಅವರೇ ತೋಂಟದ ಸಿದ್ಧರಾಮ ಸ್ವಾಮೀಜಿ” ಎಂದು ಅಭಿಮಾನ ವ್ಯಕ್ತಪಡಿಸಿದರು.
ಪ್ರಭುದೇವ ಹಿರೇಮಠ ಅವರು ಅಂದಿನ ಕಾಲಘಟ್ಟದ ಐತಿಹಾಸಿಕ ಘಟನೆಗಳನ್ನು ಸ್ಮರಿಸಿ, ಶ್ರೀಮಠ ಹಾಗೂ ಶಿವಾನುಭವ ಪರಂಪರೆಯೊಂದಿಗೆ ಗದಗದ ಜನತೆ ಹೊಂದಿರುವ ಭಾವನಾತ್ಮಕ ಸಂಬಂಧವನ್ನು ವಿವರಿಸಿದರು.
ಶ್ರೀಮಠಕ್ಕೆ ಋಣಿಯಾಗಿದ್ದೇನೆ: ಡಾ. ಅರ್ಜುನ ಗೋಳಸಂಗಿ
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಅರ್ಜುನ ಗೋಳಸಂಗಿ ಅವರು, ತಾವು ಗದಗ ಪರಿಸರಕ್ಕೆ ಬರಲು ಹುಲಕೋಟಿಯ ಹಿರಿಯರಾದ ಎಚ್.ಕೆ. ಪಾಟೀಲ, ಡಿ.ಆರ್. ಪಾಟೀಲ ಹಾಗೂ ದತ್ತಪ್ಪಗೌಡ ಓದುಗೌಡರ ಪ್ರೇರಣೆ ಮತ್ತು ಕಾರಣವಾಗಿದೆ ಎಂದು ಹೇಳಿದರು.
ಶ್ರೀಮಠದೊಂದಿಗೆ ಒಡನಾಟ ಬೆಳೆದ ನಂತರ ತಮ್ಮ ವಿಚಾರಧಾರೆಯಲ್ಲಿ ಅಪಾರ ಬದಲಾವಣೆಯಾಗಿದೆ. ಶ್ರೀಮಠದ ಸಂಪರ್ಕದಿಂದ ಜೀವನ್ಮುಖಿಯಾದೆ. ಶ್ರೀಮಠಕ್ಕೆ ನಾನು ಸದಾ ಋಣಿಯಾಗಿದ್ದೇನೆ. ಮುಂದೆಯೂ ಶ್ರೀಮಠದ ಪ್ರತಿಯೊಂದು ಕಾರ್ಯದಲ್ಲಿ ಭಾಗವಹಿಸುತ್ತೇನೆ ಎಂದು ಅವರು ತಿಳಿಸಿದರು.
ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
ಶಿವಾನುಭವದ ಅಂಗವಾಗಿ ವಚನ ಸಂಗೀತವನ್ನು ಅಕ್ಷತಾ ಹಿರೇಮಠ ಅವರು ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಮೇಘನಾ ಯರಗುಡಿ, ವಚನ ಚಿಂತನವನ್ನು ಶ್ವೇತಾ ಯರಗುಡಿ ನೆರವೇರಿಸಿದರು.
ದಾಸೋಹ ಸೇವೆಯನ್ನು ಸುಷ್ಮಾ ಹಾಗೂ ಸಿದ್ದರಾಮೇಶ ಪಟ್ಟೇದ ಪರಿವಾರದವರು ನೆರವೇರಿಸಿದರು. ಲಿಂಗೈಕ್ಯ ಶ್ರೀಮತಿ ಬಸಲಿಂಗಮ್ಮ ಮಲ್ಲನಗೌಡ ದೇಸಾಯಿ, ಸುಳ್ಳ ಅವರ ಸ್ಮರಣಾರ್ಥ ಅವರ ಮಕ್ಕಳು ಹಾಗೂ ಲಿಂಗೈಕ್ಯ ಶ್ರೀ ಚಂದ್ರಶೇಖರಪ್ಪ ಈಶ್ವರಪ್ಪ ಮನವಳ್ಳಿ ಅವರ ಸ್ಮರಣಾರ್ಥ ಅವರ ಮಕ್ಕಳು ದಾಸೋಹ ಸೇವೆ ಸಲ್ಲಿಸಿದರು.
ಶಿವಾನುಭವ ಕಾರ್ಯಕ್ರಮದಲ್ಲಿ ಅನೇಕ ಹಿರಿಯರು, ಅನುಭಾವಿಗಳು ಹಾಗೂ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು. ಸುಮಂಗಲ ಮತ್ತು ಬಸವರಾಜ ಬುಳ್ಳಾ, ಲೀಲಾ ಹಾಗೂ ಅಮೃತ ಬುಳ್ಳಾ, ನಿರ್ಮಲ ಮತ್ತು ಶಿವಲಿಂಗಪ್ಪ ಕಂಕಣಮೇಲೆ, ಪ್ರಕಾಶ ಅಸುಂಡಿ, ಬರಗುಂಡಿ, ಗಿರಿಜಕ್ಕ ಧರ್ಮರೆಡ್ಡಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರಗು ತಂದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ವಿ. ಪುರದ ಅವರು ಸ್ವಾಗತಿಸಿದರು. ಶಿವಾನುಭವ ಸಮಿತಿ ಚೇರ್ಮನ್ ಡಾ. ರಮೇಶ ಮ. ಕಲ್ಲನಗೌಡರ ಕಾರ್ಯಕ್ರಮದ ನಿರ್ವಹಣೆ ಮಾಡಿದರು.
ಸಂಘದ ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP