
ಗದಗ, 12 ಆಗಸ್ಟ್ (ಹಿ.ಸ.)
ಆ್ಯಂಕರ್:- ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಭಾರತ ಜಿ ರಾಮ್ ಜೀ ಯೋಜನೆಯಡಿ ರೋಣ ತಾಲೂಕಿನಲ್ಲಿ ಜಾಬ್ ಕಾರ್ಡ್ ಮೇಳ ಹಾಗೂ ವಿಶೇಷ ಜಾಗೃತಿ ಅಭಿಯಾನವನ್ನು ಅಗಸ್ಟ 15 ರಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ರೋಣ ಹಾಗೂ ಗಜೇಂದ್ರಗಡ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ಹೇಳಿದರು..
ತಾಲೂಕ ಪಂಚಾಯತ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಆಗಸ್ಟ್ 15ರಿಂದ ರಾಜ್ಯದಾದ್ಯಂತ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಾಬ್ ಕಾರ್ಡ್ ಮೇಳ ಆಯೋಜಿಸುವ ಹಿನ್ನೆಲೆಯಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕು ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿಯೂ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಗ್ರಾಮೀಣ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಾನವ ದಿನಗಳ ಸೃಷ್ಟಿಗೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು..
ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳ ಮಾಹಿತಿಯನ್ನು ಪರಿಶೀಲಿಸುವುದು, ಅಗತ್ಯವಿರುವವರಿಗೆ ಹೊಸ ಜಾಬ್ ಕಾರ್ಡ್ ಮಾಡಿಸಿಕೊಡುವುದು, ಜಾಬ್ ಕಾರ್ಡ್ ನವೀಕರಣ ಪ್ರಕ್ರಿಯೆ ಪೂರ್ಣಗೊಳಿಸುವುದು ಸೇರಿದಂತೆ ಉದ್ಯೋಗದ ಬೇಡಿಕೆಯನ್ನು ಸ್ವೀಕರಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಕುಟುಂಬಗಳಿಗೆ ನಿಯಮಾನುಸಾರ ಸ್ವೀಕೃತಿ ನೀಡುವ ವ್ಯವಸ್ಥೆಯನ್ನು ಗ್ರಾಮ ಪಂಚಾಯತಿ ಯಲ್ಲಿ ಮಾಡಲಾಗುತ್ತಿದೆ ಎಂದರು..
ಇದರ ಜೊತೆಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ-ಮನೆ ಭೇಟಿ ಮೂಲಕ ಸಾರ್ವಜನಿಕರಿಗೆ ಯೋಜನೆಯ ಕುರಿತು ಮಾಹಿತಿ ನೀಡುವುದು, ಗ್ರಾಮ ಮಟ್ಟದಲ್ಲಿ ಸಭೆಗಳನ್ನು ನಡೆಸುವುದು, ಪೋಸ್ಟರ್ ಹಾಗೂ ಬ್ಯಾನರ್ಗಳ ಮೂಲಕ ಜಾಗೃತಿ ಮೂಡಿಸುವುದು ಮತ್ತು ಜಾಬ್ ಕಾರ್ಡ್ ಮೇಳದ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲು ಸೂಚಿಸಲಾಗಿದೆ. ಗ್ರಾಮೀಣ ಜನರು ಯೋಜನೆಯ ಪ್ರಯೋಜನ ಪಡೆಯಲು ಅಗತ್ಯ ದಾಖಲೆಗಳೊಂದಿಗೆ ತಮ್ಮ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಕಾರ್ಮಿಕರ ಹಾಜರಾತಿ, ಕಾಮಗಾರಿಗಳ ಪ್ರಗತಿ ಹಾಗೂ ಸಂಬಂಧಿತ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ನಿರ್ವಹಿಸುವುದಕ್ಕೂ ಒತ್ತು ನೀಡಲಾಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಬಂಧಿತ ಕಾರ್ಯಕರ್ತರು ಸಮನ್ವಯದಿಂದ ಕಾರ್ಯನಿರ್ವಹಿಸಿ ಅರ್ಹ ಕುಟುಂಬಗಳಿಗೆ ಯೋಜನೆಯ ಸೌಲಭ್ಯ ತಲುಪಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು..
“ಉದ್ಯೋಗದ ಅವಕಾಶವನ್ನು ಅರ್ಹ ಕುಟುಂಬಗಳ ಮನೆಬಾಗಿಲಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಜಾಬ್ ಕಾರ್ಡ್, ಕೆವೈಸಿ ಹಾಗೂ ಉದ್ಯೋಗದ ಬೇಡಿಕೆ ಸಲ್ಲಿಕೆ ಸೇರಿದಂತೆ ಯಾವುದೇ ಮಾಹಿತಿ ಅಗತ್ಯವಿದ್ದರೂ ಸಾರ್ವಜನಿಕರು ತಮ್ಮ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಬೇಕು. ಯೋಜನೆಯ ಅನುಷ್ಠಾನದಲ್ಲಿ ಜನರ ಸಹಕಾರ ಅತ್ಯಂತ ಮುಖ್ಯ” ಎಂದು ತಿಳಿಸಿದರು
ಜನರು ಜಾಬ್ ಕಾರ್ಡ್ ಮೇಳದ ಸದುಪಯೋಗ ಪಡೆದುಕೊಂಡು ಉದ್ಯೋಗದ ಬೇಡಿಕೆಯನ್ನು ಸಲ್ಲಿಸಿ, ಗ್ರಾಮೀಣ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಹಾಗೂ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಮಾಡುವಂತೆ ಕಾರ್ಯನಿರ್ವಾಹ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಜನರಿಗೆ ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP