
ಕೊಪ್ಪಳ, 12 ಆಗಸ್ಟ್ (ಹಿ.ಸ.)
ಆ್ಯಂಕರ್ : ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಶೀಘ್ರವಾಗಿ ಬಗೆಹರಿಸಿಕೊಳ್ಳಲು ಪಕ್ಷಗಾರರಿಗೆ ಅತ್ಯುತ್ತಮ ಅವಕಾಶಗಳು ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಲತಾ ಕುಮಾರಿ ಎಮ್. ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ 12ರಂದು ಲೋಕ್ ಅದಾಲತ್:
ಬರುವ ಸೆಪ್ಟೆಂಬರ್ 12 ರಂದು ಕೊಪ್ಪಳ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ `ಲೋಕ್ ಅದಾಲತ್' ಆಯೋಜಿಸಲಾಗಿದೆ. ಇದರಲ್ಲಿ ಪ್ರಕರಣಗಳು, ಸಿವಿಲ್ ದಾವೆಗಳು, ಭೂ ಸ್ವಾಧೀನ, ಬ್ಯಾಂಕ್ ವಸೂಲಾತಿ, ಚೆಕ್ ಬೌನ್ಸ್, ಮೋಟಾರು ಅಪಘಾತ ಪರಿಹಾರ, ವೈವಾಹಿಕ ದಾವೆಗಳು ಹಾಗೂ ರಾಜಿಯಾಗಬಹುದಾದ ಕ್ರಿಮಿನಲ್ (ಕಂಪೌ0ಡೆಬಲ್) ಪ್ರಕರಣಗಳನ್ನು ಇತ್ಯರ್ಥಪಡಿಸಬಹುದಾಗಿದೆ.
ವಿಶೇಷ ಪ್ರಯೋಜನ: ಲೋಕ್ ಅದಾಲತ್ನಲ್ಲಿ ಪ್ರಕರಣ ಇತ್ಯರ್ಥಗೊಂಡರೆ ನ್ಯಾಯಾಲಯಕ್ಕೆ ಪಾವತಿಸಲಾದ ಪೂರ್ಣ ನ್ಯಾಯಾಲಯ ಶುಲ್ಕವನ್ನು ಸಂಪೂರ್ಣವಾಗಿ ವಾಪಸ್ ನೀಡಲಾಗುವುದು.
ಸರ್ವೋಚ್ಚ ನ್ಯಾಯಾಲಯದ `ಸಮಾಧಾನ ಸಮಾರೋಹ': ಭಾರತದ ಸರ್ವೋಚ್ಚ ನ್ಯಾಯಾಲಯವು ಇದೇ ಆಗಸ್ಟ್ 21, 22 ಮತ್ತು 23 ರಂದು ಮೂರು ದಿನಗಳ ಕಾಲ 'ಸಮಾಧಾನ ಸಮಾರೋಹ' ವಿಶೇಷ ಲೋಕ್ ಅದಾಲತ್ ಹಮ್ಮಿಕೊಂಡಿದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಒಟ್ಟು 4,328 ಪ್ರಕರಣಗಳನ್ನು ಸಂಧಾನಕ್ಕಾಗಿ ಗುರುತಿಸಲಾಗಿದ್ದು, ಅದರಲ್ಲಿ ಕೊಪ್ಪಳ ಜಿಲ್ಲೆಗೆ ಈವರೆಗೆ 70 ಪ್ರಕರಣಗಳನ್ನು (68 ಸಿವಿಲ್, 2 ಕ್ರಿಮಿನಲ್) ಗುರುತಿಸಲಾಗಿದೆ.
ಸರ್ವೋಚ್ಚ ನ್ಯಾಯಾಲಯದಲ್ಲಿ ವ್ಯಾಜ್ಯ ಬಾಕಿ ಇರುವ ಆಸಕ್ತರು ತಾಲೂಕು, ಜಿಲ್ಲಾ ಅಥವಾ ರಾಜ್ಯ ಮಟ್ಟದ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿ ಇಂದಿನಿಂದಲೇ ನೋಂದಾಯಿಸಿಕೊಳ್ಳಬಹುದು. ಆಯ್ಕೆಯಾದ ಪ್ರಕರಣಗಳನ್ನು ಸ್ಥಳೀಯ ಮಧ್ಯಸ್ಥಿಕೆದಾರರ ನೆರವಿನಿಂದ ಜಿಲ್ಲಾ ಅಥವಾ ತಾಲೂಕು ಮಟ್ಟದಲ್ಲೇ ಬಗೆಹರಿಸಿಕೊಳ್ಳಬಹುದು.
`ಮಧ್ಯಸ್ಥಿಕೆ 3.0' ವಿಶೇಷ ಆಂದೋಲನ: `ಮಧ್ಯಸ್ಥಿಕೆ 3.0' ವಿಶೇಷ ಆಂದೋಲನವು ಆಗಸ್ಟ್ 01 ರಿಂದ ಆರಂಭವಾಗಿದ್ದು, ಡಿಸೆಂಬರ್ 30 ರವರೆಗೆ ನಡೆಯಲಿದೆ.
ವೈಶಿಷ್ಟಗಳು: ತಟಸ್ಥ ಮಧ್ಯಸ್ಥಿಕೆದಾರರ ಸಮ್ಮುಖದಲ್ಲಿ ಗೌಪ್ಯ, ಪಾರದರ್ಶಕ ಹಾಗೂ ಉಭಯ ಪಕ್ಷಗಾರರ ಒಪ್ಪಿಗೆಯೊಂದಿಗೆ ಆಪ್ತ ಸಮಾಲೋಚನೆ ನಡೆಯಲಿದೆ. ಇದರಿಂದ ಸಮಯ ಹಾಗೂ ಹಣದ ಉಳಿತಾಯವಾಗಲಿದೆ.
ಸೂಕ್ತ ಪ್ರಕರಣಗಳು: ಕೌಟುಂಬಿಕ ವ್ಯಾಜ್ಯಗಳು, ಸಿವಿಲ್ ದಾವೆಗಳು, ವಿಚ್ಛೇದನ ಹಾಗೂ ಚೆಕ್ ಬೌನ್ಸ್ ಪ್ರಕರಣಗಳು. ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ವಕೀಲರು ತಮ್ಮ ಕಕ್ಷಿಗಾರರಿಗೆ ಮಾರ್ಗದರ್ಶನ ನೀಡಿ ಈ ವಿಶೇಷ ಆಂದೋಲನವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್