
ಬೆಂಗಳೂರು, 12 ಆಗಸ್ಟ್ (ಹಿ.ಸ.):
ಆ್ಯಂಕರ್:
ಜಾಗತಿಕ ವಿಮಾನಯಾನ, ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರಿಶೀಲನೆ (ಎಂಆರ್‌ಒ) ಹಾಗೂ ತಾಂತ್ರಿಕ ಸೇವೆಗಳ ಮುಂಚೂಣಿ ಸಂಸ್ಥೆ ಲುಫ್ತಾನ್ಸಾ ಟೆಕ್ನಿಕ್ ತನ್ನ ವಿಸ್ತರಣೆಯ ಮುಂದಿನ ಹಂತಕ್ಕಾಗಿ ಭಾರತವನ್ನು ಪರಿಗಣಿಸುತ್ತಿದ್ದು, ಕರ್ನಾಟಕವೂ ಪ್ರಮುಖ ಸಂಭಾವ್ಯ ತಾಣವಾಗಿ ಗಮನ ಸೆಳೆದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಸಂಸ್ಥೆಯ ಹಿರಿಯ ಜಾಗತಿಕ ನಿಯೋಗವು ಬುಧವಾರ ಸಚಿವರನ್ನು ಭೇಟಿಯಾಗಿ, ಸಂಸ್ಥೆಯ ವಿಸ್ತರಣಾ ಯೋಜನೆಗಳು ಹಾಗೂ ಕರ್ನಾಟಕದಲ್ಲಿ ಹೂಡಿಕೆಯ ಸಾಧ್ಯತೆಗಳ ಕುರಿತು ಮಹತ್ವದ ಮಾತುಕತೆ ನಡೆಸಿತು. ಬೆಂಗಳೂರಿನ ಜರ್ಮನ್ ಉಪ ಕಾನ್ಸುಲ್ ಜನರಲ್ ಅನೆಟ್ ಬೇಸ್ಲರ್ ಸಭೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕದ ಬಲಿಷ್ಠ ಏರೋಸ್ಪೇಸ್ ಮತ್ತು ರಕ್ಷಣಾ ಕೈಗಾರಿಕಾ ಪರಿಸರ ವ್ಯವಸ್ಥೆ, ವಿಶ್ವದರ್ಜೆಯ ಎಂಜಿನಿಯರಿಂಗ್ ಹಾಗೂ ಸಂಶೋಧನೆ-ಅಭಿವೃದ್ಧಿ ಪ್ರತಿಭೆ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲ, ಅಭಿವೃದ್ಧಿ ಹೊಂದಿರುವ ವಿಮಾನಯಾನ ಪೂರೈಕೆ ಸರಪಳಿ, ಬಲಿಷ್ಠ ಎಂಆರ್‌ಒ ಸಾಮರ್ಥ್ಯ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜಾಗತಿಕ ಸಂಪರ್ಕ ಜಾಲವು ಲುಫ್ತಾನ್ಸಾ ಟೆಕ್ನಿಕ್‌ನ ಗಮನ ಸೆಳೆದಿವೆ.
ಜಾಗತಿಕ ಏರೋಸ್ಪೇಸ್ ನಕ್ಷೆಯಲ್ಲಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೇರಿಸುವ ನಿಟ್ಟಿನಲ್ಲಿ ಈ ಬೆಳವಣಿಗೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.