
ಬಾಗಲಕೋಟೆ, 12 ಆಗಸ್ಟ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ
ಜಿಲ್ಲಾ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದ ತಂಡವು ಬುಧವಾರ ಹುನಗುಂದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ಮುಖ್ಯ ಔಷಧ ಉಗ್ರಾಣದಲ್ಲಿ ಸಂಗ್ರಹಿಸಲಾಗಿರುವ ಮಾತ್ರೆ, ಔಷಧಗಳು ಹಾಗೂ ಸಂಬಂಧಿತ ದಾಖಲೆಗಳನ್ನು ಪರಿಶೀಲನೆ ನಡೆಸಿತು.
ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗಬೇಕಾದ ಔಷಧಗಳ ಸಂಗ್ರಹ, ವಿತರಣೆ ಹಾಗೂ ಬಳಕೆಯ ಕುರಿತು ತಂಡವು ಮಾಹಿತಿ ಪಡೆದುಕೊಂಡಿತು. ಔಷಧ ಉಗ್ರಾಣದಲ್ಲಿರುವ ವಿವಿಧ ಬಗೆಯ ಮಾತ್ರೆ ಮತ್ತು ಔಷಧಗಳ ದಾಸ್ತಾನು ಪ್ರಮಾಣ, ದಾಖಲೆಗಳಲ್ಲಿ ನಮೂದಿಸಿರುವ ವಿವರಗಳು ಹಾಗೂ ವಾಸ್ತವಿಕವಾಗಿ ಲಭ್ಯವಿರುವ ಔಷಧಗಳ ನಡುವೆ ಹೊಂದಾಣಿಕೆ ಇದೆಯೇ ಎಂಬುದನ್ನು ಪರಿಶೀಲಿಸಲಾಯಿತು.
ಇದೇ ವೇಳೆ ಔಷಧಗಳ ಸ್ವೀಕೃತಿ, ವಿತರಣೆ, ಉಳಿಕೆ ದಾಸ್ತಾನು ಸೇರಿದಂತೆ ನಿರ್ವಹಿಸಲಾಗುತ್ತಿರುವ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯ ಔಷಧಗಳು ಸಮರ್ಪಕವಾಗಿ ಲಭ್ಯವಾಗುತ್ತಿವೆಯೇ ಹಾಗೂ ಸರ್ಕಾರದ ನಿಯಮಾನುಸಾರ ಅವುಗಳ ನಿರ್ವಹಣೆ ನಡೆಯುತ್ತಿದೆಯೇ ಎಂಬ ಅಂಶಗಳ ಮೇಲೂ ಗಮನ ಹರಿಸಲಾಯಿತು.
ಲೋಕಾಯುಕ್ತ ಪೊಲೀಸ್ ತಂಡದ ದಿಢೀರ್ ಭೇಟಿ ಹಾಗೂ ದಾಖಲೆಗಳ ಪರಿಶೀಲನೆಯಿಂದ ಆಸ್ಪತ್ರೆಯ ಸಿಬ್ಬಂದಿಯಲ್ಲಿ ಕೆಲಕಾಲ ಚಟುವಟಿಕೆ ಹೆಚ್ಚಾಗಿತ್ತು. ಪರಿಶೀಲನೆಯ ವೇಳೆ ಅಗತ್ಯ ಮಾಹಿತಿಯನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಪಡೆದುಕೊಳ್ಳಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande