

ಕೊಪ್ಪಳ, 12 ಆಗಸ್ಟ್ (ಹಿ.ಸ.)
ಆ್ಯಂಕರ್ :
ಗವಿಶ್ರೀಗಳು ಹೇಳಿದ್ದೇನು, ಜನಪ್ರತಿನಿಧಿಗಳು ಮಾಡಿದ್ದೇನು’ ಎಂಬ ಪ್ರಶ್ನೆಯೊಂದಿಗೆ ಆ.15ರಂದು ಸಚಿವ ಶಿವರಾಜ ತಂಗಡಗಿ ಅವರನ್ನು ಧರಣಿ ಸ್ಥಳದಲ್ಲಿ ಪ್ರಶ್ನಿಸಲು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನಿರ್ಧರಿಸಿದೆ.
286ನೇ ದಿನದ ಧರಣಿಯಲ್ಲಿ ಮಾತನಾಡಿದ ಜಂಟಿ ಕ್ರಿಯಾ ವೇದಿಕೆಯ ಸಂಚಾಲಕ ಶಿವಕುಮಾರ ಕುಕನೂರು, ಆ.15ರಂದು ಜಿಲ್ಲಾ ಕ್ರೀಡಾಂಗಣಕ್ಕೆ ಬರುವುದಾಗಿ ಸಚಿವರಿಗೆ ದೂರವಾಣಿ ಮೂಲಕ ತಿಳಿಸಿದಾಗ, ‘ನಾನೇ ನಗರಸಭೆ ಆವರಣದಲ್ಲಿರುವ ಧರಣಿ ಸ್ಥಳಕ್ಕೆ ಬರುತ್ತೇನೆ’ ಎಂದು ಸಚಿವರು ತಿಳಿಸಿದ್ದಾರೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಆ.15ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸಚಿವರು, ಶಾಸಕರು ಹಾಗೂ ಸಂಸದರು ನೇರವಾಗಿ ಧರಣಿ ಸ್ಥಳಕ್ಕೆ ಆಗಮಿಸಲಿದ್ದಾರೆ. ಈ ವೇಳೆ ‘ಗವಿಶ್ರೀಗಳು ಹೇಳಿದ್ದೇನು, ಜನಪ್ರತಿನಿಧಿಗಳು ಮಾಡಿದ್ದೇನು’ ಎಂಬ ಪ್ರಶ್ನೆಯೊಂದಿಗೆ ಹೋರಾಟ ನಡೆಸಲಾಗುವುದು ಎಂದು ವೇದಿಕೆ ತಿಳಿಸಿದೆ.
ಕೊಪ್ಪಳ-ಭಾಗ್ಯನಗರದ ನಾಗರಿಕರು ಹಾಗೂ ಬಾಧಿತ ಗ್ರಾಮಗಳ ರೈತರು ಆ.15ರಂದು ಬೆಳಗ್ಗೆ 9 ಗಂಟೆಗೆ ಧರಣಿ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಆಗಮಿಸುವಂತೆ ಜಂಟಿ ಕ್ರಿಯಾ ವೇದಿಕೆ ಮನವಿ ಮಾಡಿದೆ.
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ.ಗೋನಾಳ, ರಮೇಶ್ ತುಪ್ಪದ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ ಸೇರಿದಂತೆ ಹಲವು ಮುಖಂಡರು ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್