
ಬೆಂಗಳೂರು, 12 ಆಗಸ್ಟ್ (ಹಿ.ಸ.):
ಆ್ಯಂಕರ್:
ಗೃಹೋದ್ಯಮದಿಂದ ಹಿಡಿದು ಬೃಹತ್ ಕೈಗಾರಿಕೆಗಳವರೆಗೆ ಕುಂದಾಪುರದ ಜನರು ಜಗತ್ತಿನ ವಿವಿಧ ದೇಶಗಳಲ್ಲಿ ನೆಲೆಸಿದ್ದು, ಕನ್ನಡತನವನ್ನು ವಿಶ್ವದ ಮೂಲೆಮೂಲೆಗೂ ತಲುಪಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಆಷಾಢ ಅಮಾವಾಸ್ಯೆಯ ಅಂಗವಾಗಿ ವಿಶ್ವ ಕುಂದಾಪ್ರ ಕನ್ನಡ ದಿನದ ಶುಭಾಶಯ ಕೋರಿರುವ ಅವರು, ಊರು, ದೇಶ ಹಾಗೂ ಬದುಕು ಬದಲಾದರೂ ಕುಂದಾಪುರದ ಜನರ ಭಾಷೆ ಬದಲಾಗಿಲ್ಲ. ಕನ್ನಡ ಭಾಷೆಯೆಡೆಗಿನ ಅವರ ಅಭಿಮಾನವೂ ಮಾಸಿಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ವೈಶಿಷ್ಟ್ಯಪೂರ್ಣ ಭಾಷೆ, ಸಂಸ್ಕೃತಿ, ಆಚಾರ–ವಿಚಾರಗಳನ್ನು ಹೊಂದಿರುವ ಕುಂದಾಪುರ, ಈ ನೆಲದ ಬಹುತ್ವದ ಪ್ರತೀಕವಾಗಿದೆ. ಪ್ರತಿ ವರ್ಷ ಆಷಾಢ ಅಮಾವಾಸ್ಯೆಯನ್ನು ವಿಶ್ವ ಕುಂದಾಪ್ರ ಕನ್ನಡ ದಿನವಾಗಿ ಆಚರಿಸುವ ಮೂಲಕ ಕುಂದಾಪ್ರ ಕನ್ನಡದ ಭಾಷೆ ಮತ್ತು ಬದುಕನ್ನು ಹೆಮ್ಮೆಯಿಂದ ಸಂಭ್ರಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕುಂದಾಪ್ರ ಕನ್ನಡವೆಂಬ ವಿಶಿಷ್ಟ ಹಾಗೂ ಸೊಗಸಾದ ಭಾಷೆಯನ್ನು ಮಾತನಾಡುವ ಎಲ್ಲರಿಗೂ ವಿಶ್ವ ಕುಂದಾಪ್ರ ಕನ್ನಡ ದಿನದ ಹಾರ್ದಿಕ ಶುಭಾಶಯಗಳು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.