ಗದಗದಲ್ಲಿ ಹರ್ ಘರ್ ತಿರಂಗಾ ಅಭಿಯಾನ
ಗದಗ, 12 ಆಗಸ್ಟ್ (ಹಿ.ಸ.) ಆ್ಯಂಕರ್:- 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗದಗ ನಗರದಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಭರ್ಜರಿ ಚಾಲನೆ ದೊರೆಯಿತು. ನಗರದ ಹಾತಲಗೇರಿ ನಾಕಾದಿಂದ ಆರಂಭಗೊಂಡ ಅಭಿಯಾನದಲ್ಲಿ ನೂರಾರು ವಿದ್ಯಾರ್ಥಿಗಳು 100 ಮೀಟರ್ ಉದ್ದದ ಬೃಹತ್ ತ್ರಿವರ್ಣ ಧ್ವಜವನ್ನು ಹಿಡಿದು ದೇಶಭಕ್
ಫೋಟೋ


ಗದಗ, 12 ಆಗಸ್ಟ್ (ಹಿ.ಸ.)

ಆ್ಯಂಕರ್:- 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗದಗ ನಗರದಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಭರ್ಜರಿ ಚಾಲನೆ ದೊರೆಯಿತು. ನಗರದ ಹಾತಲಗೇರಿ ನಾಕಾದಿಂದ ಆರಂಭಗೊಂಡ ಅಭಿಯಾನದಲ್ಲಿ ನೂರಾರು ವಿದ್ಯಾರ್ಥಿಗಳು 100 ಮೀಟರ್ ಉದ್ದದ ಬೃಹತ್ ತ್ರಿವರ್ಣ ಧ್ವಜವನ್ನು ಹಿಡಿದು ದೇಶಭಕ್ತಿಯ ಘೋಷಣೆಗಳೊಂದಿಗೆ ಪಥಸಂಚಲನ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಪ್ರತಿಯೊಬ್ಬರ ಮನೆಗೂ ತಲುಪಿಸುವ ಉದ್ದೇಶದಿಂದ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವುದರ ಜೊತೆಗೆ ಯುವಜನರಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರಾಭಿಮಾನದ ಭಾವನೆ ಮೂಡಿಸುವುದು ಇಂತಹ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದು ಹೇಳಿದರು.

ಹಾತಲಗೇರಿ ನಾಕಾದಿಂದ ಆರಂಭವಾದ ಪಥಸಂಚಲನ ಕೆ.ಸಿ. ರಾಣಿ ರಸ್ತೆ ಮಾರ್ಗವಾಗಿ ಕೆ.ಸಿ.ಸಿ. ಬ್ಯಾಂಕ್, ರೋಟರಿ ವೃತ್ತ, ಹಳೆ ಬಸ್ ನಿಲ್ದಾಣ, ಹುಯಿಲಗೋಳ ನಾರಾಯಣರಾವ್ ವೃತ್ತ ಹಾಗೂ ಮಹೇಂದ್ರಕರ ವೃತ್ತದ ಮೂಲಕ ಸಾಗಿತು. ಬಳಿಕ ತೋಂಟದಾರ್ಯ ಮಠದ ಮುಂಭಾಗದಲ್ಲಿ ಪಥಸಂಚಲನ ಮುಕ್ತಾಯಗೊಂಡಿತು.

ನೂರಾರು ವಿದ್ಯಾರ್ಥಿಗಳು ಕೈಕೈ ಹಿಡಿದು 100 ಮೀಟರ್ ಉದ್ದದ ಬೃಹತ್ ತ್ರಿವರ್ಣ ಧ್ವಜವನ್ನು ಹೊತ್ತು ಸಾಗಿದ್ದು, ರಸ್ತೆಯುದ್ದಕ್ಕೂ ದೇಶಭಕ್ತಿಯ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿಗಳೊಂದಿಗೆ ಬಿಜೆಪಿ ಮುಖಂಡರು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

ಪಥಸಂಚಲನದ ವೇಳೆ ‘ಭಾರತ್ ಮಾತಾ ಕೀ ಜೈ’, ‘ವಂದೇ ಮಾತರಂ’ ಸೇರಿದಂತೆ ದೇಶಭಕ್ತಿ ಘೋಷಣೆಗಳು ಮೊಳಗಿದವು. ತ್ರಿವರ್ಣ ಧ್ವಜದೊಂದಿಗೆ ಸಾಗಿದ ವಿದ್ಯಾರ್ಥಿಗಳ ದೇಶಭಕ್ತಿಯ ಉತ್ಸಾಹ ಸಾರ್ವಜನಿಕರ ಗಮನ ಸೆಳೆಯಿತು.

ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮನೆ-ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶದ ಸ್ವಾತಂತ್ರ್ಯ, ಸಾರ್ವಭೌಮತೆ ಮತ್ತು ಏಕತೆಯನ್ನು ಗೌರವಿಸಬೇಕು ಎಂಬ ಸಂದೇಶವನ್ನು ಹರ್ ಘರ್ ತಿರಂಗಾ ಅಭಿಯಾನದ ಮೂಲಕ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಹಿಂದೂ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ಅಭಿಯಾನದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ದೇಶಭಕ್ತಿಯ ಸಂಭ್ರಮ ಮನೆಮಾಡಿತ್ತು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande