
ಬೆಂಗಳೂರು, 12 ಆಗಸ್ಟ್ (ಹಿ.ಸ.):
ಆ್ಯಂಕರ್:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೇದಿಕೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ ಸರ್ಕಾರದ ಅಧೀನದಲ್ಲಿರುವ ಬಿಎಸ್‌ಡಬ್ಲ್ಯೂಎಂಸಿಎಲ್ ಕಸದ ಟೆಂಡರ್‌ಗಳಲ್ಲಿ ನೂರು ಕೋಟಿಗೂ ಅಧಿಕ ಮೊತ್ತದ ನಿಯಮ ಉಲ್ಲಂಘನೆ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅವರು, ನಕಲಿ ಹಾಗೂ ದ್ವಿಬಿಲ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ಕಸದ ಟೆಂಡರ್‌ಗಳಲ್ಲಿ ನಡೆದಿರುವ ಅಕ್ರಮಗಳು ಬಯಲಿಗೆ ಬಂದಾಗ ಸರ್ಕಾರದ ಕ್ರಮ ಏಕೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ನಿಯಮಗಳ ಪ್ರಕಾರ ಕಡ್ಡಾಯವಾಗಿರುವ ಭದ್ರತಾ ಠೇವಣಿ ಸಲ್ಲಿಸದ ಗುತ್ತಿಗೆದಾರರಿಗೂ ಕೋಟ್ಯಂತರ ರೂಪಾಯಿ ಮೊತ್ತದ ಕಾರ್ಯಾದೇಶ ನೀಡಲಾಗಿದೆ ಎಂದು ಆರೋಪಿಸಿರುವ ಅಶೋಕ, ನಿಯಮ ಪಾಲಿಸುವ ಗುತ್ತಿಗೆದಾರರಿಗೆ ಒಂದು ನ್ಯಾಯ, ಸರ್ಕಾರದ ಬೆಂಬಲ ಹೊಂದಿರುವವರಿಗೆ ಮತ್ತೊಂದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಿ ಕಡತಗಳಲ್ಲೇ ನಿಯಮ ಉಲ್ಲಂಘನೆಗಳು ದಾಖಲಾಗಿದ್ದರೂ ಅವುಗಳನ್ನು ನಿರ್ಲಕ್ಷಿಸಿ ನಿರ್ಧಾರ ಕೈಗೊಂಡ ಅಧಿಕಾರಿಗಳು ಯಾರು ಮತ್ತು ಅವರಿಗೆ ಬೆಂಬಲ ನೀಡುತ್ತಿರುವವರು ಯಾರು ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಸದ ಟೆಂಡರ್‌ಗಳಲ್ಲಿ ಕೋಟ್ಯಂತರ ರೂಪಾಯಿ ವ್ಯತ್ಯಾಸದ ಮೊತ್ತಕ್ಕೂ ವಿನಾಯಿತಿ ನೀಡಿರುವುದರ ಹಿಂದೆ ಯಾವ ಉದ್ದೇಶವಿದೆ ಎಂಬುದನ್ನು ತನಿಖೆ ನಡೆಸಬೇಕು. ಬೆಂಗಳೂರಿನ ಕಸ ವಿಲೇವಾರಿಯಂತಹ ಮೂಲಭೂತ ಸೇವೆಯಲ್ಲೂ ಪಾರದರ್ಶಕತೆ ಕಾಪಾಡಲು ವಿಫಲವಾಗಿರುವ ಸರ್ಕಾರ ‘ಬ್ರ್ಯಾಂಡ್ ಬೆಂಗಳೂರು’ ನಿರ್ಮಿಸುವುದಾಗಿ ಹೇಳುವುದು ಜನರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ಎಂದು ಟೀಕಿಸಿದ್ದಾರೆ.
ಬಿಎಸ್‌ಡಬ್ಲ್ಯೂಎಂಸಿಎಲ್ ಟೆಂಡರ್ ಅಕ್ರಮಗಳ ಕುರಿತು ತಕ್ಷಣ ಸಿಬಿಐ ತನಿಖೆಗೆ ಆದೇಶಿಸಬೇಕು, ನಿಯಮಬಾಹಿರವಾಗಿ ನೀಡಿರುವ ಕಾರ್ಯಾದೇಶಗಳನ್ನು ರದ್ದುಗೊಳಿಸಬೇಕು, ಅಕ್ರಮಕ್ಕೆ ಸಾಥ್ ನೀಡಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕಸದ ಟೆಂಡರ್‌ಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಅಶೋಕ ಒತ್ತಾಯಿಸಿದ್ದಾರೆ.
‘ವೇದಿಕೆ ಹತ್ತಿದರೆ ಭ್ರಷ್ಟಾಚಾರ ವಿರೋಧಿ ಮಾತು, ಪರದೆ ಹಿಂದೆ ಕಮಿಷನ್ ಕಲೆಕ್ಷನ್’ ಎಂಬ ಆರೋಪ ಮಾಡಿರುವ ಅವರು, ಇದು ‘ಬ್ರ್ಯಾಂಡ್ ಬೆಂಗಳೂರು’ ಅಲ್ಲ, ಕಾಂಗ್ರೆಸ್ ಸರ್ಕಾರದ ‘ಬ್ರ್ಯಾಂಡ್ ಭ್ರಷ್ಟಾಚಾರ’ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರು ಜನರ ತೆರಿಗೆ ಹಣದ ದುರುಪಯೋಗವನ್ನು ಜನರು ಸಹಿಸುವುದಿಲ್ಲ. ಮುಂಬರುವ ಜಿಬಿಎ ಚುನಾವಣೆಯಲ್ಲಿ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅಶೋಕ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.