
ಕೋಲಾರ, 13 ಆಗಷ್ಟ್ (ಹಿ.ಸ.):
ಆ್ಯಂಕರ್ : ಜಾನಪದ ಕಲೆಗಳು ನಮ್ಮ ಸಂಸ್ಕೃತಿಯ ಜೀವನಾಡಿಯಾಗಿದೆ. ಇಂದಿನ ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಯ ಹಾವಳಿಯಿಂದ ದೂರ ಉಳಿದು ನಮ್ಮ ಮಣ್ಣಿನ ಸೊಗಡಿನ ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಜಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಕೋಲಾರ ತಾಲ್ಲೂಕು ಬೆಗ್ಲಿಹೊಸಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಶಾಂತಿ ಸೌಹಾರ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಜಾನಪದ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಇಂತಹ ವೇದಿಕೆಗಳು ಅತ್ಯಗತ್ಯವಾಗಿದ್ದು, ಹೆತ್ತ ತಾಯಿ ಮತ್ತು ಜಾನಪದ ಕಲೆಯನ್ನು ಎಂದಿಗೂ ಮರೆಯಬಾರದು ಎಂದರು.
ಕವಿ, ಸಾಹಿತಿ ಡಾ.ಶರಣಪ್ಪ ಗಬ್ಬೂರ್ ಮಾತನಾಡಿ, ನಮ್ಮ ಹಿರಿಯರು ಬಿಟ್ಟುಹೋದ ಜಾನಪದ ಸಂಪತ್ತು ಅಮೂಲ್ಯವಾದದ್ದು, ಇಂದಿನ ಯುವ ಪೀಳಿಗೆಯು ಜಾನಪದ ಅಧ್ಯಯನದ ಕಡೆಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ವೆಂಕಟಾಚಲಪತಿ ಮತ್ತು ತಂಡದಿಂದ ಜಾನಪದ ಗಾಯನ, ರಕ್ಷಿತ ಮತ್ತು ತಂಡದಿಂದ ಸುಗಮ ಸಂಗೀತ, ಗಣೇಶಪ್ಪ ಮತ್ತು ತಂಡದಿಂದ ಕೋಲಾಟ, ನಾಗರಾಜ್ ಮತ್ತು ತಂಡದಿಂದ ಸಮೂಹ ಗೀತಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಂತಿ ಸೌಹಾರ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಹೆಚ್.ಶಾಂತಮ್ಮ, ಗಾಯಕಿ ಎಂ.ಶೈಲಜಾ, ರಮ್ಯ, ಗ್ರಾಮದ ಮುಖಂಡರಾದ ಕಲಾವಿದ ಬಿ.ನಾರಾಯಣಸ್ವಾಮಿ, ಸಮಾಜ ಸೇವಕ ಬಿ.ಜಿ.ಸುರೇಶ್, ನಿವೃತ್ತ ಶಿಕ್ಷಕ ಚಂದ್ರಪ್ಪ, ಶ್ರೀನಿವಾಸ್, ಬಿಲ್ ಕಲೆಕ್ಟರ್ ಪ್ರಭಾಕರ್, ನಿವೃತ್ತ ಶಿಕ್ಷಕ ರಾಮೇಗೌಡ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್