
ಕೋಲಾರ, 12 ಆಗಷ್ಟ್ (ಹಿ.ಸ):
ಆ್ಯಂಕರ್ : ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ದೂರುಗಳು ಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಮಾನತುಗೊಳಿಸಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಬೆಸ್ಕಾಂ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಆರ್ಡಿಪಿಆರ್ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಹಾಗೂ ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು ಈಗಾಗಲೇ ಮುಖ್ಯಮಂತ್ರಿ ಆದಿಯಾಗಿ ಉಸ್ತುವಾರಿ ಸಚಿವರು ಆದೇಶದಂತೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು
ದೊಡ್ಡಹಸಾಳ ಗ್ರಾಮದ ಕೊಳವೆಬಾವಿಯಲ್ಲಿ ಫ್ಲೋರೈಡ್ ಅಂಶವಿರುವ ನೀರು ಬರುತ್ತಿರುವ ಬಗ್ಗೆ ಮಾಹಿತಿ ಪಡೆದ ಶಾಸಕರು, ಕೂಡಲೇ ಹೊಸ ಕೊಳವೆಬಾವಿ ಕೊರೆಯಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಮೂರು ಹಾಸ್ಟೆಲ್ಗಳಲ್ಲೂ ನೀರಿನ ಸಮಸ್ಯೆ ಇರುವ ಬಗ್ಗೆ ಪಿಡಿಒ ಮಾಹಿತಿ ನೀಡಿದರು ನರಸಾಪುರ ಸಮುದಾಯ ಆಸ್ಪತ್ರೆಗೆ ನೀರಿನ ಸಂಪರ್ಕ ಕಲ್ಪಿಸುವಂತೆ ಮೂರು ತಿಂಗಳ ಹಿಂದೆಯೇ ಸೂಚಿಸಿದ್ದರೂ ಕಾಮಗಾರಿ ಪೂರ್ಣಗೊಳಿಸದಿರುವ ಬಗ್ಗೆ ನರಸಾಪುರ ಪಿಡಿಒ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು
ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮಗಳ ಪಟ್ಟಿಯನ್ನು ನೀಡುವಂತೆ ಸೂಚಿಸಿದ ಅವರು, ಅಂತಹ ಗ್ರಾಮಗಳಿಗೆ ಹೆಚ್ಚುವರಿ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳನ್ನು ಒದಗಿಸಲಾಗುವುದು ಕೆಟ್ಟುಹೋಗಿರುವ ಕೊಳವೆಬಾವಿ ಹಾಗೂ ಶುದ್ಧೀಕರಣ ಘಟಕಗಳನ್ನು ತಕ್ಷಣ ದುರಸ್ತಿಪಡಿಸಬೇಕು. ಜಾನುವಾರುಗಳಿಗೆ ನೀರಿನ ತೊಟ್ಟಿಗಳ ವ್ಯವಸ್ಥೆ ಮಾಡಬೇಕು. ಟಾಸ್ಕ್ ಫೋರ್ಸ್ನಲ್ಲಿ ಹಣದ ಕೊರತೆಯಿಲ್ಲ ಎಷ್ಟು ಬೇಕಿದ್ದರೂ ಸರ್ಕಾರ ಕೊಡಲು ಸಿದ್ದವಿದೆ ಎಂದರು.
ನಗರದ ವಾರ್ಡ್ಗಳಲ್ಲಿ ಸ್ವಚ್ಛತೆ ಕಾಪಾಡುವುದು, ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುವುದು ಹಾಗೂ ಜನರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರಿ ಆಸ್ತಿಗೆ ಯಾರಾದರೂ ಅಡ್ಡಿಪಡಿಸಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿ ಎಪಿಎಂಸಿ ಆವರಣದ ಕಸ ಹಾಗೂ ಟೊಮೆಟೊ ತ್ಯಾಜ್ಯವನ್ನು ಅಮ್ಮೇರಹಳ್ಳಿ ಕೆರೆ ಬಳಿ ಸುರಿಯದಂತೆ ಎಪಿಎಂಸಿ ಅಧಿಕಾರಿಗಳಿಗೆ ಪೋನ್ ಮೂಲಕವೇ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕೆರೆಯಿಂದ ನಗರಕ್ಕೆ ನೀರು ಹರಿಯುವುದರಿಂದ ಅದರ ಸ್ವಚ್ಛತೆ ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿ ಎಂದರು.
ಬೆಸ್ಕಾಂ ಎಂಜಿನಿಯರ್ ಬಸವರಾಜು ಅವರನ್ನು ಉದ್ದೇಶಿಸಿ, ಮೂರು ವರ್ಷಗಳಿಂದ ಇಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಹಿಂದೆ ಉತ್ತಮವಾಗಿ ಕೆಲಸ ಮಾಡುತ್ತಿದ್ದಿರಿ. ಈಗ ಏನಾಯಿತು ಎಂದು ಶಾಸಕರು ಪ್ರಶ್ನಿಸಿ, ಕಾರ್ಯವೈಖರಿ ಸುಧಾರಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ಕುಮಾರ್ ಮಾತನಾಡಿ, ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಕೋಲಾರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಪ್ರತಿ ವಾರ ಟಾಸ್ಕ್ ಫೋರ್ಸ್ ಸಭೆ ನಡೆಸಿ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಬೇಕು ಎಂದರು.
ತಹಶೀಲ್ದಾರ್ ಎಚ್. ಶ್ರೀನಿವಾಸ್ ಮಾತನಾಡಿ, ಮುಖ್ಯಮಂತ್ರಿ ಸೂಚನೆಯಂತೆ ಸ್ಮಶಾನ ಹಾಗೂ ಗುಂಡುತೋಪುಗಳ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಕಾನೂನುಬದ್ಧವಾಗಿ ಜನರಿಗೆ ಮನವರಿಕೆ ಮಾಡಬೇಕು. ಸಮಸ್ಯೆಗಳ ಪಟ್ಟಿಯನ್ನು ಸಿದ್ಧಪಡಿಸಿ ಮುಂದಿನ ಸಭೆಯಲ್ಲಿ ಸಲ್ಲಿಸಬೇಕು. ಇಲ್ಲದಿದ್ದರೆ ಪಿಡಿಒಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ನಗರಸಭೆ ಆಯುಕ್ತ ವೆಂಕಟೇಶ್ ನಾಗನೂರ, ತಾಲೂಕು ಪಂಚಾಯತಿ ಇಒ ಮಂಜುನಾಥ್, ಎಇಇ ಗೋವಿಂದಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪಿಡಿಒಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್