ಅಣ್ಣನನ್ನು ನೋಡಲು ಓಡಿ ಬಂದ 3 ವರ್ಷದ ತಂಗಿ ಶಾಲಾ ಬಸ್ ಗೆ ಸಿಲುಕಿ ಸಾವು
ವಿಜಯಪುರ, 12 ಆಗಸ್ಟ್ (ಹಿ.ಸ.) ಆ್ಯಂಕರ್ : ಶಾಲೆಯಿಂದ ಮನೆಗೆ ಮರಳಿದ ಅಣ್ಣನನ್ನು ನೋಡಲು ಕಾತರದಿಂದ ಓಡಿ ಬಂದ ಮೂರು ವರ್ಷದ ಬಾಲಕಿಯೊಬ್ಬಳು ಶಾಲಾ ಬಸ್ಗೆ ಸಿಲುಕಿ ದಾರುಣವಾಗಿ ಮೃತಪಟ್ಟಿರುವ ಘಟನೆ ವಿಜಯಪುರ ನಗರದ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ನಡೆದಿದೆ. ಘಟನೆಯಿಂದ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ
ಧಾರುಣ


ವಿಜಯಪುರ, 12 ಆಗಸ್ಟ್ (ಹಿ.ಸ.)

ಆ್ಯಂಕರ್ : ಶಾಲೆಯಿಂದ ಮನೆಗೆ ಮರಳಿದ ಅಣ್ಣನನ್ನು ನೋಡಲು ಕಾತರದಿಂದ ಓಡಿ ಬಂದ ಮೂರು ವರ್ಷದ ಬಾಲಕಿಯೊಬ್ಬಳು ಶಾಲಾ ಬಸ್ಗೆ ಸಿಲುಕಿ ದಾರುಣವಾಗಿ ಮೃತಪಟ್ಟಿರುವ ಘಟನೆ ವಿಜಯಪುರ ನಗರದ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ನಡೆದಿದೆ. ಘಟನೆಯಿಂದ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಮತ್ತು ದುಃಖದ ವಾತಾವರಣ ನಿರ್ಮಾಣವಾಗಿದೆ.

ಮೃತ ಬಾಲಕಿಯನ್ನು ಶಿರ್ಶಾ ಸುಹಾಸ ವಾಡಿ (3) ಎಂದು ಗುರುತಿಸಲಾಗಿದೆ.

ಅಣ್ಣನನ್ನು ನೋಡಲು ಓಡಿ ಬಂದಿದ್ದ ಬಾಲಕಿ

ಮೂಲಗಳ ಪ್ರಕಾರ, ನಗರದ ಸಂಗನಬಸವ ಶಿಶುನಿಕೇತನ ಶಾಲೆಯ ಬಸ್ನಲ್ಲಿ ಬಾಲಕಿಯ ಅಣ್ಣ ಶಾಲೆಯಿಂದ ಮನೆಗೆ ಬಂದಿದ್ದ. ಶಾಲಾ ವಾಹನ ಮನೆಯ ಬಳಿ ಬಂದು ನಿಲ್ಲುತ್ತಿದ್ದಂತೆ, ಅಣ್ಣ ಮನೆಗೆ ಬಂದಿರುವುದನ್ನು ಕಂಡು ಆತನನ್ನು ನೋಡಲು ಬಾಲಕಿ ಕಾತರದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ.

ಈ ವೇಳೆ ಬಾಲಕಿ ಬಸ್ನ ಮುಂಭಾಗದ ಭಾಗದಲ್ಲಿದ್ದುದನ್ನು ಚಾಲಕ ಗಮನಿಸದೇ ವಾಹನವನ್ನು ಮುಂದಕ್ಕೆ ಚಲಾಯಿಸಿದ್ದಾನೆ ಎನ್ನಲಾಗಿದೆ. ಪರಿಣಾಮ, ಬಸ್ಸಿನ ಮುಂಭಾಗದ ಚಕ್ರ ಬಾಲಕಿಯ ಮೇಲೆ ಹರಿದಿದೆ. ಅಪಘಾತದಲ್ಲಿ ಬಾಲಕಿಗೆ ತೀವ್ರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಕುಟುಂಬಸ್ಥರ ಆಕ್ರಂದನ

ಮೂರು ವರ್ಷದ ಕಂದಮ್ಮ ಕ್ಷಣಾರ್ಧದಲ್ಲಿ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಣ್ಣನನ್ನು ನೋಡಲು ಖುಷಿಯಿಂದ ಓಡಿ ಬಂದಿದ್ದ ಬಾಲಕಿ ದುರಂತಕ್ಕೀಡಾಗಿರುವುದು ಸ್ಥಳೀಯರನ್ನು ಸಹ ಕಂಬನಿ ಮಿಡಿಯುವಂತೆ ಮಾಡಿದೆ.

ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಹಾಗೂ ಸ್ಥಳೀಯರು ಜಮಾಯಿಸಿದ್ದರು.

ಚಾಲಕ ಪೊಲೀಸ್ ವಶಕ್ಕೆ

ಘಟನೆ ಸಂಬಂಧ ವಿಜಯಪುರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ಶಾಲಾ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande