



ಮುನಿರಾಬಾದ್, 11 ಆಗಸ್ಟ್ (ಹಿ.ಸ.)
ಆ್ಯಂಕರ್: ಮುನಿರಾಬಾದ್ನ ಕಾಡಾ ಟಿ.ಬಿ.ಪಿ. ಸಭಾಂಗಣದಲ್ಲಿ ಆಗಸ್ಟ್ 11ರಂದು ನಿಗದಿಯಾದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ ಸಭೆಯ ಪೂರ್ವದಲ್ಲಿ ಸಚಿವರಾದ ಶಿವರಾಜ ತಂಗಡಗಿ ಅವರು ರೈತ ಮುಖಂಡರ ಸಲಹೆ ಪಡೆದುಕೊಂಡರು.
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ರೈತ ಮುಖಂಡರಾದ ಚಾಮರಸ ಪಾಟೀಲ, ಶರಣಪ್ಪಗೌಡ್ರ, ಶಂಕರಗೌಡ್ರ
ಸೇರಿದಂತೆ ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ಅನೇಕ ರೈತ ಮುಖಂಡರು ಮಾತನಾಡಿ, ಕಾಲುವೆ ತಕ್ಷಣವೇ ನೀರು ಹರಿಸಬೇಕು ಎಂಬ ಹಕ್ಕೋತ್ತಾಯ ಮಾಡಿದರು. ಸಭೆಗೆ ಕೆಲವು ಮಹತ್ವದ ಸಲಹೆಗಳನ್ನು ನೀಡಿದರು.
ಕುಡಿವ ನೀರಿಗೆ ಬೇಕಾಗುವಷ್ಟು ನೀರು ಇಟ್ಟುಕೊಂಡೇ, ಬೆಳೆಗಳಿಗಾಗಿ ಕಾಲುವೆಗೆ ನೀರು ಹರಿಸಲು ಇಂದೇ ನಿರ್ಣಯಿಸಬೇಕು ಎಂದು ಒಕ್ಕೋರಲಿನ ಮನವಿ ಮಾಡಿದರು.
ತುಂಗಭದ್ರಾ ಜಲಾಶಯದಲ್ಲಿ ನೀರು ಲಭ್ಯತೆ ಇದೆ. ಈಗ 82 ಟಿಎಂಸಿ ಶೇಖರಣೆಯಾಗಿದ್ದು ಜಮೀನದಲ್ಲಿನ ಬೆಳೆಗಳಿಗೆ
ನೀರು ಕೇಳುತ್ತಿದ್ದೇವೆ. ಬೇಗನೆ ಕಾಲುವೆಗೆ ನೀರು ಹರಿಸಬೇಕು. ಭತ್ತ ಮೆಣಸಿನಕಾಯಿ ಸಸಿಗಳ ನರ್ಸರಿ ಹಾಳಾಗುತ್ತಿದೆ. ಗೊಬ್ಬರ ಮತ್ತು ಬೀಜ ದಾಸ್ತಾನು ಇದೆ. ನೀರು ಬಿಡದೇ ಕಂಗಾಲಾಗಿದ್ದೇವೆ. 50 ಟಿಎಂಸಿ ನೀರು ಬಂದಾಗಲೇ ನೀರ ಬಿಡಬೇಕಿತ್ತು. ನೀರು ಇಲ್ಲದೆ ತೊಗರಿ, ಹತ್ತಿ, ಮೆಣಸಿನ ಬೆಳೆಗಳು ಒಣಗಿವೆ. ಸಾವು ಮತ್ತು ಬದುಕಿನ ಮಧ್ಯೆ ರೈತರಿದ್ದಾರೆ.
ಗೇಟಗಳಿಗೆ ಹಾಕಿದ
ಅಳತೆ ಪಟ್ಟಿ ತಪ್ಪಿದೆ. ಅದನ್ನು ಸರಿಪಡಿಸಬೇಕು ಎಂದು ರೈತರು ಮನವಿ ಮಾಡಿದರು.
ಪ್ರತಿ ಕಾಲುವೆಗೆ ಅಧಿಕಾರಿಗಳನ್ನು ನಿಯೋಜಿಸಬೇಕು.
ಕ್ಯಾನಲಗಳ ದುರಸ್ತಿ ಕಾರ್ಯ ಸಮರ್ಪಕವಾಗಿ ಆಗದೇ ನೀರು ಪೋಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಆರಂಭಿಸಿದ ಆನ್ ಅಫ್ ಪದ್ಧತಿ ಕೈಬಿಟ್ಟು ಕಾಲುವೆಗೆ ನಿರಂತರ ನೀರು ಹರಿಸಿ ಎಂದು ರೈತರು ಒತ್ತಾಯಿಸಿದರು.
ಕಾಲುವೆಗಳಿಗೆ ಸಂಬಂಧಿಸಿದ
ಎಂಜಿನಿಯರ್ಸ ಕೊರತೆ ತಪ್ಪಿಸಬೇಕು. ಕಾಲುವೆಗಳಿಂದ ಅಕ್ರಮವಾಗಿ ನೀರು ತೆಗೆಯುವ ಪದ್ಧತಿಗೆ ಕಡಿವಾಣ ಹಾಕಬೇಕು. 2008ರಲ್ಲಿ ಕಾಲುವೆಗಳ ದುರಸ್ತಿ ಮಾಡಿದ್ದು ಬಿಟ್ಟರೆ ಇದುವರೆಗೆ ಮತ್ತೆ ಕಾಲುವೆಗಳ ದುರಸ್ತಿ ಕಾರ್ಯ ಮಾಡಿಲ್ಲ. ಬಲದಂಡೆ ಎಡದಂಡೆ ಸೇರಿದಂತೆ ಎಲ್ಲ ಕಾಲುವೆಗಳ ದುರಸ್ತಿ ಕಾರ್ಯ ಕೂಡ ನಡೆಯಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕುಡಿವ ನೀರಿಗಾಗಿ ಈ ಭಾಗದ ಎಲ್ಲ ಕೆರೆಗಳನ್ನು ಕೂಡಲೆ ತುಂಬಿಸಬೇಕು ಎಂದು ರೈತರು ಒತ್ತಾಯಿಸಿದರು.
ಪ್ರತ್ಯೇಕ ಸಭೆಗೆ ಏರ್ಪಾಡು ಮಾಡಿ: ಟಿಬಿ ಡ್ಯಾಮನ ಎಲ್ಲ ಕಾಲುವೆಗಳಿಗೆ ಸಕಾಲಕ್ಕೆ ನೀರು ಬಿಡುವುದು, ಕಾಲುವೆ ದುರಸ್ತಿ ಮಾಡುವುದು ಸೇರಿದಂತೆ ನಾನಾ ವಿಷಯಗಳ ಚರ್ಚೆಗೆ ಜಲ ಸಂಪನ್ಮೂಲ ಸಚಿವರು ಮತ್ತು ಈ ಭಾಗದ ಸಚಿವರು ಹಾಗೂ ಎಲ್ಲ ಶಾಸಕರು, ರೈತ ಮುಖಂಡರ ಸಮ್ಮುಖದಲ್ಲಿ ಒಂದು ಪ್ರತ್ಯೇಕ ಸಭೆಗೆ ಏರ್ಪಾಡು ಮಾಡಬೇಕು ಎಂದು ರೈತ ಮುಖಂಡರಾದ ಚಾಮರಸ ಪಾಟೀಲ ಅವರು ಸಭೆಗೆ ಒತ್ತಾಯಿಸಿದರು.
ಸಭೆಯಲ್ಲಿ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ,
ಜಿ.ಹಂಪಯ್ಯ ನಾಯಕ, ಬಸನನಗೌಡ ತುರವಿಹಾಳ, ಡಾ.ಎಸ್.ಶಿವರಾಜ ಪಾಟೀಲ, ಅನ್ನಪೂರ್ಣ ತುಕಾರಾಮ, ಜೆ ಎನ್ ಗಣೇಶ, ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ, ಕಾಡಾ ಅಧ್ಯಕ್ಷರಾದ ಹಸನಸಾಬ ನಬಿಸಾಬ ದೋಟಿಹಾಳ,
ಮುಖಂಡರಾದ
ಎನ್ ಎಸ್ ಬೋಸರಾಜು,
ಅಧಿಕಾರಿ ಸದಸ್ಯರಾದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಎಂಜಿನಿಯರ್ ಮನೋಜಕುಮಾರ ಗಡಬಳ್ಳಿ, ಮುನಿರಾಬಾದನ ತುಂಗಭದ್ರಾ ಯೋಜನೆ ವೃತ್ತ ಅಧೀಕ್ಷಕ ಅಭಿಯಂತರರಾದ ಎಸ್ ಬಿ ಮಲ್ಲಿಗವಾಡ, ಯರಮರಸನ ತುಂಗಭದ್ರಾ ಕಾಲುವೆ ನಿರ್ಮಾಣ ವೃತ್ತದ ಅಧೀಕ್ಷಕ ಅಭಿಯಂತರರಾದ
ಸತ್ಯ ನಾರಾಯಾಣ ಶೆಟ್ಟಿ ಹಾಗೂ ಇತರರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್