

ಬಳ್ಳಾರಿ, 11 ಆಗಸ್ಟ್ (ಹಿ.ಸ.)
ಆ್ಯಂಕರ್ : ಅಖಂಡ ಬಳ್ಳಾರಿ ಜಿಲ್ಲೆಯ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ರಾವ್ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಅವರ ಕೊಡುಗೆ
ಅಪಾರ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಕಾರ್ಯದರ್ಶಿಗಳಾದ ಹಾವಿನಾಳು ಶರಣಬಸಪ್ಪ ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾವ್ ಬಹದ್ದೂರ್ ಮಹಾಬಲೇಶ್ವರಪ್ಪ ಇಂಜಿನೀಯರಿಂಗ್ ಕಾಲೇಜಿನಲ್ಲಿ ಮಂಗಳವಾರ `ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಸ್ಮಾರಕ ದತ್ತಿ'ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈ. ಮಹಾಬಲೇಶ್ವರಪ್ಪ ಅವರು ಬಳ್ಳಾರಿ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಶೈಕ್ಷಣಿಕ ಮತ್ತು ಔದ್ಯೋಗಿಕ ಪ್ರಗತಿಗೆ ಕಾರಣವಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಇತಿಹಾಸದಲ್ಲಿ ವೈ. ಮಹಾಬಲೇಶ್ವರಪ್ಪ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ - ಬೆಳೆದಿದೆ ಎಂದರು.
ಆರ್.ವೈ.ಎಂ. ಇಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಎ. ತಿಮ್ಮನಗೌಡ ಅವರು, ವೈ. ಮಹಾಬಲೇಶ್ವರಪ್ಪ ಅವರ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿ, ಭಾಷೆ, ಕಲೆ, ಸಾಹಿತ್ಯ, ವಾಣಿಜ್ಯ, ಶಿಕ್ಷಣ, ಉದ್ಯೋಗ, ಕ್ರೀಡೆಗಳ ಅಭಿವೃದ್ಧಿಗೆ, ಕರ್ನಾಟಕದ ಏಕೀಕರಣಕ್ಕೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ವೈ. ಮಹಾಬಲೇಶ್ವರಪ್ಪ ಅವರ ಕೊಡುಗೆ ಅಪಾರ - ಅವಿಸ್ಮರಣೀಯ ಎಂದರು.
ಆರ್.ವೈ.ಎಂ. ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್. ಮಹಾಬಲೇಶ್ವರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕನ್ನಡ ಸಾಹಿತ್ಯ, ಸಂಸ್ಕøತಿ ಮತ್ತು ಇತಿಹಾಸದ ಕುರಿತು ಕಸಾಪದ ದತ್ತಿ ಉಪನ್ಯಾಸಗಳು ಸಮರ್ಥವಾಗಿ ನಿರ್ವಹಿಸಲ್ಪಡುತ್ತಿವೆ ಎಂದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಗೋನಾಳು ಮುರಹರಿಗೌಡ, ಆರ್.ವೈ.ಎಂ. ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಬಾಡದ ಪ್ರಕಾಶ್, ಪ್ರಾಧ್ಯಾಪಕರಾದ ಕೋರಿ ನಾಗರಾಜ್, ಹೆಚ್. ಕಾಶೀನಾಥ್ ವೇದಿಕೆಯಲ್ಲಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್