ಕುಡಿಯುವ ನೀರಿನ ಸಮಸ್ಯೆಗೆ ಸರ್ಕಾರದ ಮೊದಲ ಆಧ್ಯತೆ ; ಸಚಿವ ರಾಮಲಿಂಗಾರೆಡ್ಡಿ
ಕುಡಿಯುವ ನೀರಿನ ಸಮಸ್ಯೆಗೆ ಸರ್ಕಾರದ ಮೊದಲ ಆಧ್ಯತೆ ; ಸಚಿವ ರಾಮಲಿಂಗಾರೆಡ್ಡಿ
ಕೋಲಾರಕ್ಕೆ ಆಗಮಿಸಿದ್ದ ಜಲ ಸಂಪನ್ಮೂಲ ಸಚಿವರ ರಾಮಲಿಂಗಾರೆಡ್ಡಿಯವರನ್ನು ಕೋಲಾರ ಕಾಂಗ್ರೆಸ್ ಕಛೇರಿಯಲ್ಲಿ ಹಾರ್ಧಿಕವಾಗಿ ಪಕ್ಷದ ಮುಖಂಡರಿ0ದ ಸ್ವಾಗತಿಸಲಾಯಿತು.


ಕೋಲಾರ, 11 ಆಗಷ್ಟ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯಲ್ಲಿ ಉಂಟಾಗಿರುವ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯನ್ನು ಎದುರಿಸಲು ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಪೂರೈಕೆಗೆ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಗೆ ಮಂಗಳವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಜಿಲ್ಲೆಯ ಬರ ಪರಿಸ್ಥಿತಿ, ಸಮಗ್ರ ಅಭಿವೃದ್ಧಿ ಹಾಗೂ ಎತ್ತಿನಹೊಳೆ ಯೋಜನೆಯ ಪ್ರಗತಿಗೆ ವೇಗ ನೀಡಲಾಗಿದೆ. ಬೇಲೂರು ತಾಲೂಕಿನಲ್ಲಿ ಸುಮಾರು ೮೦೦ ಮೀಟರ್ ವ್ಯಾಪ್ತಿಯ ಭೂಸ್ವಾಧೀನ ಸಮಸ್ಯೆಯನ್ನು ಸಚಿವ ಸಂಪುಟದ ಮೂಲಕ ವಿಶೇಷ ಪರಿಹಾರ ಮಂಜೂರು ಮಾಡಿ ಇತ್ಯರ್ಥ ಪಡಿಸಲಾಗಿದೆ. ಈ ಭಾಗದ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದರು.

ಗುಬ್ಬಿ ತಾಲೂಕಿನಲ್ಲಿ ೧.೮ ಕಿ.ಮೀ ಅರಣ್ಯ ಭೂಮಿ ಹಸ್ತಾಂತರ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಮುಂದಿನ ಎರಡು–ಮೂರು ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಕಾಮಗಾರಿಗಳು ಪೂರ್ಣಗೊಂಡರೆ ಈ ವರ್ಷದ ಅಂತ್ಯದ ವೇಳೆಗೆ ದೊಡ್ಡಬಳ್ಳಾಪುರದವರೆಗೆ ಎತ್ತಿನಹೊಳೆ ನೀರು ತಲುಪಲಿದೆ. ಮುಂದಿನ ವರ್ಷ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಸುಮಾರು ೩೦೦ ಕೆರೆಗಳಿಗೆ ನೀರು ತುಂಬಿಸುವ ಗುರಿ ಹೊಂದಲಾಗಿದೆ ಎಂದರು.

ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗುತ್ತಿದ್ದು, ಕೇಂದ್ರ ಸರ್ಕಾರದ ಮಾನದಂಡಗಳ ಅನ್ವಯ ಬರಪೀಡಿತ ತಾಲೂಕುಗಳನ್ನು ಗುರುತಿಸಲಾಗುತ್ತಿದೆ. ಸದ್ಯ ೭೫ ರಿಂದ ೮೦ ತಾಲೂಕುಗಳನ್ನು ಬರಪೀಡಿತವೆಂದು ಗುರುತಿಸಲಾಗಿದ್ದು, ಆಗಸ್ಟ್ ಅಂತ್ಯದ ವೇಳೆಗೆ ಈ ಸಂಖ್ಯೆ ೧೦೦ಕ್ಕೂ ಅಧಿಕವಾಗುವ ಸಾಧ್ಯತೆಯಿದೆ. ಬಳಿಕ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಹೇಳಿದರು.

ಕಾವೇರಿ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ನಿಯಂತ್ರಣ ಸಮಿತಿ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ರಾಜ್ಯದ ಹಿರಿಯ ಅಧಿಕಾರಿಗಳು, ಕಾನೂನು ತಜ್ಞರು ಹಾಗೂ ವಕೀಲರು ದೆಹಲಿಯಲ್ಲಿ ಮೊಕ್ಕಾಂ ಹೂಡಿ ರಾಜ್ಯದ ಹಿತಾಸಕ್ತಿ ಕಾಪಾಡಲು ಸಮರ್ಥವಾಗಿ ವಾದ ಮಂಡಿಸುತ್ತಿದ್ದಾರೆ ಎಂದು ತಿಳಿಸಿದರು.

ಸರ್ಕಾರ ಯಾವುದೇ ಖಾತೆಯ ಜವಾಬ್ದಾರಿ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಆತ್ಮವಿಶ್ವಾಸವಿದೆ. ಕಾವೇರಿ, ಕೃಷ್ಣಾ, ಮಹಾದಾಯಿ ಸೇರಿದಂತೆ ಅಂತರರಾಜ್ಯ ಜಲವಿವಾದಗಳನ್ನು ಸಂಯಮ ಹಾಗೂ ಒಮ್ಮತದ ಮೂಲಕ ಬಗೆಹರಿಸಿಕೊಳ್ಳುವುದು ಸರ್ಕಾರದ ನಿಲುವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್, ವೇಮಗಲ್ ನರಸಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಚಿಂತಾಮಣಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಶೋಕ್ ರೆಡ್ಡಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಆಫ್ಸರ್, ಗ್ರಾಮಾಂತರ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಮುಳಬಾಗಿಲು ರಾಮಲಿಂಗರೆಡ್ಡಿ, ವೆಂಕಟಪತಿಯಪ್ಪ, ಶ್ರೀಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande