
ಬೆಂಗಳೂರು, 11 ಆಗಸ್ಟ್ (ಹಿ.ಸ.):
ಆ್ಯಂಕರ್:ರಾಜ್ಯದ ಜನರ ಸಮಸ್ಯೆಗಳಿಗೆ ಕಾನೂನು ಚೌಕಟ್ಟಿನಲ್ಲಿ ಸ್ಪಂದಿಸಿ, ಆತ್ಮಸಾಕ್ಷಿಗೆ ಒಪ್ಪುವ ರೀತಿಯಲ್ಲಿ ಕೆಲಸ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರಿ ನೌಕರರಿಗೆ ಕರೆ ನೀಡಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಸರ್ಕಾರಿ ನೌಕರರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾನು ಸೇರಿದಂತೆ ಸಚಿವರು, ಅಧಿಕಾರಿಗಳು ಎಲ್ಲರೂ ಸರ್ಕಾರಿ ನೌಕರರು. ನಾವೆಲ್ಲರೂ ‘ಟೀಮ್ ಕರ್ನಾಟಕ’ವಾಗಿ ಕೆಲಸ ಮಾಡಬೇಕು. ಜನರ ಸೇವೆ ಹಾಗೂ ಅವರ ಕಲ್ಯಾಣವೇ ನಮ್ಮ ಗುರಿ” ಎಂದರು.
ರಾಜ್ಯದಲ್ಲಿ ಸುಮಾರು 5.50 ಲಕ್ಷ ಸರ್ಕಾರಿ ನೌಕರರಿಗೆ ಜನಸೇವೆ ಮಾಡುವ ಅವಕಾಶವಿದೆ. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಅಧಿಕಾರವೆಂದರೆ ಸಿಂಹಾಸನವಲ್ಲ, ಜವಾಬ್ದಾರಿ ಹಾಗೂ ಜನಸೇವೆಗೆ ದೊರೆತ ಅವಕಾಶ ಎಂದು ಹೇಳಿದರು.
ಜನರ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಬೇಕು. ಪ್ರತಿ ತಾಲ್ಲೂಕಿನ ಅಧಿಕಾರಿಗಳು ಅಲ್ಲಿಯೇ ವಾಸವಿದ್ದು, ಕ್ಷೇತ್ರಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಅರಿಯಬೇಕು. ಕಾನೂನು ಚೌಕಟ್ಟಿನೊಳಗೆ ಜನರಿಗೆ ನೆರವು ನೀಡುವಂತೆ ಸೂಚಿಸಿದರು.
‘ಹಂಚಿಕೊಳ್ಳುವಿಕೆ ಮತ್ತು ಕಾಳಜಿ’ ಎಂಬ ಮಂತ್ರವನ್ನು ಅನುಸರಿಸಿ ಜನರ ಸೇವೆ ಮಾಡಬೇಕು. ಪ್ರಜಾಸೇವೆ ಕಾರ್ಯಕ್ರಮದ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಪರಿಹರಿಸಬೇಕು. ಸಮಸ್ಯೆಯನ್ನು ಮತ್ತೊಂದು ಕಚೇರಿಗೆ ವರ್ಗಾಯಿಸುವ ಪ್ರವೃತ್ತಿ ಇರಬಾರದು ಎಂದರು.
ಭ್ರಷ್ಟಾಚಾರಕ್ಕೆ ರಾಜಿ ಇಲ್ಲ
ಭ್ರಷ್ಟಾಚಾರದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಎಚ್ಚರಿಸಿದ ಶಿವಕುಮಾರ್, ಅಧಿಕಾರಿಗಳ ಕಾರ್ಯವೈಖರಿಯನ್ನು ಪರಿಶೀಲಿಸಲಾಗುವುದು. ಡಬಲ್ ಬಿಲ್, ನಕಲಿ ಬಿಲ್‌ಗಳಿಗೆ ಅವಕಾಶ ನೀಡುವುದಿಲ್ಲ. ಇಂತಹ ಅಕ್ರಮಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಸ್ತಿ ದಾಖಲೆಗಳಲ್ಲಿ ಅಕ್ರಮ ತಿದ್ದುಪಡಿ ತಡೆಯಲು ಡಿಜಿಟಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಪ್ರತಿ ಫಲಾನುಭವಿಯ ಮಾಹಿತಿ ಅಧಿಕಾರಿಗಳ ಬಳಿ ಇರಬೇಕು ಮತ್ತು ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಅವರು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನೂ ಪರಿಶೀಲಿಸಬೇಕು ಎಂದು ಹೇಳಿದರು.
ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ದಿನದ ಕಾರ್ಯಕ್ರಮಗಳ ವಿವರಗಳನ್ನು ಹಿರಿಯ ಅಧಿಕಾರಿಗಳಿಗೆ ನೀಡಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ನ್ಯಾಯಯುತವಾಗಿ ಕೆಲಸ ಮಾಡುವಂತೆ ಸೂಚಿಸಿದರು.
ಸರ್ಕಾರಿ ನೌಕರರ ಸೇವೆಯಿಂದಲೇ ಕರ್ನಾಟಕ ಇಂದು ಅಭಿವೃದ್ಧಿಯ ಹಂತ ತಲುಪಿದೆ. ಹಿಂದಿನ ಆಡಳಿತಗಾರರ ಸಾಧನೆಗಳನ್ನು ಟೀಕಿಸುವುದಕ್ಕಿಂತ ನಮ್ಮ ಕೆಲಸಗಳ ಮೂಲಕ ಇತಿಹಾಸ ನಿರ್ಮಿಸುವುದು ಮುಖ್ಯ ಎಂದು ಶಿವಕುಮಾರ್ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.