
ಬಳ್ಳಾರಿ, 11 ಆಗಸ್ಟ್ (ಹಿ.ಸ.)
ಆ್ಯಂಕರ್: ರೈತರು ಹಾಗೂ ಕೂಲಿಕಾರರ ಆರ್ಥಿಕ ಸಬಲೀಕರಣದ ಜೊತೆಗೆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ವಿಕಸಿತ ಭಾರತ ಜೀರಾಮ್ಜೀ ಯೋಜನೆ ಪೂರಕವಾಗಲಿದೆ ಎಂದು ಕುಣಿಕೇರಿ ಗ್ರಾಮ ಪಂಚಾಯತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂದಪ್ಪ ಅಂಗಡಿ ಹೇಳಿದರು.
ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮ ಪಂಚಾಯತಿ ಆವರಣದಲ್ಲಿ 2026-27ನೇ ಸಾಲಿನ ವಿಕಸಿತ ಭಾರತ ಜೀರಾಮ್ಜೀ ಯೋಜನೆಯ ಕ್ರಿಯಾ ಯೋಜನೆ ಸಿದ್ಧಪಡಿಸುವ ಕುರಿತು ಆಯೋಜಿಸಿದ್ದ ವಿಶೇಷ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿ ಹಾಗೂ ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ಕೃಷಿ, ಅರಣ್ಯ ಮತ್ತು ರೇಷ್ಮೆ ಇಲಾಖೆಗಳ ಮೂಲಕ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅವಕಾಶವಿದೆ. ರೈತರು ವೈಯಕ್ತಿಕ ಕಾಮಗಾರಿಗಳ ಸೌಲಭ್ಯವನ್ನು ಪಡೆದುಕೊಳ್ಳಬೇಕು. ರಾಷ್ಟ್ರೀಯ ತೋಟಗಾರಿಕೆ ಇಲಾಖೆಯಡಿ ದೊರೆಯುವ ವಿವಿಧ ಸೌಲಭ್ಯಗಳನ್ನು ಸಹ ಸದುಪಯೋಗಪಡಿಸಿಕೊಳ್ಳಬೇಕು. ಈಗಾಗಲೇ ಗ್ರಾಮಸ್ಥರಿಂದ ಸಲ್ಲಿಕೆಯಾಗಿರುವ ವಿವಿಧ ಕಾಮಗಾರಿಗಳ ಬೇಡಿಕೆಗಳನ್ನು ಗ್ರಾಮಸಭೆಯಲ್ಲಿ ವಿವರಿಸಿದರು.
ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ವಿಕಸಿತ ಭಾರತ ಜೀರಾಮ್ಜೀ ಯೋಜನೆಯು ಗ್ರಾಮೀಣ ಭಾಗದ ಕೂಲಿಕಾರರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಡೆದು, ಪ್ರತಿ ಕುಟುಂಬಕ್ಕೆ ಸ್ಥಳೀಯವಾಗಿ 125 ದಿನಗಳ ಕೂಲಿ ಕೆಲಸ ಒದಗಿಸುವ ಉದ್ದೇಶ ಹೊಂದಿದೆ. ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೂಲಿ ನಿಗದಿಪಡಿಸಲಾಗಿದೆ. ಯೋಜನೆಯಡಿ ಜಲ ಸಂರಕ್ಷಣೆ, ನೀರಾವರಿ, ಅಂತರ್ಜಲ ಮರುಪೂರಣ, ಜಲಾನಯನ ಪ್ರದೇಶಗಳ ಅಭಿವೃದ್ಧಿ ಹಾಗೂ ಜಲಮೂಲಗಳ ಪುನಶ್ಚೇತನದಂತಹ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತದೆ. ವಿಕಸಿತ ಗ್ರಾಮ ಪಂಚಾಯತಿಯಿಂದ ವಿಕಸಿತ ಭಾರತದತ್ತ ಸಾಗುವ ಯೋಜನೆಯ ಉದ್ದೇಶವನ್ನು ಸಾಕಾರಗೊಳಿಸಬೇಕು ಎಂದರು.
ಪ್ರಸ್ತುತ ಪ್ರತಿ ಮಾನವ ದಿನಕ್ಕೆ ರೂ.382 ಕೂಲಿ ನಿಗದಿಪಡಿಸಲಾಗಿದ್ದು, ಕಾರ್ಮಿಕರು ಅಳತೆಗೆ ಅನುಗುಣವಾಗಿ ಕೆಲಸ ನಿರ್ವಹಿಸಬೇಕು. ಕೂಲಿ ಮೊತ್ತವನ್ನು ಕಾಮಗಾರಿಯ ಅಳತೆಗೆ ಅನುಗುಣವಾಗಿ ಪಾವತಿಸಲಾಗುವುದು. ಒಟ್ಟು 318 ಕಾಮಗಾರಿಗಳ ಪೈಕಿ ಜಾನುವಾರು ಶೆಡ್, ಮೇಕೆ ಶೆಡ್, ಕೃಷಿಹೊಂಡ, ಬದು ನಿರ್ಮಾಣ, ಕೋಳಿ ಶೆಡ್ ಸೇರಿದಂತೆ ವಿವಿಧ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ಅರ್ಹರು ಇದರ ಸದುಪಯೋಗ ಪಡೆದು 125 ದಿನಗಳ ಉದ್ಯೋಗ ಪಡೆಯಬೇಕು ಎಂದು ಕರೆ ನೀಡಿದರು. ಜಮೀನು ಹೊಂದಿರದ ಕುಟುಂಬಗಳು ಗ್ರಾಮ ಪಂಚಾಯತಿಯಿಂದ ಕೈಗೊಳ್ಳುವ ಸಾಮೂಹಿಕ ಕಾಮಗಾರಿಗಳಲ್ಲಿ ಕೂಲಿ ಕೆಲಸ ನಿರ್ವಹಿಸಿ ಆರ್ಥಿಕವಾಗಿ ಸಬಲರಾಗಬೇಕು. ಹೊಸದಾಗಿ ನೋಂದಣಿಯಾದ ಕುಟುಂಬಗಳಿಗೆ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸಲಾಗುವುದು ಎಂದರು.
ಸಂಜೀವಿನಿ ಯೋಜನೆಯ ಸಿಬ್ಬಂದಿ ವೀರೇಶ ಮಾತನಾಡಿ, ಸಂಜೀವಿನಿ ಸಂಘಗಳ ಮಹಿಳೆಯರು ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡಿ ಕಾಮಗಾರಿ ಬೇಡಿಕೆ ಸಲ್ಲಿಸಬೇಕು. ವೈಯಕ್ತಿಕ ಕಾಮಗಾರಿಗಳ ಮೂಲಕ ದಿನನಿತ್ಯ ಹಾಗೂ ಮಾಸಿಕ ಆದಾಯ ಗಳಿಸಿ ಆರ್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪಶು ವೈದ್ಯಾಧಿಕಾರಿ ವಿನಯ ಅಂಗಡಿ, ತಾಂತ್ರಿಕ ಸಹಾಯಕಿ ವೀಣಾ ಅಂಗಡಿ, ಸರಸ್ವತಿ, ರಮೇಶ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಚಂದ್ರಪ್ಪ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಹನಮೇಶ ಸೇರಿದಂತೆ ರೈತರು, ಸಂಜೀವಿನಿ ಯೋಜನೆಯ ಒಕ್ಕೂಟದ ಮಹಿಳೆಯರು, ಗ್ರಾಮಸ್ಥರು ಹಾಗೂ ಕಾಯಕ ಬಂಧುಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್