
ಕೋಲಾರ, 11 ಆಗಷ್ಟ್ (ಹಿ.ಸ.):
ಆ್ಯಂಕರ್ : ಕೋಲಾರ,ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ಪತ್ರಕರ್ತರ ಹಿತಾಸಕ್ತಿ ಕಾಪಾಡಲು ಶಕ್ತಿ ಮೀರಿ ಶ್ರಮಿಸುತ್ತಿದೆ. ಇಂತಹ ಸಂಘದ ಧ್ಯೇಯೋದ್ಧೇಶಕ್ಕೆ ಧಕ್ಕೆ ತರಲು ಕುಚೇಷ್ಟೇ, ಕುಚೋದ್ಯ ನಡೆಸುವುದು ತರವಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಯೋಗಿನಾರೇಯಣ ಮಠದ ಸಭಾಂಗಣದಲ್ಲಿ ಮಂಗಳವಾರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ೨೦೨೫-೨೬ ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಗೆ ಹೆಚ್ಚಿನ ಸದಸ್ಯತ್ವ ನೀಡಲು ಮನವಿ ಮಾಡಿದ ಅವರು,ಸಹಕಾರ ತತ್ವಗಳಡಿ ಸದಸ್ಯರ ಹಿತಾಸಕ್ತಿ ಕಾಪಾಡುವ ಕೆಲಸ ನಡೆಯುತ್ತಿರುವಾಗ ಅಪಪ್ರಚಾರ ಮಾಡುವುದು ತಿಳುವಳಿಕೆಯಿಲ್ಲದವರ ಕೆಲಸವಾಗಿದೆ, ಇದನ್ನು ಮೆಟ್ಟಿ ನಿಂತು ಸಂಘವನ್ನು ಮತ್ತಷ್ಟು ಬಲಿಷ್ಟಗೊಳಿಸೋಣ. ಸಹಕಾರ ತತ್ವಗಳ ಬಗ್ಗೆ ಕೆಲವರಿಗೆ ಅರಿವೇ ಇಲ್ಲ, ಅಂತಹವರು ಸಂಘವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಾರೆ, ಅಂತಹ ವ್ಯಕ್ತಿಗಳಿಗೆ ಸಂಘಟಿತವಾಗಿ ಸಂಘವನ್ನು ಮುನ್ನಡೆಸುವ ಮೂಲಕ ತಿರುಗೇಟು ನೀಡಬೇಕು ಎಂದು ಅಭಿಪ್ರಾಯಪಟ್ಟು, ನಮ್ಮ ಜಿಲ್ಲಾಧ್ಯಕ್ಷ ರವಿಕುಮಾರ್ ಅವರು ತುರ್ತು ಕಾರ್ಯದ ನಿಮಿತ್ತ ಗೈರಾಗಿದ್ದು, ಸಂದೇಶ ನೀಡಿದ್ದಾರೆ, ಸಂಘದಲ್ಲಿ ಹೆಚ್ಚಿನ ಅವಕಾಶಗಳು ಚಿಕ್ಕಬಳ್ಳಾಪುರ ಜಿಲ್ಲೆಗೆ ನೀಡಲು ಕೋರಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ೧೯ನೇ ವರ್ಷದ ಮಹಾಸಭೆ ಇದಾಗಿದ್ದು, ಇಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿರುವ ಕುರಿತು ಹರ್ಷವ್ಯಕ್ತಪಡಿಸಿದ ಅವರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿದ್ದೋದ್ಧೇಶ ಸಹಕಾರ ಸಂಘವು ೨೦೨೫-೨೬ ಸಾಲಿನಲ್ಲಿ ೮೯೨೬೯ ರೂ ನಿವ್ವಳ ಲಾಭದೊಂದಿಗೆ ಆಡಿಟ್ ವರದಿಯಲ್ಲಿ ಬಿ ಶ್ರೇಣಿ ನೀಡಲಾಗಿದೆ. ಸದಸ್ಯತ್ವ ಅಭಿಯಾನಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದ್ದು, ಕೋಲಾರ ಜಿಲ್ಲೆಯಿಂದ ೨೦೦ಕ್ಕೂ ಹೆಚ್ಚು ಅರ್ಜಿಗಳು, ಚಿಕ್ಕಬಳ್ಳಾಪುರ ಜಿಲ್ಲೆಯಿಂದ ೬೦ಕ್ಕೂ ಹೆಚ್ಚು ಅರ್ಜಿಗಳು ಸದಸ್ಯತ್ವ ನೋಂದಣಿಗೆ ಬಂದಿವೆ ಆದರೆ ಈ ಬಾರಿ ಆದ್ಯತೆಯ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಪತ್ರಕರ್ತರ ಷೇರು ನೋಂದಣಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿ ಸಭೆಯ ಅನುಮೋದನೆ ಪಡೆದರು.
ಕಳೆದೊಂದು ವರ್ಷದಲ್ಲಿ ಸಹಕಾರ ಸಂಘ ಹಲವಾರು ಕಾರ್ಯಕ್ರಮಗಳ ಮೂಲಕ ಪತ್ರಕರ್ತರ ಹಿತಾಸಕ್ತಿ ಕಾಪಾಡುವ ಕೆಲಸ ಮಾಡಿದೆ, ೪ ತಿಂಗಳಲ್ಲಿ ವೈವಿಧ್ಯಮಯವಾದ ೭ ಕಾರ್ಯಕ್ರಮ ನಡೆಸಲಾಗಿದೆ, ಆರೋಗ್ಯ ಶಿಬಿರ, ದಂತ ಚಿಕಿತ್ಸಾ ಶಿಬಿರ, ಕೃತಕ ಬುದ್ದಿಮತ್ತೆ ಕಾರ್ಯಾಗಾರ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಅಂಬೇಡ್ಕರ್ ಜಯಂತಿ ನಡೆಸಿದ್ದು, ಪ್ರತಿವರ್ಷ ರಾಜ್ಯಮಟ್ಟದ ಅಂಬೇಡ್ಕರ್ ಪ್ರಶಸ್ತಿ ಮತ್ತು ೧೦ ಸಾವಿರ ರೂ ನಗದು ಪುರಸ್ಕಾರ ನೀಡುವ ಉದ್ದೇಶ ಹೊಂದಲಾಗಿದ್ದು, ಅದಕ್ಕೂ ಇಂದಿನ ಸಭೆ ಅನುಮೋದನೆ ನೀಡಿದೆ. ಸ್ವಂತ ಕಟ್ಟಡ ಹೊಂದಲು ಶಾಸಕ ಕೊತ್ತೂರು ಮಂಜುನಾಥ್ ಸಹಕಾರ ನೀಡಿದ್ದಾರೆ, ಸದಸ್ಯರಿಗೆ ನಿವೇಶನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ, ಯಶಸ್ವಿನಿಯ ವರ್ಷದ ವಿಮಾ ಮೊತ್ತವನ್ನು ಪೂರ್ತಿ ಶಾಸಕರೇ ಭರಿಸಲು ಮುಂದೆ ಬಂದಿದ್ದು, ಸದಸ್ಯರು ಈ ಆರೋಗ್ಯ ವಿಮೆಯ ಪ್ರಯೋಜನ ಪಡೆಯಲು ಸಲಹೆ ನೀಡಿದರು.
ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್ ಮಾತನಾಡಿ, ಈ ಸಂಘ ನಿಸ್ವಾರ್ಥವಾಗಿ ರಚನೆಯಾಗಿದೆ. ಕೆಲವು ಮಹಾನುಭಾವರು ಅವರ ಸ್ವಾರ್ಥಕ್ಕಾಗಿ ಮತ್ತೊಂದು ಸಂಘ ಹುಟ್ಟುಹಾಕಿದ್ದಾರೆ. ಇದರಲ್ಲಿ ಭಾಗಿಯಾಗಿರುವವರು ನಮ್ಮ ಸಂಘಕ್ಕೆ ರಾಜೀನಾಮೆ ನೀಡಿ ತೊಲಗಲಿ ಎಂದು ತಾಕೀತು ಮಾಡಿ ಸಂಘ ಗಟ್ಟಿಯಾಗಿದೆ ಯಾರಿಗೂ ಹೆದರಲ್ಲ ಎಂದು ಕಟು ಶಬ್ದಗಳಲ್ಲಿ ಎಚ್ಚರಿಕೆ ನೀಡಿದರು.ವೈಯಕ್ತಿಕ ದ್ವೇಷಕ್ಕೆ ಸಂಘ ಬಲಿಕೊಡದಿರಿ, ನಿರಂತರ ಗೈರಾದವರನ್ನು ತೆಗೆದು ಹಾಕಲು ಸಹಕಾರಿ ಕಾಯಿದೆಯಲ್ಲಿ ಅವಕಾಶವಿದೆ, ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಹೆಸರಲ್ಲಿ ಕಾರ್ಯನಿರತ ತೆಗೆಸಲು ಕೆಲವರು ಹಿಂದೆ ನಡೆಸಿದ ಷಡ್ಯಂತ್ರ ಫಲಿಸಲಿಲ್ಲ, ಗಣೇಶ್ ಸಂಘ ಕಟ್ಟಿ ಉಳಿಸಿದ್ದಾರೆ ಎಂದರು.
ಈಗ ಹೊಸ ಸಂಘ ರಚಿಸಿ ನಮ್ಮೀ ಸಂಘದ ವಿರುದ್ದ ಕುಚೋದ್ಯ ನಡೆಸುವ ವ್ಯಕ್ತಿಗಳು ಗೌರವಯುತವಾಗಿ ರಾಜೀನಾಮೆ ನೀಡಿ ಹೊರಹೋಗಿ. ಸಭೆಯಲ್ಲಿ ಸಹಕಾರ ಕಾಯಿದೆ ಪ್ರಕಾರ ಸದಸ್ಯತ್ವ ನೀಡಿಕೆ, ಗುರುತಿನ ಚೀಟಿ ನೀಡಲು ಕ್ರಮ, ಸಂಘ ವಿರೋಧಿಗಳ ವಿರುದ್ದ ಕ್ರಮ, ಶಾಸನ ಬದ್ದ ಲೆಕ್ಕಪರಿಶೋಧಕರ ನೇಮಕಕ್ಕೆ ಅನುಮತಿ ಹೀಗೆ ಹಲವಾರು ವಿಷಯಗಳಿಗೆ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ವಾರ್ಷಿಕ ಅಂದಾಜು ಆಯವ್ಯಯಕ್ಕೆ ಸರ್ವಾನುಮತದ ಒಪ್ಪಿಗೆ ಸಿಕ್ಕಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ ಕುಮಾರ್ ಮಾತನಾಡಿ, ಸಂಘ ಕ್ರಿಯಾಶೀಲವಾಗಿರಲು ಶ್ರಮಿಸುತ್ತಿದ್ದೇವೆ, ಸದಸ್ಯತ್ವ ಅಭಿಯಾನದ ಜತೆಗೆ ಅನೇಕ ಪತ್ರಕರ್ತರ ಹಿತ ಕಾಯುವ ಕಾರ್ಯಕ್ರಮಗಳು, ಆರೋಗ್ಯ ಶಿಬಿರಗಳನ್ನು ಮಾಡಿದ್ದೇವೆ, ಎಲ್ಲರ ಸಹಕಾರದಿಂದ ಮುನ್ನಡೆಯುತ್ತೇವೆ, ಪತ್ರಕರ್ತರಿಗೆ ಸೂರು ಒದಗಿಸಲು ಬದ್ದರಾಗಿದ್ದೇವೆ ಎಂದರು.
ಅತ್ಯುತ್ತಮ ಸಾಲ ಮರುಪಾವತಿದಾರರಾದ ಸಂಘದ ನಿರ್ದೇಶಕ, ಸಣ್ಣ ಹಾಗೂ ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಹೆಚ್.ಎನ್.ಮುರಳೀಧರ್ ಅವರನ್ನು ಸನ್ಮಾನಿಸಲಾಯಿತು. ಸಣ್ಣ,ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದಿಂದ ಪತ್ರಿಕಾ ವಿತರಕ,ಮುದ್ರಕ ವಾಸುರವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ರಾಜೇಂದ್ರ ಸಿಂಹ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ರವಿಕುಮಾರ್ ಹಿಂದಿನ ವರ್ಷದ ನಡವಳಿಕೆ ಓದಿ ದಾಖಲಿಸಿದರು. ಸಭೆಯಲ್ಲಿ ಸಂಘದ ನಿರ್ದೇಶಕರಾದ ಹೆಚ್.ಎನ್.ಮುರಳೀಧರ್,ಎಂ.ನಾಗರಾಜಯ್ಯ, ಪಿ.ನಾರಾಯಣದಾಸ್, ಸಿ.ವಿ.ನಾಗರಾಜ್, ಹೆಚ್.ಎಲ್.ಸುರೇಶ್, ಎಂ.ಸೋಮಶೇಖರ್,ಕೆ.ಗೋಪಿಕಾ ಮಲ್ಲೇಶ್, ಶಬ್ಬೀರ್ ಅಹಮದ್ ಸಭೆಯಲ್ಲಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್