
ತುಮಕೂರು, 11 ಆಗಸ್ಟ್ (ಹಿ.ಸ.):
ಆ್ಯಂಕರ್:
ಜಿಲ್ಲೆಯ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಯಡುವನಹಳ್ಳಿಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಮಂಗಳವಾರ ಭೇಟಿ ನೀಡಿ, ತುರ್ತು ಕ್ರಿಯಾ ಯೋಜನೆ ಅನುದಾನದಡಿ ಕೊರೆಸಲಾದ ಕುಡಿಯುವ ನೀರಿನ ಕೊಳವೆಬಾವಿಯನ್ನು ಪರಿಶೀಲಿಸಿದರು.
ಬೋರ್‌ವೆಲ್‌ನ ಸ್ಥಿತಿಗತಿ, ನೀರಿನ ಲಭ್ಯತೆ ಹಾಗೂ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಲು ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು.
ಜನರಿಗೆ ಅಗತ್ಯ ಪ್ರಮಾಣದಲ್ಲಿ ಕುಡಿಯುವ ನೀರು ಲಭ್ಯವಾಗುವಂತೆ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.
ಈ ವೇಳೆ ಗ್ರಾಮಸ್ಥರು ಕಸ ವಿಲೇವಾರಿ, ಆಸ್ಪತ್ರೆ ಸಮಸ್ಯೆ ಹಾಗೂ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು. ಮನವಿಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಿ ಶೀಘ್ರ ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಪರಮೇಶ್ವರ ನಿರ್ದೇಶನ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.