

ಕೊಪ್ಪಳ, 11 ಆಗಸ್ಟ್ (ಹಿ.ಸ.)
ಆ್ಯಂಕರ್: ಜಂತು ರಹಿತ ಮಕ್ಕಳು ದೇಶದ ಸಂಪತ್ತು ಆಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಎಸ್. ಸವಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕೊಪ್ಪಳ ಸರ್ಕಾರಿ ಆದರ್ಶ ವಿದ್ಯಾಲಯ ಟಣಕನಕಲ್ ಇವರ ಸಂಯುಕ್ತಾಶ್ರಯದಲ್ಲಿ ಟಣಕನಕಲ್ ಸರ್ಕಾರಿ ಆದರ್ಶ ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ”ದ ಜಿಲ್ಲಾಮಟ್ಟದ ಉದ್ಘಾಟನಾ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಹಾಗೂ ಮಕ್ಕಳಿಗೆ ಜಂತುನಿವಾರಕ ಮಾತ್ರೆ ವಿತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆಯನ್ನು ಉಚಿತವಾಗಿ ನೀಡಲಾಗುತ್ತದೆ. ಜಂತುನಿವಾರಕ ಮಾತ್ರೆ ಸೇವಿಸುವುದರಿಂದ ರಕ್ತಹೀನತೆ ನಿಯಂತ್ರಣ, ಪೌಷ್ಠಿಕಾಂಶ ಹೀರಿಕೊಳ್ಳುವಿಕೆ ಸುಧಾರಣೆ, ಏಕಾಗ್ರತೆ ಹಾಗೂ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ. ಅಲ್ಲದೇ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಸುಧಾರಿಸಲು ನೆರವಾಗುತ್ತದೆ. ಪರಿಸರದಲ್ಲಿ ಜಂತುಹುಳುಗಳ ಪ್ರಮಾಣ ಕಡಿಮೆ ಮಾಡುವ ಮೂಲಕ ಸಮುದಾಯದ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಆದ್ದರಿಂದ ಎಲ್ಲಾ ಮಕ್ಕಳು ತಪ್ಪದೇ ಜಂತುನಿವಾರಕ ಮಾತ್ರೆ ಸೇವಿಸಬೇಕು ಎಂದರು.
ಜಂತುನಿವಾರಣಾ ಕಾರ್ಯಕ್ರಮವನ್ನು ವರ್ಷಕ್ಕೆ ಎರಡು ಬಾರಿ, ಆರು ತಿಂಗಳಿಗೊಮ್ಮೆ ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳು, ವಸತಿಶಾಲೆಗಳು, ಬಾಲಮಂದಿರಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಜಂತು ರಹಿತ ಪರಿಸರ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಅವರು ಕರೆ ನೀಡಿದರು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಪ್ರಕಾಶ್.ವಿ ಅವರು ಕಾರ್ಯಕ್ರಮದ ಗುರಿ ಮತ್ತು ಉದ್ದೇಶ ಕುರಿತು ಮಾಹಿತಿ ನೀಡಿ, 1 ರಿಂದ 2 ವರ್ಷದ ಮಕ್ಕಳಿಗೆ 200 ಮಿ.ಗ್ರಾಂ.ನ ಅರ್ಧ ಮಾತ್ರೆ ಹಾಗೂ 2 ವರ್ಷ ಮೇಲ್ಪಟ್ಟ ಮಕ್ಕಳಿಗೆ 400 ಮಿ.ಗ್ರಾಂ.ನ ಪೂರ್ಣ ಮಾತ್ರೆ ನೀಡಲಾಗುತ್ತದೆ. ಸಣ್ಣ ಮಕ್ಕಳಿಗೆ ಮಾತ್ರೆಯನ್ನು ನೀರಿನಲ್ಲಿ ಕರಗಿಸಿ ನಿಧಾನವಾಗಿ ಕುಡಿಸಬೇಕು ಎಂದು ತಿಳಿಸಿದರು.
ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಂಡುಬರುವ ಜಂತುಬಾಧೆ, ಅಪೌಷ್ಠಿಕತೆ ಹಾಗೂ ರಕ್ತಹೀನತೆ ತಡೆಗಟ್ಟುವುದು ಮತ್ತು ಅವರು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿ ಬೆಳೆಯಲು ನೆರವಾಗುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ವೈಯಕ್ತಿಕ ಸ್ವಚ್ಛತೆ ಕಾಪಾಡುವುದು, ಊಟ ಮಾಡುವ ಮೊದಲು ಹಾಗೂ ಶೌಚಾಲಯ ಬಳಕೆಯ ನಂತರ ಕಡ್ಡಾಯವಾಗಿ ಸಾಬೂನು ಬಳಸಿ ಕೈತೊಳೆಯುವ ಕುರಿತು ಅವರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರಾದ ದೇವರಾಜ ಕಿನ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ರಕ್ತಹೀನತೆ ತಡೆಗಟ್ಟಲು ಜಂತುನಿವಾರಣಾ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ. “ಜಂತು ರಹಿತ ಮಕ್ಕಳು ದೇಶದ ಸಂಪತ್ತು. ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ” ಎಂದು ತಿಳಿಸಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಿನ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವಿದ್ಯಾಶ್ರೀ, ಶಾಲಾ ಮುಖ್ಯೋಪಾಧ್ಯಾಯರಾದ ಪ್ರಕಾಶ ತಗಡಿನಮನಿ ಸೇರಿದಂತೆ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಉಪಾಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಆರ್.ಸಿ.ಹೆಚ್. ವಿಭಾಗದ ಸಿಬ್ಬಂದಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಸ.ಆ.ಅಧಿಕಾರಿ, ಪ್ರಾ.ಆ. ಸುರಕ್ಷಾಧಿಕಾರಿ, ಶಾಲಾ ಶಿಕ್ಷಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಇತರೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್