ಬಿಡದಿ ಟೌನ್ಶಿಪ್ ಭೂಸ್ವಾಧೀನ: ಅಂತಿಮ ಅಧಿಸೂಚನೆಗೆ ರೈತರ ಮನವಿ;ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಸಿಎಂ
ಬೆಂಗಳೂರು, 11 ಆಗಸ್ಟ್ (ಹಿ.ಸ.): ಆ್ಯಂಕರ್: ಬಿಡದಿ ಟೌನ್‌ಶಿಪ್‌ ಯೋಜನೆಗಾಗಿ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ, ವರ್ಷಗಳಿಂದ ರೆಡ್‌ಜೋನ್‌ ಸಮಸ್ಯೆ ಎದುರಿಸುತ್ತಿರುವ ರೈತರಿಗೆ ಮುಕ್ತಿ ಕಲ್ಪಿಸಬೇಕು ಎಂದು ಬಿಡದಿ ಸುತ್ತಮುತ್ತಲಿನ ರೈತರ ನಿಯ
ಮುಖ್ಯಮಂತ್ರಿ ಭೇಟಿ ಮಾಡಿದ ರೈತರ ನಿಯೋಗ


ಬೆಂಗಳೂರು, 11 ಆಗಸ್ಟ್ (ಹಿ.ಸ.):

ಆ್ಯಂಕರ್:

ಬಿಡದಿ ಟೌನ್‌ಶಿಪ್‌ ಯೋಜನೆಗಾಗಿ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ, ವರ್ಷಗಳಿಂದ ರೆಡ್‌ಜೋನ್‌ ಸಮಸ್ಯೆ ಎದುರಿಸುತ್ತಿರುವ ರೈತರಿಗೆ ಮುಕ್ತಿ ಕಲ್ಪಿಸಬೇಕು ಎಂದು ಬಿಡದಿ ಸುತ್ತಮುತ್ತಲಿನ ರೈತರ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿತು.

ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ರೈತರು, ರೆಡ್‌ಜೋನ್‌ನಿಂದಾಗಿ ಕೃಷಿ, ಆಸ್ತಿ ಮಾರಾಟ, ಸಾಲ ಪಡೆಯುವುದು ಹಾಗೂ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಬಿಡದಿ ಟೌನ್‌ಶಿಪ್‌ಗೆ ಭೂಮಿ ನೀಡಲು ತಾವು ಸಿದ್ಧರಿದ್ದು, ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಬೈರಮಂಗಲ ಗ್ರಾಮದ ರೈತ ಸುನೀಲ್‌ ಮಾತನಾಡಿ, ಕಳೆದ 20 ವರ್ಷಗಳಿಂದ ರೆಡ್‌ಜೋನ್‌ನಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದೇವೆ. ವೃಷಭಾವತಿ ಕೊಳಚೆ ನೀರಿನಿಂದ ಕೃಷಿಗೆ ತೊಂದರೆಯಾಗಿದ್ದು, ತೆಂಗಿನ ತೋಟಗಳು ಹಸಿರಾಗಿ ಕಾಣಿಸಿದರೂ ನಿರೀಕ್ಷಿತ ಇಳುವರಿ ಬರುತ್ತಿಲ್ಲ. ಜಾನುವಾರುಗಳ ಹಾಲು ಕೂಡ ಕಲುಷಿತವಾಗುತ್ತಿದೆ ಎಂದು ಆರೋಪಿಸಿದರು.

ರೆಡ್‌ಜೋನ್‌ ಕಾರಣದಿಂದ ಆಸ್ಪತ್ರೆ, ಕಲ್ಯಾಣಮಂಟಪ ಸೇರಿದಂತೆ ಅಗತ್ಯ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಜಮೀನಿನ ಮೇಲೆ ಬ್ಯಾಂಕ್‌ ಸಾಲ ಪಡೆಯುವುದೂ ಕಷ್ಟವಾಗಿದೆ. ನೆರೆಯ ಪ್ರದೇಶಗಳಲ್ಲಿ ಜಮೀನಿಗೆ ದೊಡ್ಡ ಮೊತ್ತದ ಸಾಲ ಸಿಗುತ್ತಿದ್ದರೆ, ತಮ್ಮ ಜಮೀನಿಗೆ ಅಲ್ಪ ಮೊತ್ತದ ಸಾಲವೂ ದೊರೆಯುತ್ತಿಲ್ಲ ಎಂದು ಅಳಲು ತೋಡಿಕೊಂಡರು.

“ನಮಗೆ ಹಣವಷ್ಟೇ ಬೇಕಿಲ್ಲ. ಯೋಜನೆಯಡಿ ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ಪಾಲು ನೀಡಿ, ಯೋಜನೆಯ ಪಾಲುದಾರರನ್ನಾಗಿ ಮಾಡಬೇಕು” ಎಂದು ರೈತರು ಮನವಿ ಮಾಡಿದರು.

ಇದೇ ವೇಳೆ ತಾವು ಜೆಡಿಎಸ್‌ ಕಾರ್ಯಕರ್ತರಾಗಿದ್ದರೂ ಅಭಿವೃದ್ಧಿಯ ವಿಚಾರದಲ್ಲಿ ಪಕ್ಷಕ್ಕಿಂತ ರೈತರ ಹಿತವೇ ಮುಖ್ಯ ಎಂದು ಕೆಲ ರೈತರು ಹೇಳಿದರು. ಬಿಡದಿ ಟೌನ್‌ಶಿಪ್‌ ಯೋಜನೆಗೆ ತಮ್ಮ ಭಾಗದ ಬಹುತೇಕ ರೈತರು ಭೂಮಿ ನೀಡಲು ಸಿದ್ಧರಿದ್ದಾರೆ. ಯೋಜನೆ ವಿರೋಧಿಸಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಸ್ಥಳೀಯ ರೈತರಿಗಿಂತ ಹೊರಗಿನ ಪ್ರದೇಶಗಳಿಂದ ಕರೆತರಲಾದ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಆರೋಪಿಸಿದರು.

ಹಿರಿಯ ನಾಗರಿಕ ಯಾಲಕ್ಕಿಗೌಡ, ಕಳೆದ ಎರಡು ದಶಕಗಳಿಂದ ರೆಡ್‌ಜೋನ್‌ ಸಮಸ್ಯೆಯಿಂದ ಮುಕ್ತಿ ನೀಡುವಂತೆ ಮನವಿ ಮಾಡಿದ್ದರೂ ಹಿಂದಿನ ಸರ್ಕಾರದಿಂದ ಸ್ಪಂದನೆ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈಗ ಸರ್ಕಾರ ಸಮಸ್ಯೆ ಬಗೆಹರಿಸಲು ಮುಂದಾಗಿದ್ದು, ಯೋಜನೆಗೆ ವಿರೋಧ ವ್ಯಕ್ತಪಡಿಸುವ ಬದಲು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಹೇಳಿದರು.

ಯುವ ರೈತ ಹರೀಶ್‌ ರೆಡ್ಡಿ ಮಾತನಾಡಿ, ಬಿಡದಿ ಪ್ರದೇಶ ಬೆಂಗಳೂರು ಸುತ್ತಮುತ್ತಲಿನ ಇತರ ಪ್ರದೇಶಗಳಂತೆ ಅಭಿವೃದ್ಧಿಯಾಗದೆ ಹಿಂದೆ ಉಳಿದಿದೆ. ರೆಡ್‌ಜೋನ್‌ ಸಮಸ್ಯೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಡದಿ ಟೌನ್‌ಶಿಪ್‌ ಯೋಜನೆ ಅಭಿವೃದ್ಧಿಗೆ ಅವಕಾಶ ಕಲ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.

ರೈತರ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಅಂತಿಮ ಅಧಿಸೂಚನೆ ಬಾಕಿ ಇರುವ ಗ್ರಾಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

“ಬಿಡದಿಯ ನೂರಾರು ರೈತರು ನನ್ನನ್ನು ಭೇಟಿ ಮಾಡಿ ಭೂಮಿ ನೀಡಲು ಸಿದ್ಧವಿದ್ದೇವೆ ಎಂದು ತಿಳಿಸಿದ್ದಾರೆ. ಕೆಲವರು ಹಣದ ರೂಪದಲ್ಲಿ ಹಾಗೂ ಕೆಲವರು ಭೂಮಿಯ ರೂಪದಲ್ಲಿ ಪರಿಹಾರ ಪಡೆಯಲು ಸಿದ್ಧರಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಬಾಕಿ ಇರುವ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಸ್ವಇಚ್ಛೆಯಿಂದ ಜಮೀನು ನೀಡುವವರಿಂದ ಮಾತ್ರ ಭೂಮಿ ಪಡೆಯಲಾಗುವುದು. ಯಾರಿಗೂ ಬಲವಂತ ಮಾಡುವುದಿಲ್ಲ” ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

‘ಜೆಡಿಎಸ್‌ ದಿನವೂ ಪಾದಯಾತ್ರೆ ಮಾಡಲಿ’

ಬಿಡದಿ ಟೌನ್‌ಶಿಪ್‌ ವಿರೋಧಿಸಿ ನಡೆಯುತ್ತಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಪಾದಯಾತ್ರೆಯಲ್ಲಿ ಕೆಲವೇ ಸ್ಥಳೀಯ ರೈತರಿದ್ದು, ಮಂಡ್ಯ, ಮೈಸೂರು, ತುಮಕೂರು ಸೇರಿದಂತೆ ಬೇರೆ ಕ್ಷೇತ್ರಗಳಿಂದ ಜನರನ್ನು ಕರೆತರಲಾಗಿದೆ ಎಂದು ಆರೋಪಿಸಿದರು.

“ರಾಜಕೀಯಕ್ಕಾಗಿ ಹೋರಾಟ ಮಾಡುವವರನ್ನು ತಡೆಯಲು ಸಾಧ್ಯವಿಲ್ಲ. ಅವರು ದಿನವೂ ಪಾದಯಾತ್ರೆ ಮಾಡಲಿ. ಎಷ್ಟು ಬೇಕಾದರೂ ನಡೆಯಲಿ. ಅವರನ್ನು ತಡೆಯಬೇಡಿ ಎಂದು ಪೊಲೀಸರಿಗೆ ಸೂಚಿಸಿದ್ದೇನೆ” ಎಂದು ಹೇಳಿದರು.

ಹಿಂದಿನ ಭೂಸ್ವಾಧೀನದ ಬಗ್ಗೆ ಪ್ರಶ್ನೆ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಈಗಲೂ ರೈತರು ಭೂಮಿ ನೀಡಲು ಸಿದ್ಧರಿದ್ದು ಸೂಕ್ತ ಪರಿಹಾರ ಕೇಳುತ್ತಿದ್ದಾರೆ ಎಂದರು.

ಬಿಜೆಪಿ ಆಡಳಿತದ ಅವಧಿಯಲ್ಲಿ ಸುಮಾರು 1,000 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಾಗ ರೈತರಿಗೆ 80ರಿಂದ 90 ಲಕ್ಷ ರೂ.ವರೆಗೆ ಪರಿಹಾರ ನೀಡಲಾಗಿತ್ತು. ಆಗ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಏಕೆ ಹೋರಾಟ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಈ ಎಲ್ಲ ವಿಚಾರಗಳನ್ನು ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಲಿ ಎಂದು ಸವಾಲು ಹಾಕಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande