
ಬೆಂಗಳೂರು, 11 ಆಗಸ್ಟ್ (ಹಿ.ಸ.):
ಆ್ಯಂಕರ್:
ಅಸಹಾಯಕ ಹಿರಿಯ ನಾಗರಿಕರು, ವಿಧವೆಯರು ಹಾಗೂ ವಿಕಲಚೇತನರಿಗೆ ನೀಡಲಾಗುತ್ತಿದ್ದ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಸರ್ಕಾರ ತಡೆಹಿಡಿದಿದೆ ಎಂದು ಆರೋಪಿಸಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅಶೋಕ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿ ಇದೀಗ ಬಡವರು ಮತ್ತು ವೃದ್ಧರ ಜೀವನೋಪಾಯದ ಪಿಂಚಣಿಗೂ ಕತ್ತರಿ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಪಿಂಚಣಿ ಪಡೆಯುತ್ತಿದ್ದ 17.97 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ದಾಖಲೆ ಸಲ್ಲಿಸಿಲ್ಲ ಎಂಬ ಕಾರಣ ನೀಡಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಾವಿರಾರು ಹಿರಿಯ ನಾಗರಿಕರಿಗೆ ಯಾವುದೇ ಮುನ್ಸೂಚನೆ ಅಥವಾ ಸಂದೇಶ ನೀಡದೆ ಪಿಂಚಣಿ ತಡೆಹಿಡಿಯಲಾಗಿದೆ. 70-80 ವರ್ಷ ವಯಸ್ಸಿನ ವೃದ್ಧರನ್ನು ವರ್ಗಾವಣೆ ಪ್ರಮಾಣಪತ್ರ, ಅಂಕಪಟ್ಟಿ ಹಾಗೂ ನೋಟರಿ ಪ್ರಮಾಣಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ತರಲು ಹೇಳಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸಲಾಗುತ್ತಿದೆ ಎಂದು ಅಶೋಕ ದೂರಿದ್ದಾರೆ.
ನಿಯಮಿತವಾಗಿ ಪಿಂಚಣಿ ಪಡೆಯುತ್ತಿದ್ದ ಅರ್ಹ ಫಲಾನುಭವಿಗಳಿಗೆ ಕಳೆದ ಎರಡು-ಮೂರು ತಿಂಗಳಿಂದ ಹಣ ಪಾವತಿಯಾಗಿಲ್ಲ. ಇದರಿಂದ ಔಷಧಿ ಹಾಗೂ ದಿನನಿತ್ಯದ ಅಗತ್ಯಗಳಿಗೆ ಹಣವಿಲ್ಲದೆ ಹಿರಿಯ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ದೆಹಲಿ ಪ್ರವಾಸ, ಸಭೆಗಳು, ಸಮಾವೇಶಗಳು, ಪೋಸ್ಟರ್‌ಗಳು ಹಾಗೂ ಜಾಹೀರಾತುಗಳಿಗೆ ಹಣ ಖರ್ಚು ಮಾಡುವ ಸರ್ಕಾರ, ಜೀವನದ ಸಂಧ್ಯಾಕಾಲದಲ್ಲಿರುವ ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ನೀಡಲು ಹಿಂದೇಟು ಹಾಕುತ್ತಿದೆ ಎಂದು ಅಶೋಕ ಟೀಕಿಸಿದ್ದಾರೆ.
ಅರ್ಹ ಹಿರಿಯ ನಾಗರಿಕರ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಬೇಕು, ದಾಖಲೆ ಪರಿಶೀಲನೆಯ ಹೆಸರಿನಲ್ಲಿ ವೃದ್ಧರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವುದನ್ನು ನಿಲ್ಲಿಸಬೇಕು ಹಾಗೂ ಬಾಕಿ ಇರುವ ಎಲ್ಲ ಪಿಂಚಣಿ ಹಣವನ್ನು ಫಲಾನುಭವಿಗಳ ಖಾತೆಗೆ ತಕ್ಷಣ ಜಮೆ ಮಾಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.